Supreme Court 
ಸುದ್ದಿಗಳು

ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠಗಳ ರಚನೆ ಪರ ನಿಂತ ಸಂಸದೀಯ ಸಮಿತಿ

'ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಅವುಗಳ ಸುಧಾರಣೆ' ಕುರಿತ ತನ್ನ 133ನೇ ವರದಿಯನ್ನು ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿ ಸಂಸತ್ತಿನ ಉಭಯ ಸದನಗಳಲ್ಲಿ ಸೋಮವಾರ ಮಂಡಿಸಿತು.

Bar & Bench

ನ್ಯಾಯ ಲಭ್ಯತೆಯನ್ನು ಸುಗಮಗೊಳಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ ಪ್ರಾದೇಶಿಕ ಪೀಠಗಳ ಸ್ಥಾಪನೆ ಮಾಡುವಂತೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿ, ಸಂಸತ್ತಿನ ಉಭಯ ಸದನಗಳಲ್ಲಿ 'ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಅವುಗಳ ಸುಧಾರಣೆ' ಕುರಿತ ತನ್ನ 133ನೇ ವರದಿಯನ್ನು ಸೋಮವಾರ ಮಂಡಿಸಿದ ವೇಳೆ ಈ ವಿಚಾರ ತಿಳಿಸಿದೆ.

ವರದಿಯ ಪ್ರಕಾರ ಪ್ರಾದೇಶಿಕ ಪೀಠಗಳ ರಚನೆ ಬಗ್ಗೆ ಚರ್ಚೆ ನಡೆದಾಗ ಅವುಗಳ ಸ್ಥಾಪನೆ ಪರವಾಗಿ ಬಹುತೇಕ ಸರ್ವಾನುಮತದ ಸಮ್ಮತಿ ದೊರೆತಿದೆ. ಆದರೂ ಕೆಲ ಸದಸ್ಯರು ʼವರ್ಚುವಲ್‌ ವಿಧಾನದಲ್ಲಿ ನ್ಯಾಯಾಲಯ ಕಲಾಪಕ್ಕಾಗಿ ಒತ್ತಡ ಇದ್ದು ಮುಂದಿನ ದಿನಗಳಲ್ಲಿ 5ಜಿ ಮೂಲಸೌಕರ್ಯ ದೊರೆಯುವುದರಿಂದ ಸಮಸ್ಯೆಯನ್ನು ಹೆಚ್ಚು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ ಎಂದು  ಅಭಿಪ್ರಾಯಪಟ್ಟಿದ್ದಾರೆ.  

ಸಮಿತಿಯ ಸದಸ್ಯ, ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮತ್ತು ಹಿರಿಯ ವಕೀಲ ಪಿ ವಿಲ್ಸನ್ ಅವರ ಪ್ರಕಾರ, ಸುಪ್ರೀಂ ಕೋರ್ಟ್‌ ಪ್ರಾದೇಶಿಕ ಪೀಠಗಳ ರಚನೆ ಮತ್ತು ನ್ಯಾಯಮೂರ್ತಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವುದರಿಂದ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗಲಿದ್ದು ಪ್ರಕರಣಗಳು ಬಾಕಿ ಇಳಿಮುಖವಾಗಲು ಸಹಕಾರಿಯಾಗಲಿದೆ.

ಈ ರೀತಿ ಹೆಚ್ಚಳ ಮಾಡುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ನ್ಯಾಯಮೂರ್ತಿಗಳ ಸಂಖ್ಯೆಯ ಹೆಚ್ಚಳಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಹೀಗಾಗಿ, ಸುಪ್ರೀಂಕೋರ್ಟ್‌ನ ಶಾಶ್ವತ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವುದು ಅತ್ಯಗತ್ಯ ಎಂದು ವಿಲ್ಸನ್‌ ಒತ್ತಿ ಹೇಳಿದ್ದಾರೆ.