NRC 
ಸುದ್ದಿಗಳು

[ಸಂಸತ್ ಅಧಿವೇಶನ] ರಾಷ್ಟ್ರಮಟ್ಟದಲ್ಲಿ ಎನ್ಆರ್‌ಸಿ ಸಿದ್ಧಪಡಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಕೇಂದ್ರ ಸರ್ಕಾರ

ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ಸಂಬಂಧಿಸಿದಂತೆ ಸಂಸತ್ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ಹಿಬಿ ಈಡನ್ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವಾಲಯ ಪ್ರತಿಕ್ರಿಯಿಸಿದೆ.

Bar & Bench

ರಾಷ್ಟ್ರ ಮಟ್ಟದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಸಿದ್ಧಪಡಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ಎನ್‌ಆರ್‌ಸಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇರಳದ ಕಾಂಗ್ರೆಸ್‌ ಯುವ ಮುಖಂಡ, ಸಂಸದ ಹಿಬಿ ಈಡನ್ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ. "ಇಲ್ಲಿಯವರೆಗೆ, ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ತಯಾರಿಸಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಉತ್ತರದಲ್ಲಿ ಹೇಳಲಾಗಿದೆ.

ಸಿಎಎ ಅಡಿ ನಿಯಮಗಳನ್ನು ರೂಪಿಸಿದ ನಂತರ ಸಿಎಎ ವ್ಯಾಪ್ತಿಗೆ ಬರುವ ವ್ಯಕ್ತಿಗಳು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಒಟ್ಟು 1,33,83,718 ಭಾರತೀಯ ಪ್ರಜೆಗಳು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ಸಿಎಎ ಕುರಿತಂತೆ ಡಿಸೆಂಬರ್ 12, 2019 ರಂದು ಅಧಿಸೂಚನೆ ಹೊರಡಿಸಲಾಗಿದ್ದು ಜನವರಿ 10, 2020 ರಂದು ಜಾರಿಗೆ ಬಂದಿದೆ ಎಂದು ಎಂಎಚ್‌ಎ ಮಾಹಿತಿ ನೀಡಿದೆ. ಸಿಎಎ ಅಡಿಯಲ್ಲಿ ನಿಯಮಗಳನ್ನು ಸೂಚಿಸಿದ ನಂತರ ಸಿಎಎ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಎನ್‌ಆರ್‌ಸಿ ಸಿದ್ಧಪಡಿಸುವ ಕುರಿತು ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.