A1
ಸುದ್ದಿಗಳು

ಪಿಎಸಿಎಲ್ ಹಗರಣ: ₹ 192 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡುವ ಇ ಡಿ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

ಸುಪ್ರೀಂ ಕೋರ್ಟ್‌ ಆದೇಶಗಳನ್ವಯ, ಹಗರಣಕ್ಕೆ ಸಂಬಂಧಿಸಿದ ʼಅಪರಾಧದ ಆದಾಯʼ ವಸೂಲಾತಿಯನ್ನು ಲೋಧಾ ಸಮಿತಿ ಪರಿಗಣಿಸಬೇಕಿದೆ ಎಂದು ನ್ಯಾ. ಯಶವಂತ್ ವರ್ಮಾ ಹೇಳಿದರು.

Bar & Bench

ಪಿಎಸಿಎಲ್ ಹಗರಣದಲ್ಲಿ ಸುಮಾರು ₹192 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಜಾರಿ ನಿರ್ದೇಶನಾಲಯದ (ಇ ಡಿ) ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.

ತಮ್ಮ ಮಧ್ಯಂತರ ಆದೇಶದಲ್ಲಿ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು “ಸುಪ್ರೀಂ ಕೋರ್ಟ್‌ನ ಆದೇಶಗಳ ಪ್ರಕಾರ, ಪಿಎಸಿಎಲ್‌ಗೆ ಸಂಬಂಧಿಸಿದ ʼಅಪರಾಧದ ಆದಾಯʼ ವಸೂಲಾತಿಯನ್ನು ಲೋಧಾ ಸಮಿತಿಯು ಪರಿಗಣಿಸಲಿದೆ. ಪಿಎಸಿಎಲ್ ಸಂಗ್ರಹಿಸಿದ ಹಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಸುಪ್ರೀಂಕೋರ್ಟ್‌ ರೂಪಿಸಿ ಜಾರಿಗೆ ತಂದ ವಿಶೇಷ ಕಾರ್ಯವಿಧಾನದ ಪ್ರಕಾರ ಪರಿಗಣಿಸಲಾಗುವುದು” ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ಜಾರಿಗೆ ತಂದಿರುವ ವಿಶೇಷ ಕಾರ್ಯವಿಧಾನವನ್ನು ಹಾಳುಗೆಡವುವ ಸಾಧ್ಯತೆ ಇರುವುದರಿಂದ ಜಾರಿ ನಿರ್ದೇಶನಾಲಯದ ಮುಟ್ಟುಗೋಲು ಆದೇಶವನ್ನು ಮನ್ನಿಸಲಾಗದು ಎಂದು ನ್ಯಾಯಾಲಯ ಹೇಳಿತು.

ಆದರೆ ಈಗ ನೀಡಿರುವ ಮಧ್ಯಂತರ ಆದೇಶ ಲೋಧಾ ಸಮಿತಿ ಅಥವಾ ನ್ಯಾಯಾಲಯದಿಂದ ನೇಮಕಗೊಂಡ ಅಧಿಕಾರಿಯನ್ನು ಸಂಪರ್ಕಿಸುವುದಕ್ಕೆ ಜಾರಿ ನಿರ್ದೇಶನಾಲಯಕ್ಕೆ ತಡೆ ನೀಡುವುದಿಲ್ಲ. ತನಿಖೆ ವೇಳೆ ತಾನು ಸಂಗ್ರಹಿಸಿದ ಯಾವುದೇ ಮಾಹಿತಿಯನ್ನು ಅವರ ಗಮನಕ್ಕೆ ತರಲು ಮತ್ತು ಮುಂದೆ ಸಮರ್ಥನೀಯ ರಕ್ಷಣಾತ್ಮಕ ಆದೇಶಗಳನ್ನು ಪಡೆಯುವುದನ್ನು ತಡೆಯುವುದಿಲ್ಲ ಎಂದು ಅದು ಹೇಳಿದೆ.

ಡಿಡಿಪಿಎಲ್ ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಮತ್ತು ರಿಯಲ್ ಎಸ್ಟೇಟ್ ಕಂಪನಿಯೊಂದರ ಆಸ್ತಿಯನ್ನು ಇ ಡಿ ಜಪ್ತಿ ಮಾಡಿರುವುದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.