ದೇಶದ್ರೋಹ ಆರೋಪ: ಪಾಸ್‌ಪೋರ್ಟ್‌ ನವೀಕರಣಕ್ಕೆ ಆಕ್ಷೇಪಿಸಿದ ಪ್ರಾಧಿಕಾರದ ವಿರುದ್ಧ ಬಾಂಬೆ ಹೈಕೋರ್ಟ್‌ ಕದತಟ್ಟಿದ ಕಂಗನಾ

ಚಿತ್ರವೊಂದರ ಪ್ರಧಾನ ಭೂಮಿಕೆಯಲ್ಲಿ ತಾವಿದ್ದು, ಇದರ ಚಿತ್ರೀಕರಣಕ್ಕಾಗಿ ಜೂನ್‌ 15 ರಿಂದ ಆಗಸ್ಟ್‌ವರೆಗೆ ಹಂಗರಿಯ ಬುಡಾಪೆಸ್ಟ್‌ಗೆ ತೆರಳಬೇಕಿದೆ ಎಂದು ಕಂಗನಾ ರನೌತ್‌ ಮನವಿಯಲ್ಲಿ ತಿಳಿಸಿದ್ದಾರೆ.
Bombay High Court, Kangana Ranaut
Bombay High Court, Kangana Ranaut
Published on

ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಪೊಲೀಸರು ತಮ್ಮ ವಿರುದ್ಧ ಪ್ರಥಮ ವರ್ತಮಾನನ ವರದಿ (ಎಫ್‌ಐಆರ್‌) ದಾಖಲಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಪಾಸ್‌ಪೋರ್ಟ್‌ ಪ್ರಾಧಿಕಾರವು ಪಾಸ್‌ಪೋರ್ಟ್‌ ನವೀಕರಿಸಲು ಆಕ್ಷೇಪಿಸುತ್ತಿದ್ದು, ಪಾಸ್‌ಪೋರ್ಟ್‌ ನವೀಕರಿಸಲು ಸೂಕ್ತ ನಿರ್ದೇಶನವನ್ನು ಪ್ರಾಧಿಕಾರಕ್ಕೆ ನೀಡಬೇಕೆಂದು ಕೋರಿ ಬಾಲಿವುಡ್‌ ನಟಿ ಕಂಗನಾ ರನೌತ್‌ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ದ್ವೇಷಪೂರಿತ ಹಾಗೂ ದೇಶದ್ರೋಹದ ಟ್ವೀಟ್‌ಗಳನ್ನು ಮಾಡಿದ ಆರೋಪದಲ್ಲಿ ಮುಂಬೈನ ಬಾಂದ್ರಾ ಪೊಲೀಸರು ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣದಡಿ ಎಫ್‌ಐಆರ್‌ ದಾಖಲಿಸಿದ್ದರು.

ನಟಿಯಾಗಿರುವುದರಿಂದ ತಾವು ದೇಶದ ವಿವಿಧೆಡೆ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ತೆರಳಬೇಕಿರುವುದು ವೃತ್ತಿ ಬದ್ಧತೆಯಾಗಿದೆ. ಚಿತ್ರವೊಂದರಲ್ಲಿ ತಾನು ಪ್ರಧಾನ ಭೂಮಿಕೆಯಲ್ಲಿರುವುದರಿಂದ ಜೂನ್‌ 15 ರಿಂದ ಆಗಸ್ಟ್‌ವರೆಗೆ ಹಂಗರಿಯ ಬುಡಾಪೆಸ್ಟ್‌ಗೆ ತೆರಳಬೇಕಿದೆ. ಸೆಪ್ಟೆಂಬರ್‌ನಲ್ಲಿ ಪಾಸ್‌ಪೋರ್ಟ್‌ ಅವಧಿ ಮುಗಿಯಲಿದೆ. ಹೀಗಾಗಿ ಅದನ್ನು ನವೀಕರಿಸಲು ನಿರ್ದೇಶಿಸಬೇಕು ಎಂದು ಕಂಗನಾ ಮನವಿ ಮಾಡಿದ್ದಾರೆ.

ಪಾಸ್‌ಪೋರ್ಟ್‌ ನವೀಕರಣಕ್ಕೆ ಮನವಿ ಸಲ್ಲಿಸಿದ್ದೇನೆ. ಆದರೆ, ನನ್ನ ವಿರುದ್ದ ಎಫ್‌ಐಆರ್‌ ದಾಖಲಾಗಿರುವುದನ್ನು ಉಲ್ಲೇಖಿಸಿ ಭಾರತೀಯ ಪಾಸ್‌ಪೋರ್ಟ್‌ ಪ್ರಾಧಿಕಾರವು ಪಾಸ್‌ಪೋರ್ಟ್‌ ನವೀಕರಿಸಲು ನಿರಾಕರಿಸಿದೆ ಎಂದು ಮನವಿಯಲ್ಲಿ ಕಂಗನಾ ತಿಳಿಸಿದ್ದಾರೆ. ನಿರ್ದಿಷ್ಟ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಸಿನಿಮಾ ನಿರ್ಮಾಣ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಇದರಲ್ಲಿ ನಾನು ಭಾಗವಹಿಸಬೇಕಿದ್ದು, ಇದಕ್ಕೆ ಪಾಸ್‌ಪೋರ್ಟ್‌ ನವೀಕರಣ ಅತ್ಯಗತ್ಯವಾಗಿದೆ ಎಂದು ರನೌತ್‌ ತಿಳಿಸಿದ್ದಾರೆ.

Also Read
ಕಂಗನಾ ವಿರುದ್ಧದ ಎಲ್ಲಾ ಆರೋಪಗಳು ಪರಿಗಣನೆಗೆ ಯೋಗ್ಯ ಎಂದ ಮುಂಬೈ ನ್ಯಾಯಾಲಯ: ಎಫ್‌ಐಆರ್‌ ದಾಖಲಿಸಿಕೊಳ್ಳಲು ಆದೇಶ

ಮ್ಯಾಜಿಸ್ಟ್ರೇಟ್‌ ಆದೇಶವಾಗಲಿ ಮತ್ತು ಆಕ್ಷೇಪಾರ್ಹವಾದ ಎಫ್‌ಐಆರ್‌ನಿಂದಾಗಲಿ ತನ್ನ ಹೆಸರಿನಲ್ಲಿ ಪಾಸ್‌ಪೋರ್ಟ್‌ ಪಡೆಯುವ ಹಕ್ಕಿಗೆ ಸಮಸ್ಯೆ ಉಂಟು ಮಾಡಬಾರದು ಎಂಬುದನ್ನು ಖಾತರಿಪಡಿಸುವಂತೆ ಕಂಗನಾ ನ್ಯಾಯಾಲಯವನ್ನು ಕೋರಿದ್ದಾರೆ.

ಕಂಗನಾ ದ್ವೇಷಪೂರಿತ ಟ್ವೀಟ್‌ಗಳನ್ನು ಆಧರಿಸಿ ತನಿಖೆ ನಡೆಸುವಂತೆ ಕೋರಿದ್ದ ಮುನ್ನಾವರಲಿ ಸಯ್ಯದ್‌ ದೂರಿನ ಮೇರಿಗೆ ಬಾಂದ್ರಾದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದರು. ಇದನ್ನು ಆಧರಿಸಿ ಬಾಂದ್ರಾ ಪೊಲೀಸರು ಕಂಗನಾ ಸಹೋದರಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153ಎ (ಎರಡು ಸಮುದಾಯಗಳ ನಡುವೆ ದ್ವೇಷ ಹರಡುವುದು), 295ಎ (ಧಾರ್ಮಿಕ ಭಾವನೆ ಕೆರಳಿಸುವುದು), 124ಎ (ದೇಶದ್ರೋಹ) ಜೊತೆಗೆ 34 ರ (ಪಿತೂರಿ) ಅಡಿ ದೂರು ದಾಖಲಿಸಿದ್ದಾರೆ.

ಎಫ್‌ಐಆರ್‌ ರದ್ದುಪಡಿಸುವಂತೆ ಮತ್ತು ಮ್ಯಾಜಿಸ್ಟ್ರೇಟ್‌ ಆದೇಶವನ್ನು ಬದಿಗೆ ಸರಿಸುವಂತೆ ರನೌತ್‌ ಕೋರಿದ್ದಾರೆ. ರನೌತ್‌ ಸಹೋದರಿಯ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ನ್ಯಾಯಾಲಯವು ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಈ ಹಿಂದೆಯೇ ಆದೇಶ ಮಾಡಿದೆ.

Kannada Bar & Bench
kannada.barandbench.com