Aadhaar 
ಸುದ್ದಿಗಳು

ಆಧಾರ್ ಮಾತ್ರವಲ್ಲ ಬೇರೆ ದಾಖಲೆಗಳೂ ನಕಲಾಗಬಹುದು: ಇಸಿಐಗೆ ನೀಡಿದ್ದ ಆದೇಶ ಮಾರ್ಪಾಡಿಗೆ ಸುಪ್ರೀಂ ನಕಾರ

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಸೇರ್ಪಡೆಗೆ ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಹೇಳುವ ಔಪಚಾರಿಕ ಪ್ರಕಟಣೆ ಹೊರಡಿಸುವಂತೆ ಸೆಪ್ಟೆಂಬರ್ 8ರಂದು ನ್ಯಾಯಾಲಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

Bar & Bench

ಬಿಹಾರದಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಸಿದ್ಧಪಡಿಸಲಾಗುತ್ತಿರುವ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಸೇರಿಸಲು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಹೇಳುವ ಔಪಚಾರಿಕ ಪ್ರಕಟಣೆ ಹೊರಡಿಸುವಂತೆ ಚುನಾವಣಾ ಆಯೋಗಕ್ಕೆ ಸೆ. 8ರಂದು ನೀಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಸರ್ವೋಚ್ಚ ನ್ಯಾಯಾಲಯ ಇಸಿಐಗೆ ನೀಡಿದ್ದ ನಿರ್ದೇಶನ ಕೇವಲ ಮಧ್ಯಂತರ ಸ್ವರೂಪದ್ದಾಗಿದ್ದು ಎಸ್‌ಐಆರ್‌ಗೆ ಸಂಬಂಧಿಸಿದ ವಿಷಯದಲ್ಲಿ ಪುರಾವೆಯಾಗಿ ದಾಖಲೆಯ ಸಿಂಧುತ್ವದ ವಿಚಾರ ಇನ್ನೂ ಇತ್ಯರ್ಥವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.

ಪಡಿತರ ಚೀಟಿಗಳು ಮತ್ತು ಚಾಲನಾ ಪರವಾನಗಿಯಂತಹ ಬೇರೆ ದಾಖಲೆಗಳು ಕೂಡ ಆಧಾರ್‌ನಂತೆಯೇ ನಕಲಿಯಾಗುವ ಸಾಧ್ಯತೆ ಇದ್ದು, ಆಧಾರ್  ಕಾರ್ಡನ್ನಷ್ಟೇ ಪ್ರತ್ಯೇಕಿಸಿ ಗುರುತಿನ ಚೀಟಿಯಾಗಿ ಬಳಸದಂತೆ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ.

ಆಧಾರ್ ಅನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗದು ಮತ್ತು ಭಾರತೀಯ ಚುನಾವಣಾ ಆಯೋಗ ಸ್ವೀಕರಿಸಿದ ಬೇರೆ ದಾಖಲೆಗಳೊಂದಿಗೆ ಅದನ್ನು ಸಮೀಕರಿಸಲಾಗದು ಎಂಬ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನವನ್ನು ಮಾರ್ಪಡಿಸಲು ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಕೋರಿದ ನಂತರ ನ್ಯಾಯಾಲಯ  ಈ ವಿಚಾರ ತಿಳಿಸಿತು.

ವಿದೇಶಿಯರಿಗೂ ಆಧಾರ್‌ ನೀಡಲಾಗುತ್ತಿದ್ದು ಸೆ. 8ರ ಆದೇಶವನ್ನು ಬದಲಿಸಬೇಕು. ಇಲ್ಲದಿದ್ದರೆ ಅನಾಹುತವಾಗಲಿದೆ ಎಂದು ಉಪಾಧ್ಯಾಯ ವಾದಿಸಿದರು.

ಅನಾಹುತವೋ, ಅಲ್ಲವೋ ಎಂಬ ವಿಚಾರವನ್ನು ಇಸಿಐ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದ ನ್ಯಾಯಾಲಯ. ವಿಷಯವನ್ನು ಮುಕ್ತವಾಗಿರಿಸಿರುವುದಾಗಿ ತಿಳಿಸಿತು.

"ನಾವು ಈ ವಿಚಾರವನ್ನು ಮುಕ್ತವಾಗಿರಿಸುತ್ತಿದ್ದೇವೆ. ತಿರಸ್ಕರಿಸುತ್ತಲೂ ಇಲ್ಲ ಅಥವಾ ಪುರಸ್ಕರಿಸುತ್ತಲೂ ಇಲ್ಲ” ಎಂದು ನ್ಯಾಯಾಲಯ ನುಡಿಯಿತು.

ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣನ್, ಅಭಿಷೇಕ್‌ ಮನು ಸಿಂಘ್ವಿ, ವಕೀಲ ಪ್ರಶಾಂತ್‌ ಭೂಷಣ್ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 7ರಂದು ನಡೆಯಲಿದೆ.