ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆಯ ಮರು ಸ್ಥಾಪನೆ ವಿಚಾರವನ್ನು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಅಂಗಳಕ್ಕೆ ವರ್ಗಾಯಿಸಿದೆ.
ಪರುಶರಾಮ ಪ್ರತಿಮೆ ಮರುಸ್ಥಾಪನೆ ಕುರಿತು ಉಡುಪಿ ತಾಲ್ಲೂಕಿನ ವರಂಗ ಗ್ರಾಮದ ಉದಯ ಶೆಟ್ಟಿ ಮುನಿಯಾಲು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನುಶಿವರಾಮ್ ಮತ್ತು ಟಿ ಪಿ ವಿವೇಕಾನಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠವು ಪ್ರತಿಮೆಯ ಮರುಸ್ಥಾಪನೆಗೆ ಕೋರಿ ಅರ್ಜಿದಾರರು ಸರ್ಕಾರಕ್ಕೆ (ಪ್ರವಾಸೋದ್ಯಮ ಇಲಾಖೆ) ಮನವಿ ಸಲ್ಲಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ವಿಷಯವು ಸಂಪೂರ್ಣವಾಗಿ ವಾಸ್ತವಾಂಶಗಳಿಗೆ ಸಂಬಂಧಿಸಿರುವುದರಿಂದ ಅರ್ಜಿದಾರರು 2025ರ ಜುಲೈ 24ರಂದು ಸಲ್ಲಿಸಿರುವ ಮನವಿಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ಸರ್ಕಾರ (ಪ್ರವಾಸೋದ್ಯಮ ಇಲಾಖೆ)ದ ಕರ್ತವ್ಯವಾಗಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಾಗ ಉಡುಪಿ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ಕೊಟ್ಟು ಅವರ ವಾದವನ್ನೂ ಆಲಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ 33 ಅಡಿ ಎತ್ತರದ ಪರಶುರಾಮ ಪ್ರತಿಮೆಯನ್ನು 2023ರ ಜನವರಿ 27ರಂದು ಉದ್ಘಾಟನೆ ಮಾಡಲಾಗಿತ್ತು. ಆದರೆ, ಕಂಚಿನ ಪ್ರತಿಮೆ ಬದಲಿಗೆ ಹಿತ್ತಾಳೆ ಪ್ರತಿಮೆ ಅನಾವರಣ ಮಾಡಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಪ್ರತಿಮೆ ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕರಾವಳಿ ಕರ್ನಾಟಕದ ಹಿಂದೂಗಳ ಧಾರ್ಮಿಕ ಭಾವನೆಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಈ ಪ್ರತಿಮೆಯನ್ನು ಪುನರ್ ರಚಿಸಿ ಮರು ಪ್ರತಿಷ್ಠಾಪನೆ ಮಾಡಲು ನಿರ್ದೇಶಿಸಬೇಕು ಎಂದು ಉದಯಶೆಟ್ಟಿ ಮುನಿಯಾಲ ಹೈಕೋರ್ಟ್ ಮೆಟ್ಟಿಲೇರಿದ್ದರು.