Srinivas BV and Gauhati HC  
ಸುದ್ದಿಗಳು

ಸ್ತ್ರೀ ಘನತೆಗೆ ಧಕ್ಕೆ: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್‌ಗೆ ಮಧ್ಯಂತರ ಪರಿಹಾರ ನಿರಾಕರಿಸಿದ ಗುವಾಹಟಿ ಹೈಕೋರ್ಟ್

ಕೇಸ್ ಡೈರಿ ಮತ್ತು ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲಿಸಿದ ನಂತರವೇ ಶ್ರೀನಿವಾಸ್ ಅವರಿಗೆ ಮಧ್ಯಂತರ ಪರಿಹಾರ ನೀಡುವ ಕುರಿತು ನಿರ್ಧರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಅಸ್ಸಾಂ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆಯ ಘನತೆಗೆ ಧಕ್ಕೆ ತಂದ ಆರೋಪದಡಿ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶಿವಮೊಗ್ಗದ ಶ್ರೀನಿವಾಸ್‌ ಬಿ ವಿ ಅವರಿಗೆ ಪರಿಹಾರ ನೀಡಲು ಗುವಾಹಟಿ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ದಾಖಲಾದ ಕೇಸ್‌ ಡೈರಿ ಮತ್ತು ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲಿಸಿದ ನಂತರವೇ ಶ್ರೀನಿವಾಸ್‌ ಅವರಿಗೆ ಮಧ್ಯಂತರ ಪರಿಹಾರ ನೀಡುವ ಕುರಿತು ನಿರ್ಧರಿಸಬಹುದು ಎಂದು ನ್ಯಾಯಮೂರ್ತಿ ಅಜಿತ್ ಬೋರ್ತಕೂರ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

“ಅರ್ಜಿದಾರರ ಮಧ್ಯಂತರ ಮನವಿ ಕುರಿತಂತೆ ನ್ಯಾಯಯುತ ತೀರ್ಪು ನೀಡಲು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿಯಲ್ಲಿ ಸಂತ್ರಸ್ತ ಮಹಿಳೆಯ ಹೇಳಿಕೆ ಸೇರಿದಂತೆ ಕೇಸ್‌ ಡೈರಿ ಪರಿಶೀಲಿಸುವುದು ಅತ್ಯಗತ್ಯ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಕೇಸ್‌ ಡೈರಿಯ ಸ್ಕ್ಯಾನ್‌ ಮಾಡಿದ ಪ್ರತಿಯನ್ನು ಸ್ವೀಕರಿಸಿದ ಮತ್ತು ಸಂತ್ರಸ್ತೆಗೆ ನೋಟಿಸ್‌ ನೀಡಿದ ಬಳಿಕವಷ್ಟೇ  ಮಧ್ಯಂತರ ಮನವಿಯನ್ನು ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ನುಡಿದಿದೆ.

ಶ್ರೀನಿವಾಸ್‌ ತಮಗೆ ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತ್ರಸ್ತೆಯು ಶ್ರೀನಿವಾಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಶ್ರೀನಿವಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ಮಾರ್ಚ್ 25 ರಂದು ರಾಯ್‌ಪುರದ ಮೇಫೇರ್ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನದ ವೇಳೆ, ಶ್ರೀನಿವಾಸ್ ತನ್ನ ತೋಳುಗಳನ್ನು ಹಿಡಿದಿದ್ದರು ಮತ್ತು ಹೋಟೆಲ್‌ ಪ್ರವೇಶದ್ವಾರದ ಬಳಿ ಥಳಿಸಿ ಅಶ್ಲೀಲ ಪದ ಬಳಸಿ ಬೆದರಿಕೆ ಹಾಕಿದ್ದರು ಎಂದು ಆಕೆ ಆರೋಪಿಸಿದ್ದರು.

ಶ್ರೀನಿವಾಸ್‌ ವರ್ತನೆ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಆಕೆಯ ಆರೋಪವಾಗಿತ್ತು.

ಆದರೆ, ರಾಜಕೀಯ ಕಾರಣಕ್ಕೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶ್ರೀನಿವಾಸ್ ಪೀಠಕ್ಕೆ ತಿಳಿಸಿದ್ದಾರೆ. ದೂರಿನ ತನಿಖೆ ನಡೆಸುವ ಅಧಿಕಾರಿಗಳ ಮುಂದೆ ಖುದ್ದಾಗಿ ಹಾಜರಾಗುವಂತೆ ದಿಸ್ಪುರ ಪೊಲೀಸರು ನೀಡಿದ ನೋಟಿಸ್‌ಗಳಿಗೆ ತಡೆ ನೀಡುವಂತೆ ಅವರು ಮಧ್ಯಂತರ ಪರಿಹಾರ ಕೋರಿದ್ದರು.

ಆದರೆ ಪ್ರಕರಣದ ದಾಖಲೆಗಳನ್ನು ಅದರಲ್ಲಿಯೂ ಸಂತ್ರಸ್ತೆಯ ಹೇಳಿಕೆ ಪರಿಶೀಲಿಸದೆ ಪರಿಹಾರ ನೀಡಲು ಪೀಠ ಒಲವು ತೋರಲಿಲ್ಲ.ಶ್ರೀನಿವಾಸ್ ಪರ ಹಿರಿಯ ನ್ಯಾಯವಾದಿ ಕೆ ಎನ್ ಚೌಧರಿ ವಾದ ಮಂಡಿಸಿದ್ದರು. ಸರ್ಕಾರವನ್ನು ಅಡ್ವೊಕೇಟ್ ಜನರಲ್ ಡಿ ಸೈಕಿಯಾ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಎಂ ಫುಕನ್ ಪ್ರತಿನಿಧಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Srinivas_BV_vs_State_of_Assam.pdf
Preview