ದಾವೆ ಎಷ್ಟೇ ಜನಪ್ರಿಯವಲ್ಲದೇ ಹೋದರೂ ಕಕ್ಷಿದಾರರ ಪರ ವಾದ ಮಂಡಿಸುವಾಗ ವೈಯಕ್ತಿಕ ನೈತಿಕತೆ ಮತ್ತು ಪಕ್ಷಪಾತವನ್ನು ಬದಿಗೆ ಸರಿಸಬೇಕು ಎಂದು ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೌತಮ್ ಪಟೇಲ್ ಈಚೆಗೆ ಅಭಿಪ್ರಾಯಪಟ್ಟರು.
ಜುಲೈ 13 ರಂದು ಮುಂಬೈನ ಎಚ್‌ಎಸ್‌ಎನ್‌ಸಿ ವಿವಿಯ ಡಿಎಂ ಹರೀಶ್ ಕಾನೂನು ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಪರಿಚಯ ಕುರಿತಾದ ಪ್ರಮುಖ ಉಪನ್ಯಾಸ ಸರಣಿಯ ಭಾಗವಾಗಿ ನ್ಯಾಯಮೂರ್ತಿ ಪಟೇಲ್ ಮಾತನಾಡಿದರು.
ಬೇರೆ ವೃತ್ತಿಗಳಂತಲ್ಲದೆ ಕಾನೂನು ವೃತ್ತಿ ಮತ್ತೊಂದು ಬದಿಯವರನ್ನೂ ಆಲಿಸುವಂತಹ ನಂಬಲಸಾಧ್ಯವಾದ ಕಷ್ಟಕರ ಬೇಡಿಕೆ ಇಡುತ್ತದೆ ಎಂದು ಅವರು ತಿಳಿಸಿದರು.
ಇನ್ನೊಂದು ಬದಿಯನ್ನೂ ಆಲಿಸಿ ನಿರ್ಧಾರ ಕೈಗೊಳ್ಳಿ ಎಂದು ಬೇಡುವ ಏಕೈಕ ವೃತ್ತಿ ಇದಾಗಿದೆ. ಇದೊಂದು ಕಷ್ಟಕರ ವೃತ್ತಿ. ನಿಮ್ಮ ಕೌಶಲ್ಯ ಕಣಕ್ಕಿಳಿಯುವುದರ ಜೊತೆಗೆ ಮೌಲ್ಯಗಳೂ ಅಖಾಡಕ್ಕಿಳಿಯುವ ಕ್ಷೇತ್ರ ವಕೀಲಿಕೆ.
ಅಜ್ಮಲ್ ಕಸಬ್ ರೀತಿಯ ಜನಪರವಲ್ಲದ ಪ್ರಕರಣಗಳಲ್ಲಿಯೂ ವಕೀಲರು ವಾದಿಸಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ನ್ಯಾಯಾಲಯದಲ್ಲಿ ಸಮರ್ಥನೆಗೆ ಅರ್ಹನಾಗಿರುವುದರಿಂದ ವಕೀಲರು ನೈತಿಕತೆಯನ್ನು ಬದಿಗೊತ್ತುವ ಅಗತ್ಯವಿದೆ.
ನ್ಯಾಯ ವ್ಯವಸ್ಥೆ ಮತ್ತು ಕಾನೂನು ಆಳ್ವಿಕೆಗೆ ಬುನಾದಿಯಾಗಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಮರ್ಥನೆಗೆ ಅರ್ಹನಾಗಿರುತ್ತಾನೆ. ನಿಮ್ಮಲ್ಲಿಗೆ ಬರುವ ವ್ಯಕ್ತಿಯ ದಾವೆ ಕುರಿತು ನೀವು ಮೊದಲೇ ನಿರ್ಧರಿಸುವಂತಿಲ್ಲ. ಅದು ವಕೀಲರ ಕೆಲಸವೂ ಅಲ್ಲ. ಅಪರಾಧಿಯೇ, ಮುಗ್ಧರೇ ಎಂಬುದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ.
ಕ್ರಿಮಿನಲ್ ವಕೀಲರಾಗಿ ತಮ್ಮ ಕಕ್ಷಿದಾರರು ತಪ್ಪಿತಸ್ಥರೇ ಇಲ್ಲವೇ ಎಂದು ಅವರನ್ನೇ ಕೇಳಬಾರದು. ಹೇಗೆ ವಾದ ಮಂಡಿಸಲು ಬಯಸುತ್ತೀರಿ ಎಂದಷ್ಟೇ ಅವರನ್ನು ಪ್ರಶ್ನಿಸಬೇಕು. ಕಕ್ಷಿದಾರರಾಗಿ ನೀವು ನನಗೆ ನೀಡುವ ಸೂಚನೆಗಳೇನು? ನೀವು ತಪ್ಪಿತಸ್ಥರೆಂದು ಒಪ್ಪಿಕೊಳ್ಳಲು ಬಯಸುತ್ತೀರಾ ಅಥವಾ ತಪ್ಪಿತಸ್ಥರಲ್ಲವೇ ಎಂದಷ್ಟೇ ಪ್ರಶ್ನಿಸಬೇಕು.
ವಕೀಲ ಹೇಗೆ ವಾದಿಸಬೇಕು ಎಂದು ಕಕ್ಷಿದಾರ ಹೇಳಿದಾಗ ಸುಳ್ಳು ಹೇಳದೆ ಕಕ್ಷಿದಾರ ಸಲ್ಲಿಸಬಯಸುವ ಮನವಿಯನ್ನು ನ್ಯಾಯಾಲಯಕ್ಕೆ ಆ ನ್ಯಾಯವಾದಿ ತಿಳಿಸುತ್ತಾನೆ.