ಭಯೋತ್ಪಾದನೆ ಅಪರಾಧಿ ಯಾಸೀನ್ ಮಲಿಕ್ ವಿರುದ್ಧ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಕುರಿತು ಜಮ್ಮು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದು ಈ ಪ್ರಕರಣಗಳಲ್ಲಿ ಭೌತಿಕವಾಗಿ ಪಾಟಿ ಸವಾಲು ನಡೆಸಲು ಜೈಲಿನಲ್ಲಿ ತಾತ್ಕಾಲಿಕ ನ್ಯಾಯಾಲಯ ಸ್ಥಾಪಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಸಲಹೆ ನೀಡಿದೆ [ಸಿಬಿಐ ಮತ್ತು ಮೊಹಮ್ಮದ್ ಯಾಸೀನ್ ಮಲಿಕ್ ನಡುವಣ ಪ್ರಕರಣ].
ಯಾಸೀನ್ ಖುದ್ದು ಹಾಜರಿರಬೇಕೆಂದು ಜಮ್ಮುವಿನ ನ್ಯಾಯಾಲಯ ಸೂಚಿಸಿತ್ತಾದರೂ ಯಾಸೀನ್‌ನನ್ನು ಜೈಲಿನಿಂದ ಸ್ಥಳಾಂತರಿಸಿ ಜಮ್ಮುವಿಗೆ ಕರೆದೊಯ್ದರೆ ಭದ್ರತಾ ಅಪಾಯಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದರು. ನ್ಯಾಯಾಲಯದ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇಂದು ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಪ್ರಕರಣ ಇತ್ಯರ್ಥಕ್ಕಾಗಿ ಜೈಲಿನಲ್ಲೇ ನ್ಯಾಯಾಲಯ ಸ್ಥಾಪಿಸುವಂತೆ ಸಲಹೆ ನೀಡಿತು.
"ನಮ್ಮ ದೇಶದಲ್ಲಿ ಅಜ್ಮಲ್ ಕಸಬ್‌ಗೂ ನ್ಯಾಯಯುತ ವಿಚಾರಣೆಯ ಅವಕಾಶ ನೀಡಲಾಗಿದೆ... ಜೈಲಿನಲ್ಲಿ ನ್ಯಾಯಾಲಯವನ್ನು ಸ್ಥಾಪಿಸಬಹುದು ಎಷ್ಟು ಸಾಕ್ಷಿಗಳಿದ್ದಾರೆ ಎಂದು ತಿಳಿಸಿ. ಸಾಕ್ಷಿಗಳಿಗೆ ಕೂಡ ಭದ್ರತೆ ಅಗತ್ಯವಿದೆ. ಈ ನ್ಯಾಯಾಲಯಕ್ಕೆಂದೇ ನ್ಯಾಯಾಧೀಶರನ್ನು ಹೇಗೆ ನೇಮಕ ಮಾಡಲು ಸಾಧ್ಯ ಎಂಬುದನ್ನು ನಾವು ನೋಡಬೇಕಿದೆ” ಎಂದು ನ್ಯಾ. ಓಕಾ ತಿಳಿಸಿದರು.
ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಯಾಸೀನ್‌ನನ್ನು ಜಮ್ಮು ಕಾಶ್ಮೀರಕ್ಕೆ ಕರೆದೊಯ್ಯಲು ಸಿಬಿಐ ಬಯಸುವುದಿಲ್ಲ ಎಂದು ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಆದರೆ ನ್ಯಾಯಾಲಯ ಪಾಟಿ ಸವಾಲು ಹೇಗೆ ಮಾಡಲು ಸಾಧ್ಯ ಎಂದು ನ್ಯಾ. ಓಕಾ ಪ್ರಶ್ನಿಸಿದರು.
ಆಗ ಮೆಹ್ತಾ ಅವರು, ಮಲಿಕ್ ಖುದ್ದಾಗಿ ಹಾಜರಿರಬೇಕೆಂದೇ ದೃಢ ನಿರ್ಧಾರ ಕೈಗೊಂಡಿದ್ದರೆ ದೆಹಲಿಗೇ ನ್ಯಾಯಲಯವನ್ನು ಸ್ಥಳಾಂತರಿಸಬಹುದು. ಆತ ಸಾಮಾನ್ಯ ಭಯೋತ್ಪಾದಕನಲ್ಲ. ಸರ್ಕಾರ ಇಂತಹ ಪ್ರಕರಣಗಳಲ್ಲಿ ನಿಯಮಾವಳಿ ಪ್ರಕಾರ ನಡೆದುಕೊಳ್ಳಲಾಗದು. ಈತ ಆಗಾಗ್ಗೆ ಪಾಕಿಸ್ತಾನಕ್ಕೆ ತೆರಳಿ (ಪಾಕಿಸ್ತಾನಿ ಧಾರ್ಮಿಕ ಮುಖಂಡ ಮತ್ತು ಬಂಡುಕೋರ) ಹಫೀಜ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡಿದ್ದಾತ ಎಂದರು.
ಪ್ರಕರಣದ ಎಲ್ಲ ಆರೋಪಿಗಳನ್ನು ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿ ಸೇರಿಸಿಕೊಳ್ಳಲು ಸಿಬಿಐಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ನವೆಂಬರ್ 28ರಂದು ಮುಂದಿನ ವಿಚಾರಣೆ ನಡೆಯಲಿದೆ.
ನಾಲ್ವರು ಐಎಎಫ್ ಸಿಬ್ಬಂದಿಯ ಹತ್ಯೆ ಮತ್ತು 1989ರಲ್ಲಿ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ - ಈ ಎರಡು ಪ್ರಕರಣಗಳಲ್ಲಿನ ಸಾಕ್ಷಿಗಳ ಪಾಟಿ ಸವಾಲಿಗಾಗಿ ಜಮ್ಮು ವಿಶೇಷ ನ್ಯಾಯಾಲಯ ಮಲಿಕ್‌ಗೆ ಹಾಜರಾಗುವಂತೆ ಆದೇಶಿಸಿತ್ತು.