Kangana Ranaut, Bombay High Court
Kangana Ranaut, Bombay High Court 
ಸುದ್ದಿಗಳು

ಕಂಗನಾ ಪ್ರಕರಣ: ಪಾಸ್‌ಪೋರ್ಟ್‌ ಪ್ರಾಧಿಕಾರವನ್ನು ಪ್ರತಿವಾದಿ ಮಾಡದ ಹೊರತು ಆದೇಶ ಹೊರಡಿಸಲಾಗದು ಎಂದ ಬಾಂಬೆ ಹೈಕೋರ್ಟ್‌

Bar & Bench

ಪಾಸ್‌ಪೋರ್ಟ್‌ ನವೀಕರಿಸುವಂತೆ ಕೋರಿರುವ ಮನವಿಯಲ್ಲಿ ತಿದ್ದುಪಡಿ ಮಾಡಿ ಕೇಂದ್ರೀಯ ಪಾಸ್‌ಪೋರ್ಟ್‌ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿಸಲು ಬಾಂಬೆ ಹೈಕೋರ್ಟ್‌ ಮಂಗಳವಾರ ಬಾಲಿವುಡ್‌ ನಟಿ ಕಂಗನಾ ರನೌತ್‌ಗೆ ಒಂದು ವಾರ ಕಾಲಾವಕಾಶ ನೀಡಿದೆ.

ಸಮರ್ಥವಾದ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸಲು ವಿಫಲರಾಗಿದ್ದೀರಿ ಎಂದು ಕಂಗನಾ ವಕೀಲರಾದ ರಿಜ್ವಾನ್‌ ಸಿದ್ದಿಕಿಯತ್ತ ನ್ಯಾಯಮೂರ್ತಿಗಳಾದ ಪಿ ಬಿ ವರಲೆ ಮತ್ತು ಎಸ್‌ ಪಿ ತಾವಡೆ ಅವರಿದ್ದ ವಿಭಾಗೀಯ ಪೀಠವು ಬೆರಳು ಮಾಡಿತು.

“ಮನವಿಯಲ್ಲಿ ಪಾಸ್‌ಪೋರ್ಟ್‌ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸದೇ ಅವರ ವಿರುದ್ಧ ನಾವು ಆದೇಶ ಹೊರಡಿಸಿಬೇಕು ಎಂದು ನೀವು ಬಯಸುತ್ತಿದ್ದೀರಿ…” ಎಂದು ನ್ಯಾಯಾಲಯ ಹೇಳಿತು.

ಕಂಗನಾ ಪಾಸ್‌ಪೋರ್ಟ್‌ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರ ಎತ್ತಿರುವ ನಿರ್ದಿಷ್ಟ ಆಕ್ಷೇಪದ ಮಾಹಿತಿಯನ್ನು ನಿಮ್ಮ ಮನವಿಯಲ್ಲಿ ಎಲ್ಲಿ ಉಲ್ಲೇಖಿಸಿದ್ದೀರಿ ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ವಕೀಲ ಸಿದ್ದಿಕಿ ಅವರು ತಮ್ಮಿಂದ ತಪ್ಪಾಗಿದೆ. ಅಗತ್ಯ ತಿದ್ದುಪಡಿ ಮಾಡಲು ಕಾಲಾವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.

ಆಗ, ಅಗತ್ಯ ತಿದ್ದುಪಡಿ ಮಾಡಲು ಒಂದು ವಾರ ಕಾಲಾವಕಾಶ ನೀಡಿದ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು. ಕಂಗನಾ ಅವರಿಗಾಗಿ ಸಿನಿಮಾ ಚಿತ್ರೀಕರಣವನ್ನು ತಡೆದಿದ್ದು, ಆದಷ್ಟು ಬೇಗ ಅವರಿಗೆ ಪಾಸ್‌ಪೋರ್ಟ್‌ ಬೇಕಿದೆ. ಹಾಗಾಗಿ, ಪ್ರಕರಣವನ್ನು ಶೀಘ್ರದಲ್ಲಿ ಆಲಿಸುವಂತೆ ಸಿದ್ದಿಕಿ ಕೋರಿದರು.

ಇದಕ್ಕೆ ನಿರಾಕರಿಸಿದ ಪೀಠವು, ಕಂಗನಾ ಅಷ್ಟೊಂದು ಜಾಗರೂಕತೆವಹಿಸಿದ್ದರೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆ ಬಳಿಕ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಬೇಕಿತ್ತು ಎಂದಿತು. “ಇದು ಸಿನಿಮಾ ಚಿತ್ರೀಕರಣಷ್ಟೆ. ಕಂಗನಾಗಾಗಿ ಅವರು ಚಿತ್ರೀಕರಣ ವೇಳಾಪಟ್ಟಿಯನ್ನು ಪರಿಷ್ಕರಿಸಿಕೊಳ್ಳಲಿದ್ದಾರೆ. ಅಷ್ಟೊಂದು ತುರ್ತು ಇದ್ದರೆ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಮ್ಮನ್ನು (ಸಿದ್ದಿಕಿ) ಸಂಪರ್ಕಿಸಬೇಕಿತ್ತು. ನಿಮ್ಮ ಮನವಿಯು ಅಸ್ಪಷ್ಟವಾಗಿದೆ. ನಿಮಗೆ ಇನ್ನೂ ಮುಂಚಿತವಾದ ದಿನಾಂಕ ನೀಡಿದ್ದೇವೆ!” ಎಂದು ಹೇಳಿದ ನ್ಯಾಯಾಲಯವು ಜೂನ್‌ 25ಕ್ಕೆ ವಿಚಾರಣೆ ಮುಂದೂಡಿದೆ.