ಶಾಸಕಾಂಗವು ಮಸೂದೆಯನ್ನು ಪರಿಗಣಿಸುವುದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್ 2020ರ ಭೂ ಸುಧಾರಣಾ (ತಿದ್ದುಪಡಿ) ಮಸೂದೆಗೆ ತಡೆ ನೀಡಲು ನಿರಾಕರಿಸಿದೆ. ತಿದ್ದುಪಡಿ ಮಸೂದೆಯೊಂದಿಗೆ ರಾಜ್ಯ ಸರ್ಕಾರ ಮುಂದುವರೆಯದಂತೆ ಕೋರಿ ಸಲ್ಲಿಸಲಾಗಿದ್ದ ವಾದಕಾಲೀನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ತಳ್ಳಿ ಹಾಕಿದೆ.
ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ "ಮಸೂದೆಯನ್ನು ರದ್ದುಗೊಳಿಸುವ ಪ್ರಶ್ನೆ ಹೇಗೆ ಬರುತ್ತದೆ? ಶಾಸಕಾಂಗ ಮಸೂದೆ ಪರಿಗಣಿಸುವುದನ್ನು ತಡೆಯಲು ನಮಗೆ ಸಾಧ್ಯವಿಲ್ಲ. ಶಾಸನಸಭೆಯಲ್ಲಿ ಏನಾಗುತ್ತದೆ ಎಂಬುದನ್ನು ರಿಟ್ ನ್ಯಾಯಾಲಯ ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ಮೌಖಿಕವಾಗಿ ತಿಳಿಸಿತು.
ವಿಚಾರಣೆಯ ಸಮಯದಲ್ಲಿ, ಅರ್ಜಿದಾರರ ಪರ ವಕೀಲ ವಿಲಾಸ್ ರಂಗನಾಥ್ ದತಾರ್ ಅವರು ಸೆಪ್ಟೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು ನಂತರ ಅದನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಯಿತು ಎಂದು ಹೇಳಿದರು. ಮಸೂದೆಗೆ ವಿಧಾನ ಪರಿಷತ್ತಿನ ಅಂಗೀಕಾರ ದೊರೆತಿರಲಿಲ್ಲ ಇಡೀ ಪ್ರಕ್ರಿಯೆಯನ್ನು ಅವಸರದಿಂದ ಮಾಡಲಾಗಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.
ಆದರೆ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದಿರುವ ನ್ಯಾಯಾಲಯ, "ಶಾಸಕಾಂಗದ ಎದುರು ಮಂಡನೆಯಾಗುವ ಮಸೂದೆಯನ್ನು ತಡೆಯಲು ಸಾಧ್ಯವಿಲ್ಲ. ಅರ್ಜಿ ಮೂಲಕ ಮಾಡಿದ ಮನವಿಯಲ್ಲಿ ತಪ್ಪು ಗ್ರಹಿಕೆಗಳಿರುವುದರಿಂದ ಅದನ್ನು ತಿರಸ್ಕರಿಸಲಾಗುತ್ತಿದೆ” ಎಂದಿದೆ.
2020 ರ ಕರ್ನಾಟಕ ಭೂ ಸುಧಾರಣಾ (ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಕೆಲ ಅರ್ಜಿಗಳಿಗೆ ಸಂಬಂಧಿಸಿದಂತೆ ವಾದಕಾಲೀನ ಅರ್ಜಿ ಸಲ್ಲಿಸಲಾಗಿತ್ತು. 1964 ರ ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಅಕ್ಟೋಬರ್ 19 ರಂದು ಸುಗ್ರೀವಾಜ್ಞೆ ಜಾರಿಗೆ ತಂದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಮಸೂದೆಗೆ ರಾಜ್ಯಪಾಲ ವಜುಭಾಯಿ ಆರ್ ವಾಲಾ ಅವರು ಒಪ್ಪಿಗೆ ನೀಡಿದ್ದರು. ನವೆಂಬರ್ ಎರಡರಂದು ಅಧಿಸೂಚನೆ ಹೊರಡಿಸಲಾಗಿತ್ತು. ಜುಲೈನಲ್ಲಿ ಸರ್ಕಾರ ಮೊದಲ ಸುಗ್ರೀವಾಜ್ಞೆ ಹೊರಡಿಸಿತ್ತು.
213ನೇ ವಿಧಿಯ ಪ್ರಕಾರ ಎರಡನೇ ಸುಗ್ರೀವಾಜ್ಞೆಗೆ ಮನ್ನಣೆ ಇದೆಯೇ ಎಂದು ಪರಿಶೀಲಿಸಲಬೇಕಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಶಾಸಕಾಂಗ ಅಂಗೀಕರಿಸಿದ ಮಸೂದೆಗಿರುವ ಮನ್ನಣೆಯಂತೆಯೇ ಸುಗ್ರೀವಾಜ್ಞೆಗೂ ಇರುವುದರಿಂದ ಅದಕ್ಕೆ "ಸಾಂವಿಧಾನಿಕ ಮನ್ನಣೆ ಇದೆ” ಎಂದು ಭಾವಿಸಬಹುದು ಎಂದು ಪೀಠವು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಜನವರಿ 5ರವರೆಗೆ ಕಾಲಾವಕಾಶ ನೀಡಿದೆ.
ಹಿಂದಿನ ವಿಚಾರಣೆಯಲ್ಲಿ ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ್ದ, ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಅವರು ಸಂವಿಧಾನದ 213 ನೇ ವಿಧಿಗೆ ಅನುಗುಣವಾಗಿ ಎರಡನೇ ಸುಗ್ರೀವಾಜ್ಞೆಯ ಸೆಕ್ಷನ್ 13 ಇಲ್ಲ ಎಂದು ಹೇಳಿದ್ದರು.
ಅಲ್ಲದೆ ಸುಗ್ರೀವಾಜ್ಞೆಯನ್ನು ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅವರು ಅದನ್ನು ಹಿಂಪಡೆಯಬಹುದು. ಆದರೆ ಅದು ನಷ್ಟವಾಗವುದನ್ನು ತಪ್ಪಿಸಲು ಅವರು ಮೊದಲ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದರು ಎಂದು ವಾದ ಮಂಡಿಸಲಾಗಿತ್ತು. ಈ ವಿಷಯದಲ್ಲಿ ಮಧ್ಯಂತರ ಆದೇಶ ಹೊರಡಿಸಲು ಪ್ರೊ ರವಿವರ್ಮಕುಮಾರ್ ಅವರು ಪೀಠವನ್ನು ಕೋರಿದ್ದರು. ಆದರೆ, ರಾಜ್ಯದ ವಾದ ಆಲಿಸಿದ ನಂತರವೇ ಆದೇಶ ಹೊರಡಿಸುವುದಾಗಿ ನ್ಯಾಯಾಲಯ ಹೇಳಿತ್ತು.
ಬೇರೊಂದು ಮನವಿಯಲ್ಲಿ ನ್ಯಾಯವಾದಿ ಶ್ರೀಧರ್ ಪ್ರಭು ಅವರು ಇದೇ ರೀತಿಯ ಪರಿಹಾರ ಕೋರಿದ್ದರು. ಕಂಪೆನಿಗಳು ಮತ್ತು ಇತರ ವ್ಯಕ್ತಿಗಳಿಗೆ ಕೃಷಿ ಭೂಮಿ ಹೊಂದಲು ಅವಕಾಶ ಇರುವುದರಿಂದ ʼಎರಡನೇ ಸುಗ್ರೀವಾಜ್ಞೆಯು ಗೈರು ಭೂಮಾಲೀಕತ್ವಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದು ಅವರು ವಾದಿಸಿದ್ದರು.
ಸುಗ್ರೀವಾಜ್ಞೆಯು ಕೃಷಿ ಭೂಮಿ ಖರೀದಿಸಲು ಕಂಪೆನಿಗಳು ಸೇರಿದಂತೆ ಕೃಷಿಯೇತರರಿಗೆ ದಾರಿ ಮಾಡಿಕೊಟ್ಟಿದೆ, ಪರಿವರ್ತನೆ ಔಪಚಾರಿಕತೆ ಪೂರ್ಣಗೊಂಡ ನಂತರ ಕೃಷಿಯೇತರ ಉದ್ದೇಶಗಳಿಗಾಗಿ ಇದನ್ನು ಬಳಸಲು ಅನುಕೂಲವಾಗಲಿದೆ ಎಂದು ಅವರು ವಾದಿಸಿದ್ದರು.
2020 ರ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಸುಗ್ರೀವಾಜ್ಞೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಪಿಐಎಲ್‌ನಲ್ಲಿ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಮೊದಲ ಸುಗ್ರೀವಾಜ್ಞೆಯ ಗಡುವು ಆರು ತಿಂಗಳಲ್ಲಿ ಮುಕ್ತಾಯಗೊಂಡಿದ್ದರಿಂದ ಈ ಅರ್ಜಿಯಲ್ಲಿನ ಯಾವುದೇ ಮನವಿಗಳು ನಿಲ್ಲುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಪ್ರಕರಣ ಮುಂದಿನ ಜನವರಿ 6 ರಂದು ವಿಚಾರಣೆಗೆ ಬರಲಿದೆ.