D K Shivakumar, CBI and Karnataka HC 
ಸುದ್ದಿಗಳು

ಡಿಕೆಶಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಾಗ ಒಕ್ಕೂಟ ವ್ಯವಸ್ಥೆಯ ಮಾನದಂಡ ಪಾಲಿಸಿಲ್ಲ: ಹೈಕೋರ್ಟ್‌ಗೆ ಸಿಬಲ್‌ ವಿವರಣೆ

“ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 5ರ ಅಡಿ ತಡವಾಗಿ ಒಪ್ಪಿಗೆ ಪಡೆಯಲಾಗಿದೆ ಎಂಬುದು ಎಫ್‌ಐಆರ್‌ನಲ್ಲಿ ಕಾಣಿಸುತ್ತದೆ. ಇದನ್ನು ಸಿಬಿಐ ಹೇಳಿದೆ. ಸೆಕ್ಷನ್‌ 5ಕ್ಕಿಂತ ಮುಂಚಿತವಾಗಿ ಸೆಕ್ಷನ್‌ 6 ಹೇಗೆ ಬರಲು ಸಾಧ್ಯ?” ಎಂದು ಪ್ರಶ್ನಿಸಿದ ಸಿಬಲ್.‌

Bar & Bench

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒಪ್ಪಿಸುವಾಗ ಒಕ್ಕೂಟ ವ್ಯವಸ್ಥೆಯ ಮಾನದಂಡಗಳನ್ನು ಪಾಲಿಸಲಾಗಿಲ್ಲ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಬಲವಾಗಿ ಸೋಮವಾರ ಕರ್ನಾಟಕ ಹೈಕೋರ್ಟ್ ಮುಂದೆ ಪ್ರತಿಪಾದಿಸಿದರು.

ಸಿಬಿಐ ತನಿಖೆಗೆ ಒಪ್ಪಿಸಿ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಸಿಬಲ್‌ ಅವರು “ಡಿ ಕೆ ಶಿವಕುಮಾರ್‌ ವಿರುದ್ಧದ ಆದಾಯ ತೆರಿಗೆ ಪ್ರಕರಣಗಳನ್ನು ವಜಾ ಮಾಡಲಾಗಿದೆ. ಸಿಬಿಐಗೆ ಪ್ರಕರಣ ಒಪ್ಪಿಸುವಾಗ ಒಕ್ಕೂಟ ವ್ಯವಸ್ಥೆಯ ಮಾನದಂಡಗಳನ್ನು ಪಾಲಿಸಲಾಗಿಲ್ಲ. ಹೀಗಿರುವಾಗ ಪ್ರಕರಣದಲ್ಲಿ ಇನ್ನೇನು ಉಳಿದಿದೆ? ಹೀಗಾಗಿ, ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿಸಿರುವುದು ಕಾನೂನುಬಾಹಿರ. ಅದನ್ನು ಹಿಂಪಡೆಯುವ ಅಗತ್ಯವೇ ಇಲ್ಲ. ಕಾನೂನುಬಾಹಿರವಾದ ಆದೇಶವನ್ನು ಹಿಂಪಡೆಯಲಾಗದು. 2019ರ ಸೆಪ್ಟೆಂಬರ್‌ 25ರಂದು ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಸಿಬಿಐ ತನಿಖೆ ನೀಡಿರುವುದು ಅಕ್ರಮ” ಎಂದರು.

“ಸಂವಿಧಾನ ಮತ್ತು ದೆಹಲಿ ರಾಜ್ಯ ಪೊಲೀಸ್‌ ಸ್ಥಾಪನಾ ಕಾಯಿದೆಯನ್ನು (ಡಿಎಸ್‌ಪಿಇ) ಪಾಲಿಸಲಾಗಿಲ್ಲ. ರಾಜಕೀಯ ದುರುದ್ದೇಶದಿಂದ ನಡೆದುಕೊಳ್ಳಲಾಗಿದೆ. ಖಾಜಿ ದೋರ್ಜಿ ಪ್ರಕರಣದಲ್ಲಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಾಗ ಸಿಬಿಐ ಪ್ರಕ್ರಿಯೆ ಅಮಾನತುಗೊಳಿಸಿತ್ತು” ಎಂದರು.

“ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ 17ಎ ಅಡಿ ಪ್ರಕ್ರಿಯೆ ಆರಂಭಿಸಲು ಅನುಮತಿ ಅಗತ್ಯವಿದೆಯೇ ಎಂಬ ಕುರಿತು ಅಂದಿನ ಅಡ್ವೊಕೇಟ್‌ ಜನರಲ್‌ (ಪ್ರಭುಲಿಂಗ ನಾವದಗಿ) ಅವರಿಂದ ಅಭಿಪ್ರಾಯ ಕೇಳಲಾಗಿತ್ತು. ಅವರು ಅಭಿಪ್ರಾಯ ನೀಡುವುದಕ್ಕೂ ಮುಂಚೆಯೇ ಪ್ರಕರಣವನ್ನು ಬಿಜೆಪಿ ನೇತೃತ್ವದ ಸರ್ಕಾರ ಸಿಬಿಐಗೆ ವಹಿಸಿತ್ತು. ಬಳಿಕ ಎಜಿ ಅಭಿಪ್ರಾಯದಲ್ಲಿ ಅಪರಾಧದ ಸ್ವಭಾವವನ್ನು ತಿಳಿಯಬೇಕು ಎಂದು ಹೇಳಲಾಗಿತ್ತು. ಆದರೆ, ಅದಾಗಲೇ ಪ್ರಕರಣ ಸಿಬಿಐ ಮೆಟ್ಟಿಲೇರಿತ್ತು. ಎಜಿ ಅವರು ಅಪರಾಧ ಏನು ಎಂದು ನಾವು ಪತ್ತೆ ಮಾಡಬೇಕಿದೆ ಎಂದು ಹೇಳಿದ್ದರು. ಅದಾಗಲೇ 2019ರ ಸೆಪ್ಟೆಂಬರ್‌ 25ರಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು” ಎಂದರು.

“ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 5ರ ಅಡಿ ತಡವಾಗಿ ಒಪ್ಪಿಗೆ ಪಡೆಯಲಾಗಿದೆ ಎಂಬುದು ಎಫ್‌ಐಆರ್‌ನಲ್ಲಿ ಕಾಣಿಸುತ್ತದೆ. ಇದನ್ನು ಸಿಬಿಐ ಹೇಳಿದೆ. ಡಿಎಸ್‌ಪಿಇ ಕಾಯಿದೆ 5ಕ್ಕಿಂತ ಮುಂಚಿತವಾಗಿ ಸೆಕ್ಷನ್‌ 6 ಹೇಗೆ ಬರಲು ಸಾಧ್ಯ? ಸೆಕ್ಷನ್‌ 6ರ ಪ್ರಕಾರ ರಾಜ್ಯ ಸರ್ಕಾರವನ್ನು ಉಲ್ಲೇಖಿಸುವುದು ಅಗತ್ಯ. ಸೆಕ್ಷನ್‌ 5ರ ಪ್ರಕಾರ ರಾಜ್ಯ ಸರ್ಕಾರವನ್ನು ಹೆಸರಿಸದೇ ಸೆಕ್ಷನ್‌ 5ರ ಅಡಿ ಅಧಿಸೂಚನೆ ಹೊರಡಿಸಲಾಗದು” ಎಂದರು.

“ಡಿಎಸ್‌ಪಿಇ ಕಾಯಿದೆ ಸೆಕ್ಷನ್‌ 5ರ ಬಳಿಕ 6 ಬರಲಿದೆ. ಸೆಕ್ಷನ್‌ 3 ಮತ್ತು 5ರ ಅಧಿಸೂಚನೆ ಹೊರಡಿಸಬೇಕಿದ್ದು, ಸೆಕ್ಷನ್‌ 6ರ ಪ್ರಕಾರ ಒಪ್ಪಿಗೆ ಇರಲಿದೆ. ಮೊದಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ನಿರ್ಧಾರ ಮಾಡಿ, ಆನಂತರ ಅಗತ್ಯ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರವು ಅನುಮತಿ ಹಿಂಪಡೆದಿದೆ” ಎಂದು ವಿವರಿಸಿದರು.

“ಈ ಹಿಂದೆ ಡಿ ಕೆ ಶಿವಕುಮಾರ್‌ ಅವರು ಸಿಬಿಐಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ್ದನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅದನ್ನು ಡಿ ಕೆ ಶಿವಕುಮಾರ್‌ ಹಿಂಪಡೆದಿದ್ದಾರೆ. ಈಗ ಸಿಬಿಐ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿದೆ. ಈ ಆದೇಶದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಸಿಬಿಐ ತೋರ್ಪಡಿಸಬೇಕು” ಎಂದರು.

“ಸಿಬಿಐ ತನಿಖೆಗೆ ನೀಡುವುದಕ್ಕೂ ಮುನ್ನ ಸಂಬಂಧಿತ ಪ್ರಾಧಿಕಾರದಿಂದ ಅಭಿಪ್ರಾಯ ಪಡೆದಿರುವುದು ಉಲ್ಲೇಖಿಸಿಲ್ಲ. ಯಾವ ನಿಬಂಧನೆ ಉಲ್ಲಂಘಿಸಲಾಗಿದೆ ಎಂಬುದನ್ನು ತಿಳಿಸಿಲ್ಲ. ಇದ್ಯಾವುದೂ ಇಲ್ಲದೇ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ರಾಜ್ಯದ ತನಿಖಾ ಸಂಸ್ಥೆಗಳು ಇದನ್ನು ಏಕೆ ತನಿಖೆ ನಡೆಸಲಾಗದು ಎಂಬುದರ ಬಗ್ಗೆ ಯಾವುದೇ ಚರ್ಚೆ, ಉಲ್ಲೇಖವಿಲ್ಲ. ಸಂವಿಧಾನದ ನಿಯಮದ ಪ್ರಕಾರ ಅದು ನಡೆಯಬೇಕಿತ್ತು. ಆದಾಯ ತೆರಿಗೆ ಪ್ರಕ್ರಿಯೆ ಹೊರತುಪಡಿಸಿ ಬೇರಾವುದೇ ದಾಖಲೆ ಇಲ್ಲ. ಅದೂ ಈಗ ವಜಾಗೊಂಡಿದೆ. ಹೀಗಿರುವಾಗ ಏನು ಬಾಕಿ ಉಳಿದಿದೆ? ಹೀಗಾಗಿ, ಇದು ದುರುದ್ದೇಶಪೂರಿತ ಕ್ರಮ” ಎಂದರು.

“ಅಂದಿನ ಮುಖ್ಯಮಂತ್ರಿ (ಬಿ ಎಸ್‌ ಯಡಿಯೂರಪ್ಪ) ಮೌಖಿಕವಾಗಿ 2019ರ ಸೆಪ್ಟೆಂಬರ್‌ 24ರಂದು ಡಿ ಕೆ ಶಿವಕುಮಾರ್‌ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು ಎಂದಿದ್ದರು. ಸೆಪ್ಟೆಂಬರ್‌ 25ರಂದು ಆದೇಶ ಮಾಡಲಾಗಿದ್ದು, ಯಾವುದೇ ರೀತಿಯಲ್ಲಿ ಸಮಯದ ಅಂತರವಿಲ್ಲ. ಸಿಬಿಐಗೆ ಅನುಮತಿಸುವಾಗ ಕಾನೂನಾತ್ಮಕ, ದಾಖಲೆಸಹಿತ ಮತ್ತು ಇದರ ತನಿಖೆಯನ್ನು ರಾಜ್ಯ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಬೇಕು. ಆದರೆ, ನಾವಿಲ್ಲಿ ಇದ್ಯಾವುದನ್ನೂ ಮಾಡದ ಒಪ್ಪಿಗೆಯ ಮಾತನಾಡುತ್ತಿದ್ದೇವೆ” ಎಂದು ವಿವರಿಸಿದರು.

ಅದಾಗ್ಯೂ, “ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಬಳಿಕ ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸಲಾಗಿದೆ. ನಾವಿಲ್ಲಿ ಯಾರನ್ನೂ ರಕ್ಷಿಸುತ್ತಿಲ್ಲ. ಇಲ್ಲಿ ಸಿಬಿಐ ತನಿಖೆಗೆ ಕಾನೂನಿನ ಮಾನ್ಯತೆ ಇಲ್ಲ” ಎಂದರು.

ಡಿ ಕೆ ಶಿವಕುಮಾರ್‌ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ವಿಜಯ್‌ ಮದನ್‌ಲಾಲ್‌ ಪ್ರಕರಣದಲ್ಲಿನ ಪ್ರಕ್ರಿಯೆ ಪಾಲಿಸಲಾಗಿಲ್ಲ. ಕಾನೂನುಬಾಹಿರವಾದ ಅನುಮತಿ ಆದೇಶದ ಮೂಲಕ ಸಿಬಿಐಗೆ ರಾಜ್ಯ ಪ್ರವೇಶಿಸಲು ಅನುಮತಿಸುವುದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗಲಿದೆ. ಒಕ್ಕೂಟ ವ್ಯವಸ್ಥೆಯು ಸಂವಿಧಾನ ಮೂಲರಚನೆ ಸಿದ್ಧಾಂತ. ಕೇಂದ್ರಾಡಳಿತ ಪ್ರದೇಶವನ್ನು ಮೀರಿ ಸಿಬಿಐ ಹೋಗಲಾಗದು. ರಾಜ್ಯ ಪ್ರವೇಶಿಸಲು ಸಿಬಿಐಗೆ ಕೇಂದ್ರ ಸರ್ಕಾರದ ಆಂತರಿಕ ಅನುಮತಿ ಅಗತ್ಯ” ಎಂದರು.

“ಸಿಬಿಐ ಮೇಲ್ಮನವಿ ಸಲ್ಲಿಸುವ ಹಕ್ಕು ಹೊಂದಿಲ್ಲ. ಸಿಬಿಐ ಇಲ್ಲಿ ಬಾದಿತವಲ್ಲ. ಸಿಬಿಐಗೆ ಪ್ರಾಸಿಕ್ಯೂಟ್‌ ಮಾಡುವ ಹಕ್ಕು ಅಡಕಗೊಳಿಸಲಾಗಿಲ್ಲ. ಇದನ್ನು ಸಿಬಿಐ ಹೇಗೆ ಪ್ರಶ್ನಿಸುತ್ತದೆ? ಒಂದೊಮ್ಮೆ ಕೇಂದ್ರ ಸರ್ಕಾರವು ತಾವು ಸಿಬಿಐ ತನಿಖೆ ಮಾಡಲು ಆದೇಶಿಸಿದ್ದೇವೆ ಎಂದು ಹೇಳಿದರೆ ಭಾರತ ಸರ್ಕಾರದ ನಿರ್ಧಾರ ಸರಿಯೋ ಅಥವಾ ತಪ್ಪೋ ಎಂದು ಪೀಠ ನಿರ್ಧರಿಸಬೇಕು. ಆಗ ರಾಜ್ಯ ಸರ್ಕಾರ ಇಲ್ಲ ಎನ್ನಬಹುದು. ಯಾವ ವಿಧಾನ ಅನುಸರಿಸಬೇಕು ಎಂಬುದು ಕೇಂದ್ರದ ಆಯ್ಕೆಯಾಗಿರುತ್ತದೆ” ಎಂದರು.

ಅಂತಿಮವಾಗಿ ಕಪಿಲ್‌ ಸಿಬಲ್‌ ಮತ್ತು ಸಿಂಘ್ವಿ ಅವರು ಲಿಖಿತ ವಾದಾಂಶ ಸಲ್ಲಿಸುವುದಾಗಿ ತಿಳಿಸಿದರು. ಪೀಠವು ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.