Supreme Court, CITIZENSHIP AMENDMENT ACT  
ಸುದ್ದಿಗಳು

ಸುದೀರ್ಘ 6 ವರ್ಷಗಳ ಕಾಯುವಿಕೆ ಬಳಿಕ ಮೇನಲ್ಲಿ ಆರಂಭವಾಗಲಿದೆ ಸಿಎಎ ವಿರುದ್ಧದ ಅರ್ಜಿಗಳ ವಿಚಾರಣೆ

2019ರಲ್ಲಿ ಅಂಕಿತ ಪಡೆದಿದ್ದ ವಿವಾದಾತ್ಮಕ ಸಿಎಎ ಕೇಂದ್ರ ಸರ್ಕಾರ 2024ರ ಮಾರ್ಚ್ 11ರಂದು ಹೊರಡಿಸಿದ ಅಧಿಸೂಚನೆಯ ಪರಿಣಾಮ ಜಾರಿಗೆ ಬಂದಿತ್ತು.

Bar & Bench

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಅದರ ನಿಯಮಾವಳಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಬರುವ ಮೇ ತಿಂಗಳಿನಲ್ಲಿ ಆಲಿಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ.

ವಕೀಲರು ತಮ್ಮ ವಾದಗಳನ್ನು ಮಂಡಿಸಲು ಎಷ್ಟು ಸಮಯ ಬೇಕು ಎಂದು ಸಿಜೆಐ ಸೂರ್ಯಕಾಂತ್‌ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠ ಪ್ರಶ್ನಿಸಿತು.

ಸಿಎಎ ಪ್ರಶ್ನಿಸಿ ಎರಡು ರೀತಿಯ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದ ಪೀಠ, ಅಸ್ಸಾಂ ತ್ರಿಪುರದಲ್ಲಿನ ಪ್ರಕರಣಗಳು ಹಾಗೂ ದೇಶದ ಉಳಿದ ಭಾಗದ ಪ್ರಕರಣಗಳು ಎಂದು ಅವುಗಳನ್ನು ವರ್ಗೀಕರಿಸಬೇಕು. ನೇಮಕಗೊಂಡ ನೊಡಲ್ ವಕೀಲರು ಮೊದಲ ಹಾಗೂ ಎರಡನೇ ಗುಂಪಿಗೆ ಸೇರಿದ ಪ್ರಕರಣಗಳನ್ನು ಗುರುತಿಸಿ, ಎರಡು ವಾರಗಳೊಳಗೆ ರಿಜಿಸ್ಟ್ರಿಗೆ ಪಟ್ಟಿಯನ್ನು ಸಲ್ಲಿಸಬೇಕು. ನಂತರ ರಿಜಿಸ್ಟ್ರಿ ಅವುಗಳನ್ನು ಎರಡು ವರ್ಗಗಳಾಗಿ ವಿಭಜಿಸಿ, 2026ರ ಮೇ 5ರಿಂದ ಪ್ರಾರಂಭವಾಗುವ ವಾರದಲ್ಲಿ ಕ್ರಮವಾಗಿ ಅಂತಿಮ ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಪೀಠವು ಸೂಚಿಸಿತು.

ಮೇ 5ರಂದು ಅರ್ಜಿದಾರರ ವಾದವನ್ನು ಅರ್ಧದಿನ ಆಲಿಸಲಾಗುವುದು, ಮೇ 6ರಂದು ಮತ್ತೊಂದು ಅರ್ಧ ದಿನ ಅರ್ಜಿದಾರರ ವಾದಗಳಿಗೆ ಮೀಸಲು; ಮೇ 7ರಂದು ಪ್ರತಿವಾದಿಗಳಿಗೆ ಅರ್ಧ ದಿನ; ಮತ್ತು ಮೇ 12ರಂದು ಪ್ರತ್ಯುತ್ತರ ಆಲಿಸಲಾಗುತ್ತದೆ ಎಂದಿತು.

2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಅಂಗೀಕರಿಸಲಾದ ನಾಗರಿಕತ್ವ ತಿದ್ದುಪಡಿ ಕಾಯಿದೆ ವಿರುದ್ಧ ಒಟ್ಟು 243 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮರುದಿನವೇ ಅದಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿತ್ತು. ಅದೇ ದಿನ ಇಂಡಿಯನ್‌ ಯೂನಿಯನ್‌ ಮುಸ್ಲಿಮ್‌ ಲೀಗ್‌ ಸುಪ್ರೀಂ ಕೋರ್ಟ್‌ನಲ್ಲಿ ಕಾಯಿದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿತು. ಬಳಿಕ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು.

2014ರ ಡಿಸೆಂಬರ್ 31ರೊಳಗೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದು, ಜೈನ, ಕ್ರೈಸ್ತ, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯದವರಿಗೆ ಪೌರತ್ವ ನೀಡುವ ಉದ್ದೇಶದಿಂದ ಸಿಎಎ ಜಾರಿಗೆ ತರಲಾಗಿತ್ತು.

ಈ ಕಾಯಿದೆ 1955ರ ನಾಗರಿಕತ್ವ ಕಾಯ್ದೆಯ ಕಲಂ 2ರಲ್ಲಿ “ಅಕ್ರಮ ವಲಸಿಗರು” ಎಂಬ ವ್ಯಾಖ್ಯಾನವನ್ನು ತಿದ್ದುಪಡಿ ಮಾಡುತ್ತದೆ. ವಿಶೇಷವಾಗಿ, ಕಲಂ 2(1)(ಬಿ)ಗೆ ಹೊಸ ನಿಯಮ ಸೇರಿಸಲಾಗಿದೆ. ಅದರ ಪ್ರಕಾರ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಬಂದ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಅಥವಾ ಕ್ರೈಸ್ತ ಸಮುದಾಯದವರು, ಮತ್ತು ಕೇಂದ್ರ ಸರ್ಕಾರವು 1920ರ ಪಾಸ್‌ಪೋರ್ಟ್ (ಭಾರತ ಪ್ರವೇಶ) ಕಾಯಿದೆ ಅಥವಾ 1946ರ ವಿದೇಶಿ ನಾಗರಿಕರ ಕಾಯ್ದೆಯಡಿ ವಿನಾಯಿತಿ ಪಡೆದವರನ್ನು, “ಅಕ್ರಮ ವಲಸಿಗರು” ಎಂದು ಪರಿಗಣಿಸುವುದಿಲ್ಲ. ಹೀಗಾಗಿ, ಅವರು 1955ರ ಕಾಯಿದೆಯಡಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.

ಆದರೆ ಈ ನಿಯಮ ಮುಸ್ಲಿಂ ಸಮುದಾಯವನ್ನು ಸ್ಪಷ್ಟವಾಗಿ ಹೊರಗಿಟ್ಟಿತ್ತು. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುವ ಜೊತೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು.