
ಬಿಹಾರದಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ಭಾಗವಾಗಿ ಸಿದ್ಧಪಡಿಸಲಾಗುತ್ತಿರುವ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಸೇರಿಸಲು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಹೇಳುವ ಔಪಚಾರಿಕ ಪ್ರಕಟಣೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ.
ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾದ 65 ಲಕ್ಷ ಹೆಸರುಗಳಿಗೆ ಸಂಬಂಧಿಸಿದಂತೆ ಮಾತ್ರ ಈ ರೀತಿಯ ನಿರ್ದೇಶನವನ್ನು ಈ ಹಿಂದೆ ನೀಡಲಾಗಿತ್ತು . ಈಗ ಈ ನಿರ್ದೇಶನವನ್ನು ಉಳಿದ ಮತದಾರರಿಗೂ ವಿಸ್ತರಿಸಲಾಗಿದೆ.
ಬಿಹಾರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಚುನಾವಣಾ ಆಯೋಗ ಉಲ್ಲೇಖಿಸಿರುವ ಹನ್ನೊಂದು ಇತರ ಗುರುತಿನ ಚೀಟಿಗಳ ಜೊತೆಗೆ, ಆಧಾರ್ ಹನ್ನೆರಡನೇ ಗುರುತಿನ ಚೀಟಿ ಪುರಾವೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಆಧಾರ್ ಕೇವಲ ನಿವಾಸದ ಪುರಾವೆಯಾಗಿದೆಯೇ ಹೊರತು ಪೌರತ್ವದ ಪುರಾವೆಯಲ್ಲ. ಅದನ್ನು ಎಲ್ಲಾ ಪಕ್ಷಕಾರರು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸಲ್ಲಿಸಲಾಗುತ್ತಿರುವ ಆಧಾರ್ ಕಾರ್ಡ್‌ಗಳ ನೈಜತೆಯನ್ನು ಪರೀಕ್ಷಿಸಲು ಮತ್ತು ಅವುಗಳು ನಕಲಿ ಅಲ್ಲ ಎಂದು ಖಚಿತಪಡಿಸಿಕೊಳ್ಳಲು ಇಸಿಐಗೆ ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆಗಸ್ಟ್ 22 ರಂದು , ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಜನರು ಮತದಾರರ ಪಟ್ಟಿಯಲ್ಲಿ ತಮ್ಮನ್ನು ಸೇರಿಸಿಕೊಳ್ಳಲು ತಮ್ಮ ಆಧಾರ್ ಕಾರ್ಡ್‌ಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು ಎಂದು ನ್ಯಾಯಾಲಯ ಹೇಳಿತ್ತು. ಇದಕ್ಕೂ ಮೊದಲು, ಈ ಉದ್ದೇಶಕ್ಕಾಗಿ ಹನ್ನೊಂದು ಇತರ ಗುರುತಿನ ದಾಖಲೆಗಳಲ್ಲಿ ಯಾವುದನ್ನಾದರೂ ಸ್ವೀಕರಿಸುವುದಾಗಿ ಚುನಾವಣಾ ಆಯೋಗ ಹೇಳಿತ್ತು.
ಇಂದು ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು , ಬೂತ್ ಮಟ್ಟದ ಪ್ರತಿನಿಧಿಗಳು (ಬಿಎಲ್‌ಒಗಳು) ನಿವಾಸದ ಪುರಾವೆಯಾಗಿ ಆಧಾರ್ ಕಾರ್ಡ್‌ಗಳನ್ನು ನೀಡಿದರೂ ಹೊರಗಿಡಲಾದ ಮತದಾರರು ಪಟ್ಟಿಗೆ ಹೆಸರು ಸೇರಿಸುವಂತೆ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸದೆ ನ್ಯಾಯಾಲಯ ನಿಂದನೆ ಮಾಡುತ್ತಿದ್ದಾರೆ ಎಂದರು.ಮುಂದುವರೆದು, "ಬಿಹಾರ ಚುನಾವಣೆ ಸಮೀಪಿಸುತ್ತಿರುವುದರಿಂದ ಆಧಾರ್ ಒಪ್ಪಿತವೇ ಅಲ್ಲವೇ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕು ಎಂದರು.
ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಆಧಾರ್ ನಿವಾಸದ ಪುರಾವೆಯಾಗಿರುತ್ತದೆ. ಪೌರತ್ವದ ಪುರಾವೆಯಲ್ಲ. ಪೌರತ್ವವನ್ನು ಹೇಗೂ ಬೂತ್ ಮಟ್ಟದ ಏಜೆಂಟರು ನಿರ್ಧರಿಸಲಾಗದು, ಅದನ್ನು ನಿರ್ಧರಿಸಿರುವುದು ಕೇಂದ್ರ ಸರ್ಕಾರ. ಆಧಾರ್ ಅನ್ನು ನಿವಾಸದ ಪುರಾವೆಯಾಗಿ ಬಳಸುವ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. 11 ದಾಖಲೆಗಳು ಮತ್ತು ಆಧಾರ್ ಇದನ್ನಷ್ಟೇ ನಾವು ಯಾಚಿಸುತ್ತಿರುವುದು, ಇದಕ್ಕಿಂತ ಹೆಚ್ಚೇನೂ ಅಲ್ಲ" ಎಂದರು.
ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಸಿಬಲ್ ಅವರ ವಾದವನ್ನು ಬಲವಾಗಿ ವಿರೋಧಿಸಿದರು. ಆಧಾರ್ ಗುರುತಿನ ಚೀಟಿಯನ್ನು ಸಲ್ಲಿಸುವುದಕ್ಕೆ ಚುನಾವಣಾ ಆಯೋಗ ವಿರೋಧ ವ್ಯಕ್ತಪಡಿಸಿಲ್ಲ ಎಂದರು.
"ನಾವು ಈ ಬಗ್ಗೆ (ಆಧಾರ್ ಒಳಗೊಳ್ಳುವುದು) ಜಾಹೀರಾತು ನೀಡಿದ್ದೇವೆ. ಈ ಕುರಿತು ಬೇಕಾದರೆ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುತ್ತೇವೆ. ಆಧಾರ್‌ಅನ್ನು ಡಿಜಿಟಲ್ ರೀತ್ಯಾ ಅಪ್‌ಲೋಡ್ ಮಾಡಬಹುದು... ಒಂದು ವಿಷಯವೆಂದರೆ, ಆಧಾರ್ ಅನ್ನು ಪೌರತ್ವದ ಪುರಾವೆಯಾಗಿ ನಾವು ಪರಿಗಣಿಸುತ್ತಿಲ್ಲ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಸಲುವಾಗಿ ಚುನಾವಣಾ ಆಯೋಗವು ಓರ್ವ ವ್ಯಕ್ತಿಯು ದೇಶದ ನಾಗರಿಕನೇ ಅಲ್ಲವೇ (ಪೌರತ್ವ) ಎನ್ನುವುದನ್ನು ನಿರ್ಧರಿಸುವ ಅಧಿಕಾರ ಹೊಂದಿಲ್ಲ ಎನ್ನುವ ಆಕ್ಷೇಪಣೆಯನ್ನು ನಾವು ಒಪ್ಪವುದಿಲ್ಲ," ಎಂದು ದ್ವಿವೇದಿ ಹೇಳಿದರು.
ಆದರೆ ಶೋಕಾಸ್ ನೋಟಿಸ್‌ನಲ್ಲಿ ಚುನಾವಣಾ ಆಯೋಗ ಹನ್ನೊಂದು ದಾಖಲೆಗಳನ್ನಷ್ಟೇ ಗುರುತಿನ ಪುರಾವೆಯಾಗಿ ಸ್ವೀಕರಿಸುತ್ತಿರುವುದಾಗಿ ಹೇಳಿತ್ತು ಎಂಬುದನ್ನು ನ್ಯಾಯಾಲಯ ನೆನಪಿಸಿತು. ಆಧಾರ್ ಸಲ್ಲಿಸುವುದಕ್ಕೆ ತಡೆ ನೀಡಿಲ್ಲ. ಆಧಾರ್ ಕೂಡ ಮಾನ್ಯ ಎಂದು ಉಲ್ಲೇಖಿಸದೆ ಇರುವ ಸಂಬಂಧ ಯಾರಿಂದಾದರೂ ಲೋಪವಾಗಿದ್ದರೆ ಪತ್ತೆ ಹಚ್ಚುವುದಾಗಿ ದ್ವಿವೇದಿ ಉತ್ತರಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಚುನಾವಣಾ ಆಯೋಗವನ್ನು ಉದ್ದೇಶಿಸಿ ನ್ಯಾಯಾಲಯವು, "ಎಸ್‌ಐಆರ್ ಹನ್ನೊಂದು ದಾಖಲೆಗಳನ್ನು ಸೂಚಿಸುತ್ತದೆ. ಆದರೆ, ಇದರಲ್ಲಿ, ಪಾಸ್‌ಪೋರ್ಟ್ ಮತ್ತು ಜನನ ಪ್ರಮಾಣಪತ್ರ ಹೊರತು ಪಡಿಸಿದರೆ ನಾಗರಿತ್ವವನ್ನು ಬೇರಾವ ದಾಖಲೆಗಳೂ ನಿರ್ಣಾಯಕವಾಗಿ ನಿರ್ಧರಿಸುವುದಿಲ್ಲ," ಎಂದು ಅವಲೋಕನ ಮಾಡಿತು.
ವಿಚಾರಣೆಯ ವೇಳೆ ವಿದೇಶಿಗರು ನಕಲಿ ಆಧಾರ್ ಕಾರ್ಡ್ ಬಳಸುತ್ತಿದ್ದಾರೆ ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಕಳವಳ ವ್ಯಕ್ತಪಡಿಸಿದರು.
ಭಾರತದಲ್ಲಿ ಚುನಾವಣೆಗಳನ್ನು ನಡೆಸುವುದನ್ನು ನಿಯಂತ್ರಿಸುವ 1951 ರ ಜನ ಪ್ರತಿನಿಧಿ ಕಾಯಿದೆಯಲ್ಲಿ ಆಧಾರ್ ಅನ್ನು ಉಲ್ಲೇಖಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು. ಹಿರಿಯ ವಕೀಲೆ ವೃಂದಾ ಗ್ರೋವರ್ ಕೂಡ ವಾದ ಮಂಡಿಸಿದರು.