ವಕೀಲ ವೃತ್ತಿ ವಾಣಿಜ್ಯ ಚಟುವಟಿಕೆಯಲ್ಲ: ವಿದ್ಯುತ್ ಬಳಕೆಗಾಗಿ ವಾಣಿಜ್ಯ ದರ ವಿಧಿಸುವಂತಿಲ್ಲ ಎಂದ ಅಲಾಹಾಬಾದ್ ಹೈಕೋರ್ಟ್

ವಕೀಲರು ಯಾವುದೇ ವ್ಯಾಪಾರ, ವ್ಯವಹಾರ ಅಥವಾ 'ವಾಣಿಜ್ಯ ಚಟುವಟಿಕೆಯನ್ನು' ನಡೆಸುವುದಿಲ್ಲವಾದ್ದರಿಂದ ಅವರ ಚೇಂಬರ್ ಅಥವಾ ಕಚೇರಿಗಳನ್ನು ಗೃಹಬಳಕೆ ವ್ಯಾಪ್ತಿಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ನುಡಿದಿದೆ.
ವಕೀಲ ವೃತ್ತಿ ವಾಣಿಜ್ಯ ಚಟುವಟಿಕೆಯಲ್ಲ: ವಿದ್ಯುತ್ ಬಳಕೆಗಾಗಿ ವಾಣಿಜ್ಯ ದರ ವಿಧಿಸುವಂತಿಲ್ಲ ಎಂದ ಅಲಾಹಾಬಾದ್ ಹೈಕೋರ್ಟ್

ವಕೀಲ ವೃತ್ತಿ ವಾಣಿಜ್ಯ ಚಟುವಟಿಕೆ ವ್ಯಾಪ್ತಿಗೆ ಒಳಪಡುವುದಿಲ್ಲವಾದ್ದರಿಂದ ವಿದ್ಯುತ್‌ ಬಳಕೆ ಮಾಡಿದ್ದಕ್ಕಾಗಿ ಅವರ ಕಚೇರಿಗೆ ವಾಣಿಜ್ಯ ದರ ವಿಧಿಸುವಂತಿಲ್ಲ ಎಂದು ಈಚೆಗೆ ಅಲಾಹಾಬಾದ್‌ ಹೈಕೋರ್ಟ್‌ ತಿಳಿಸಿದೆ [ತಹಸಿಲ್‌ (ತಾಲೂಕು) ವಕೀಲರ ಸಂಘ ಸದರ್‌ ತಹಸೀಲ್‌ ಕ್ಷೇತ್ರ, ಗಾಂಧಿನಗರ ಗಾಜಿಯಾಬಾದ್‌ ಮತ್ತು ಯುಪಿಇಆರ್‌ಸಿ ನಡುವಣ ಪ್ರಕರಣ].

ನ್ಯಾಯಾಲಯದ ಅಧಿಕಾರಿಯಾಗಿ ನೇಮಕಗೊಂಡ ವಕೀಲರು ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಪ್ರಕಾಶ್ ಕೇಸರವಾನಿ ಮತ್ತು ಅನೀಶ್ ಕುಮಾರ್ ಗುಪ್ತಾ ಅವರಿದ್ದ ಪೀಠ ತಿಳಿಸಿದೆ.

Also Read
ಮನರಂಜನಾ ಚಟುವಟಿಕೆ ನಡೆಸಲು ಕ್ಲಬ್‌, ಸಂಘ ಸಂಸ್ಥೆಗಳು ಪೊಲೀಸ್‌ ಕಾಯಿದೆ ಅನುಮತಿ ಪಡೆಯುವ ಅಗತ್ಯವಿಲ್ಲ: ಹೈಕೋರ್ಟ್‌

ಭಾರತೀಯ ವಕೀಲರ ಪರಿಷತ್‌ ನಿಯಮಾವಳಿಗಳ ಪ್ರಕಾರ ತಮ್ಮ ಸೇವೆಗಳ ಕುರಿತು ವಕೀಲರು ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿರುವ ಪೀಠ ʼನ್ಯಾಯಾಲಯ, ಕಕ್ಷಿದಾರರು, ಸಹೋದ್ಯೋಗಿಗಳು ಹಾಗೂ ಪ್ರತಿವಾದಿಗಳ ಬಗ್ಗೆ ವಕೀಲರಿಗೆ ನಿಗದಿತ ಕರ್ತವ್ಯಗಳಿವೆ. ಈ ವೈಶಿಷ್ಟ್ಯಗಳು ಕಾನೂನು ವೃತ್ತಿಯನ್ನು ವ್ಯಾಪಾರ ಅಥವಾ ವ್ಯವಹಾರ ಎನ್ನುವುದರಿಂದ ಪ್ರತ್ಯೇಕಗೊಳಿಸುತ್ತವೆ.  ಹಾಗಾಗಿ ಇದನ್ನು ವಾಣಿಜ್ಯ ಚಟುವಟಿಕೆ ಎಂದು ಕರೆಯುವಂತಿಲ್ಲ ಎಂದಿದೆ.

“ವಕೀಲರ ವೃತ್ತಿಯನ್ನು ಎಲ್‌ಎಂವಿ- 2 (ವಾಣಿಜ್ಯ ವರ್ಗದ) ಅಡಿಯಲ್ಲಿ ವರ್ಗೀಕರಿಸಲು ಆಗದು. ಇದು ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ. ವಕೀಲರ ಚಟುವಟಿಕೆಗಳು ವಾಣಿಜ್ಯ ಚಟುವಟಿಕೆಗಳಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತು ವಿವಿಧ ಹೈಕೋರ್ಟ್‌ಗಳು ತೀರ್ಪು ನೀಡಿವೆ… ವಕೀಲರು ಯಾವುದೇ ವ್ಯಾಪಾರ ಅಥವಾ ವ್ಯವಹಾರವನ್ನು ಮಾಡುವುದಿಲ್ಲ ಅಥವಾ ಯಾವುದೇ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗುವುದಿಲ್ಲವಾದ್ದರಿಂದ ವಕೀಲರ ಚೇಂಬರ್‌ಗಳು/ ಕಚೇರಿಗಳನ್ನು ಎಲ್‌ಎಂವಿ-1 ವ್ಯಾಪ್ತಿಯಲ್ಲಿ ಗೃಹಬಳಕೆ ವ್ಯಾಪ್ತಿಯಲ್ಲಿ ಪರಿಗಣಿಸಬೇಕು” ಎಂದು ನ್ಯಾಯಾಲಯ ನುಡಿದಿದೆ.

ವಕೀಲರ ಚೇಂಬರ್‌ಗಳಿಗೆ ವಾಣಿಜ್ಯ ವಿದ್ಯುತ್ ಬಳಕೆಯ ದರಗಳನ್ನು ಅನ್ವಯಿಸುವುದರ ವಿರುದ್ಧ ಉತ್ತರ ಪ್ರದೇಶದ ತಹಸೀಲ್ ವಕೀಲರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ವಿವರಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Tehsil_Bar_Association___Sadar_Tehsil_Parisar__Gandhi_Nagar__Ghaziabad_vs_UPERC.pdf
Preview
Kannada Bar & Bench
kannada.barandbench.com