Supreme Court
Supreme Court 
ಸುದ್ದಿಗಳು

ಹಣಕಾಸು ಮಸೂದೆಯಾಗಿ ವಿತ್ತ ಕಾಯಿದೆ: ಆದ್ಯತೆ ಮೇರೆಗೆ ಸುಪ್ರೀಂ ವಿಚಾರಣೆ ನಡೆಸುವುದನ್ನು ವಿರೋಧಿಸಿದ ಕೇಂದ್ರ ಸರ್ಕಾರ

Bar & Bench

ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದನ್ನು ತಪ್ಪಿಸುವುದಕ್ಕಾಗಿ ಹಣಕಾಸು ಮಸೂದೆಗಳಾಗಿ ವಿವಿಧ ಕಾಯಿದೆಗಳನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದ ರೋಜರ್ ಮ್ಯಾಥ್ಯೂ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್‌ ನಡುವಣ ಪ್ರಕರಣವನ್ನು ಆದ್ಯತೆ ಮೇರೆಗೆ  ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ವಿರೋಧ ವ್ಯಕ್ತಪಡಿಸಿದೆ.

ವಿಚಾರಣಾ ಪ್ರಕ್ರಿಯಾ ನಿರ್ದೇಶನಗಳಿಗಾಗಿ  ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದೆದುರು ಪ್ರಕರಣವನ್ನು ಇಂದು ಪಟ್ಟಿ ಮಾಡಲಾಗಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಪ್ರಕರಣದ ವಿಚಾರಣೆಗೆ ಮುಂದಾದಾಗ ಪ್ರಕರಣಕ್ಕೆ ಆದ್ಯತೆ ನೀಡುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಸೂಚಿಸಿದರು.

ಆದರೆ ರಾಜಕೀಯ ಅಗತ್ಯತೆಗಳ ಆಧಾರದ ಮೇಲೆ ಪ್ರಕರಣಕ್ಕೆ ಆದ್ಯತೆ ನೀಡುವುದಕ್ಕೆ ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿಐ) ತುಷಾರ್ ಮೆಹ್ತಾ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

1994ರ ಹಣಕಾಸು ಕಾಯಿದೆಗೆ ಕೆಲ ತಿದ್ದುಪಡಿ ಮಾಡಿ ಮಂಡಿಸಲಾದ ಹಣಕಾಸು ಕಾಯಿದೆ, 2017ಅನ್ನು ಸಂವಿಧಾನದ 110ನೇ ವಿಧಿಯಡಿ  ಹಣಕಾಸು ಮಸೂದೆ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಹಣಕಾಸು ಕಾಯಿದೆ- 2017ರ ಮೂಲಕ ಮಾಡಲಾದ ತಿದ್ದುಪಡಿಗಳು ಹಣಕಾಸು ಮಸೂದೆ ವ್ಯಾಪ್ತಿಯಲ್ಲಿವೆಯೇ ಮತ್ತು ಮಸೂದೆ ಅಂಗೀಕರಿಸುವಾಗ ಅನುಸರಿಸಲಾದ ಕಾರ್ಯವಿಧಾನಗಳು ಸಿಂಧುವೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ.

ನವೆಂಬರ್ 2019 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಹಣಕಾಸು ಕಾಯಿದೆ 2017 ಅನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸುವ ಸಿಂಧುತ್ವವನ್ನು ವಿಸ್ತೃತ ಪೀಠ ನಿರ್ಧರಿಸಬೇಕು ಎಂದು ಆದೇಶಿಸಿತ್ತು.

ನ್ಯಾಯಮಂಡಳಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಯೋಜನೆಗಳನ್ನು ಪರಿಷ್ಕೃತ ಹಣಕಾಸು ಕಾಯಿದೆ- 2017 ಪರಿಷ್ಕರಿಸಿದ್ದು ಇದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಇದಕ್ಕೂ ಹಿಂದಿನ ತೀರ್ಪಿನಲ್ಲಿ ಆಧಾರ್‌ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿತ್ತು. ಈ ತೀರ್ಪು ಐವರು ನ್ಯಾಯಮೂರ್ತಿಗಳ ಪೀಠದಿಂದ ಬಂದಿದ್ದರಿಂದ, ಸುಪ್ರೀಂ ಕೋರ್ಟ್ ತನ್ನ 2019ರ ತೀರ್ಪಿನಲ್ಲಿ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ಉಲ್ಲೇಖಿಸಲು ನಿರ್ಧರಿಸಿತು.

ಕುತೂಹಲಕಾರಿ ಸಂಗತಿಯೆಂದರೆ, ಆಗ ಸುಪ್ರೀಂ ಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಹಾಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಆಧಾರ್ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದರು. ಆಧಾರ್ ಕಾಯಿದೆಯನ್ನು ಹಣಕಾಸು ಮಸೂದೆ ರೂಪದಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.