ಸಿಬಿಐ ತನಿಖೆ ರದ್ದತಿಗೆ ಕೋರಿಕೆ: ಡಿ ಕೆ ಶಿವಕುಮಾರ್ ಪ್ರಕರಣದ ವಿಚಾರಣೆ ಮೇ ಅಂತ್ಯಕ್ಕೆ ಮುಂದೂಡಿಕೆ

ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿರುವ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದರೆ, ಪ್ರಸಕ್ತ ಅರ್ಜಿ ಮಾನ್ಯತೆ ಕಳೆದುಕೊಳ್ಳಲಿದೆ. ಆದ್ದರಿಂದ ಆ ಕುರಿತ ಆದೇಶ ಪ್ರಕಟಿಸುವವರೆರೆಗೂ ಪ್ರಸಕ್ತ ಅರ್ಜಿ ವಿಚಾರಣೆ ಮುಂದೂಡಲು ಕೋರಿಕೆ
D K Shivakumar, CBI and Karnataka HC
D K Shivakumar, CBI and Karnataka HC

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಯನ್ನು ರದ್ದುಗೊಳಿಸಲು ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಮೇ 30ಕ್ಕೆ ಮುಂದೂಡಿದೆ.

ಸಿಬಿಐ ತನಿಖೆ ರದ್ದು ಕೋರಿ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಶಿವಕುಮಾರ್‌ ಅವರು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಕುರಿತ ವಿಚಾರಣೆಯನ್ನು ಈಗಾಗಲೇ ಪೂರ್ಣಗೊಳಿಸಿರುವ ನಿಮ್ಮ ಪೀಠವು (ನ್ಯಾ.ಕೆ. ನಟರಾಜನ್) ತೀರ್ಪು ಕಾಯ್ದಿರಿಸಿದೆ. ಒಂದೊಮ್ಮೆ ಸರ್ಕಾರದ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿದರೆ, ಈ ಅರ್ಜಿಯು ವಿಚಾರಣಾ ಮಾನ್ಯತೆ ಕಳೆದುಕೊಳ್ಳಲಿದೆ. ಆದ್ದರಿಂದ ಪೀಠವು ಮತ್ತೊಂದು ಅರ್ಜಿ ಕುರಿತ ತೀರ್ಪು ಪ್ರಕಟ ಮಾಡುವವರೆಗೂ ತನಿಖೆ ರದ್ದು ಕೋರಿರುವ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.

Also Read
ಡಿ ಕೆ ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣ: ಸಿಬಿಐ ತನಿಖೆ ಶಿಫಾರಸ್ಸಿಗೆ ಆಕ್ಷೇಪ, ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಸಿಬಿಐ ವಕೀಲರು ಕೋರಿಕೆ ಪರಿಗಣಿಸಿದ ನ್ಯಾ. ನಟರಾಜನ್ ಅವರು ಅರ್ಜಿ ವಿಚಾರಣೆಯನ್ನು ಮೇ ಅಂತ್ಯಕ್ಕೆ ಮುಂದೂಡಿದರು. ಅಲ್ಲದೇ, ಅರ್ಜಿ ಕುರಿತ ಮುಂದಿನ ವಿಚಾರಣೆಗೆ ಅರ್ಜಿದಾರ ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿರುವ ತಡೆಯಾಜ್ಞೆಯನ್ನು ಸಹ ವಿಸ್ತರಿಸಿ ಆದೇಶಿಸಿದರು.

Related Stories

No stories found.
Kannada Bar & Bench
kannada.barandbench.com