Param Bir Singh 
ಸುದ್ದಿಗಳು

ಸುಲಿಗೆ ಪ್ರಕರಣ: ʼಘೋಷಿತ ಅಪರಾಧಿʼ ಆದೇಶಕ್ಕೆ ತಡೆ ಕೋರಿ ಮುಂಬೈ ನ್ಯಾಯಾಲಯದ ಮೆಟ್ಟಿಲೇರಿದ ಪರಮ್‌ ಬೀರ್‌ ಸಿಂಗ್‌

ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಗುರುವಾರ ತನಿಖಾಧಿಖಾರಿಗೆ ಪರಮ್‌ ಬೀರ್‌ ಸಿಂಗ್‌ ಅವರ ಮನವಿಗೆ ಪ್ರತಿಕ್ರಿಯಿಸುವಂತೆ ಆದೇಶಿಸಿದ್ದಾರೆ.

Bar & Bench

ಸುಲಿಗೆ ಪ್ರಕರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಲು ಅನುವು ಮಾಡಿಕೊಟ್ಟಿದ್ದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಿಂಗ್‌ ಅವರು ಮುಂಬೈ ನ್ಯಾಯಾಲಯದ ಕದ ತಟ್ಟಿದ್ದಾರೆ.

ಮುಂಬೈನ ಎಸ್ಪ್ಲನೇಡ್‌ ನ್ಯಾಯಾಲಯದಲ್ಲಿ ಗುರುವಾರ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌ ಬಿ ಭಾಜಿಪಾಲೆ ಅವರ ಸಮ್ಮುಖದಲ್ಲಿ ವಕೀಲ ಗುಂಜನ್‌ ಮಂಗ್ಲಾ ಅವರು ಅರ್ಜಿ ಉಲ್ಲೇಖಿಸಿದರು. ಸ್ವಲ್ಪ ಸಮಯ ವಾದ ಆಲಿಸಿದ ನ್ಯಾಯಾಲಯವು ತನಿಖಾಧಿಕಾರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿತು.

ವಜಾಗೊಂಡಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ, ಪರಮ್‌ ಬೀರ್‌ ಸಿಂಗ್‌ ಸೇರಿದಂತೆ ಹಲವರ ವಿರುದ್ಧ ಹೋಟೆಲ್‌ ಉದ್ಯಮಿ ಬಿಮಲ್‌ ಅಗರ್ವಾಲ್‌ ಅವರು ನೀಡಿದ್ದ ದೂರನ್ನು ಆಧರಿಸಿ ಸಿಂಗ್‌ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಲು ಆದೇಶಿಸುವಂತೆ ಮುಂಬೈ ಪೊಲೀಸರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಪರಮ್‌ ಬೀರ್‌ ಸಿಂಗ್‌ ಮತ್ತು ಸಚಿನ್‌ ವಾಜೆ ಅವರು ₹11 ಲಕ್ಷ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದರು ಎಂದು ಬಿಮಲ್‌ ಅಗರ್ವಾಲ್‌ ಆರೋಪಿಸಿದ್ದರು. ಈ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 384, 385, 389 (ಸುಲಿಗೆ) ಮತ್ತು 120 (ಕ್ರಿಮಿನಲ್‌ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಹಲವು ಬಾರಿ ಜಾಮೀನುರಹಿತ ವಾರೆಂಟ್‌ ಹೊರಡಿಸಿದರೂ ಪರಮ್‌ ಬೀರ್‌ ಸಿಂಗ್‌ ಅವರು ಬಚ್ಚಿಟ್ಟುಕೊಂಡಿದ್ದರು. ಈ ಕಾರಣಕ್ಕಾಗಿ ಸಿಂಗ್‌ ಅವರನ್ನು ನಾಪತ್ತೆಯಾಗಿರುವ ಅಪರಾಧಿ ಎಂದು ಘೋಷಿಸುವಂತೆ ನ್ಯಾಯಾಲಯದಲ್ಲಿ ಪೊಲೀಸರು ಮನವಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯವು ನವೆಂಬರ್‌ 17ರಂದು ಅನುಮತಿಸಿತ್ತು.

ಆರು ತಿಂಗಳಿಂದ ನಾಪತ್ತೆಯಾಗಿದ್ದ ಸಿಂಗ್‌ ನವೆಂಬರ್‌ 22ರಂದು ಸುಪ್ರೀಂ ಕೋರ್ಟ್‌ ತಮ್ಮನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ಸಿಂಗ್‌ ಅವರು ಘೋಷಿತ ಅಪರಾಧಿ ಎಂದಿರುವ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಸದ್ಯ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.