Parliament watch 
ಸುದ್ದಿಗಳು

ಸಂಸತ್ ಚಳಿಗಾಲದ ಅಧಿವೇಶನ: ಮಂಡನೆಯಾಗಲಿವೆ ಕೃಷಿ ಕಾಯಿದೆ ರದ್ದತಿ, ಕ್ರಿಪ್ಟೋಕರೆನ್ಸಿ ನಿಯಂತ್ರಣ ಮುಂತಾದ ಮಸೂದೆಗಳು

ಕೃಷಿ ಕಾನೂನುಗಳ ರದ್ದತಿ ಮಸೂದೆ- 2021ನ್ನು ಸಂಸತ್ತಿನಲ್ಲಿ ಮಂಡಿಸಲಿದ್ದು ಇದು ಕಳೆದ ವರ್ಷ ಸಂಸತ್ ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ರದ್ದುಗೊಳಿಸಲಿದೆ.

Bar & Bench

ವಿವಿಧ ಮಸೂದೆಗಳನ್ನು ಮಂಡಿಸುವ, ಅನುಮೋದಿಸುವ ಕಾರಣಕ್ಕಾಗಿ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನ ಮಹತ್ವದ್ದಾಗಿ ಪರಿಣಮಿಸಿದೆ. ಕೃಷಿ ಕಾನೂನುಗಳ ರದ್ದತಿ ಮಸೂದೆ- 2021 ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದು ಇದು ಕಳೆದ ವರ್ಷ ಅಂಗೀಕರಿಸಲಾಗಿದ್ದ ಮೂರು ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ರದ್ದುಗೊಳಿಸಲಿದೆ.

ಅಲ್ಲದೆ ಜಗತ್ತಿನ ಗಮನ ಸೆಳೆದಿರುವ ಮತ್ತು ಕರ್ನಾಟಕದ ಪಾಲಿಗೂ ಗಮನಾರ್ಹವಾಗಿರುವ ಕ್ರಿಪ್ಟೊಕರೆನ್ಸಿ ಅವ್ಯವಹಾರ ನಿಯಂತ್ರಣ ಕುರಿತಂತೆ ಮಸೂದೆ ಮಂಡನೆಯಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ ಮಂಡಿಸಲಾಗುತ್ತಿರುವ ಉಳಿದ ಮಸೂದೆಗಳ ವಿವರ ಇಲ್ಲಿದೆ.

  • ಜಾರಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅನುವು ಮಾಡಿಕೊಡುವ ಕೇಂದ್ರ ವಿಚಕ್ಷಣಾ ಆಯೋಗ (ತಿದ್ದುಪಡಿ) ಮಸೂದೆ, 2021.

  • ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅನುವು ಮಾಡಿಕೊಡುವ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ, 2021.

  • ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ (ತಿದ್ದುಪಡಿ) ಮಸೂದೆ- 2021.

  • ದಿವಾಳಿ ಮತ್ತು ದಿವಾಳಿತನ ಸಂಹಿತೆ- 2016ನ್ನು ಇನ್ನಷ್ಟು ಬಲಪಡಿಸಲು ಮತ್ತು ಸರಾಗಗೊಳಿಸಲು ಯತ್ನಿಸುವ ದಿವಾಳಿ ಮತ್ತು ದಿವಾಳಿತನ (ಎರಡನೇ ತಿದ್ದುಪಡಿ) ಮಸೂದೆ, 2021.

  • ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸಿಕೊಡುವ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ-, 2021. ಖಾಸಗಿ ಒಡೆತನದಲ್ಲಿರುವ ದೇಶದ ಎಲ್ಲಾ ಖಾಸಗಿ ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸಲು ಮಸೂದೆ ಯತ್ನಿಸುತ್ತದೆ. ಆದರೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆ ಉತ್ತೇಜಿಸಲು ಕೆಲ ವಿನಾಯಿತಿಗಳಿಗೆ ಇದು ಅನುಮತಿ ನೀಡುತ್ತದೆ.

  • ಹೈಕೋರ್ಟ್ ನ್ಯಾಯಮೂರ್ತಿಗಳ (ಸೇವೆಯ ವೇತನಗಳು ಮತ್ತು ಷರತ್ತುಗಳು) ಕಾಯಿದೆ, 1954 ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ಸೇವೆಯ ವೇತನಗಳು ಮತ್ತು ಷರತ್ತುಗಳು) ಕಾಯಿದೆ, 1958 ಅನ್ನು ತಿದ್ದುಪಡಿ ಮಾಡುವ ಹೈಕೋರ್ಟ್ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ (ಸೇವಾ ವೇತನ ಮತ್ತು ಷರತ್ತುಗಳು) ತಿದ್ದುಪಡಿ ಮಸೂದೆ- 2021.

  • ರಾಷ್ಟ್ರೀಯ ದಂತ ಆಯೋಗ ಸ್ಥಾಪಿಸುವ ಮತ್ತು 1948ರ ದಂತವೈದ್ಯರ ಕಾಯಿದೆಯನ್ನು ರದ್ದುಗೊಳಿಸುವ ರಾಷ್ಟ್ರೀಯ ದಂತ ಆಯೋಗದ ಮಸೂದೆ, 2021.

  • ವಲಸೆ ಕಾಯಿದೆ- 1983ನ್ನು ಬದಲಿಸುವ ವಲಸೆ ಮಸೂದೆ- 2021. ಈ ಮಸೂದೆಯಿಂದಾಗಿ ಇದರಿಂದಾಗಿ ಸುರಕ್ಷಿತ ಮತ್ತು ಕ್ರಮಬದ್ಧವಾದ ವಲಸೆಗೆ ಅನುಕೂಲವಾಗುವಂತಹ ದೃಢವಾದ, ಪಾರದರ್ಶಕ ಮತ್ತು ಸಮಗ್ರ ವಲಸೆ ನಿರ್ವಹಣಾ ನಿಬಂಧನೆ ಪರಿಚಯಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.