Pahalgam 
ಸುದ್ದಿಗಳು

ಪಹಲ್ಗಾಮ್ ಉಗ್ರರ ದಾಳಿ: ಸೂಕ್ಷ್ಮ ಗಿರಿಧಾಮಗಳಿರುವ ರಾಜ್ಯಗಳಲ್ಲಿ ಹೆಚ್ಚಿನ ಭದ್ರತೆ ಕೋರಿ ಸುಪ್ರೀಂನಲ್ಲಿ ಪಿಐಎಲ್

ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯ ಸುರಕ್ಷತೆ ಮತ್ತು ಭದ್ರತೆಗಾಗಿ ನಿರ್ದೇಶನ ನೀಡುವಂತೆಯೂ ಅರ್ಜಿದಾರರು ಕೋರಿದ್ದಾರೆ.

Bar & Bench

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.

ಗಿರಿಧಾಮಗಳಿರುವ ರಾಜ್ಯಗಳು ಮತ್ತು ದೂರದ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ರಕ್ಷಣೆಗಾಗಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಸಶಸ್ತ್ರ ಪಡೆ ನಿಯೋಜಿಸುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅರ್ಜಿ ಸಲ್ಲಿಸಿದ್ದಾರೆ.

ಪ್ರವಾಸಿ ಸ್ಥಳಗಳಲ್ಲಿ, ಅದರಲ್ಲಿಯೂ ದೂರದ ಗಿರಿಧಾಮ ಮತ್ತು ಕಣಿವೆ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ವೇಳೆ ವೈದ್ಯಕೀಯ ನೆರವು ನೀಡುವುದಕ್ಕಾಗಿ ಸರಿಯಾದ ವೈದ್ಯಕೀಯ ಸೌಲಭ್ಯ ಕಲ್ಪಿಸಲು ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.   

ಉತ್ತರ ಭಾರತದ ಹೆಚ್ಚಿನ ರಾಜ್ಯಗಳ ಆರ್ಥಿಕತೆ ಮುಖ್ಯವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದ್ದು ಭಯೋತ್ಪಾದಕ ದಾಳಿಗಳು ಈ ಕ್ಷೇತ್ರದ ಆರ್ಥಿಕತೆಯನ್ನು ಕಡಿಮೆ ಮಾಡಬಹುದು. ಪಹಲ್ಗಾಮ್‌ ದಾಳಿಯು ಸೂಕ್ಷ್ಮ ಪ್ರದೇಶವಾಗಿದ್ದರೂ ಸಹ, ಅಲ್ಲಿ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂಬುದು ಬಹಿರಂಗವಾಗಿದೆ. ಸಶಸ್ತ್ರ ಭದ್ರತೆ ಇದ್ದಲ್ಲಿ ಮಾತ್ರ ಪ್ರವಾಸಿಗರನ್ನು ಭಯೋತ್ಪಾದಕ ದಾಳಿಯಿಂದ ರಕ್ಷಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯ ಸುರಕ್ಷತೆ ಮತ್ತು ಭದ್ರತೆಗಾಗಿ ನಿರ್ದೇಶನ ನೀಡುವಂತೆಯೂ ಅರ್ಜಿದಾರರು ಕೋರಿದ್ದಾರೆ.