A1
ಸುದ್ದಿಗಳು

ಪಾಟಿದಾರ್ ಆಂದೋಲನ ಹಿಂಸಾಚಾರ: ಬಿಜೆಪಿಯ ಹಾರ್ದಿಕ್ ಪಟೇಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ಪ್ರಕರಣದಲ್ಲಿ ಪಟೇಲ್ ಅವರಿಗೆ ಈ ಹಿಂದೆ ನೀಡಿದ್ದ ಮಧ್ಯಂತರ ಪರಿಹಾರ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಶಾಶ್ವತಗೊಳಿಸಿದೆ.

Bar & Bench

ಗುಜರಾತ್‌ನಲ್ಲಿ 2015ರಲ್ಲಿ ನಡೆದ ಪಾಟಿದಾರ್ ಆಂದೋಲನದ ವೇಳೆ ದಾಖಲಾದ ಗಲಭೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾರ್ದಿಕ್ ಪಟೇಲ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಪ್ರಕರಣದಲ್ಲಿ ಪಟೇಲ್‌ ಅವರಿಗೆ ಈ ಹಿಂದೆ ನೀಡಿದ್ದ ಮಧ್ಯಂತರ ಪರಿಹಾರ ಆದೇಶವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಶಾತ್ವತಗೊಳಿಸಿದೆ.

ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಗುಜರಾತ್‌ನಲ್ಲಿ ಪಾಟಿದಾರ್ ಆಂದೋಲನ ನಡೆದಿತ್ತು. ಈ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಹ್ಸಾನಾದ ವಿಚಾರಣಾ ನ್ಯಾಯಾಲಯವು ಪಟೇಲ್‌ ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ರದ್ದುಗೊಳಿಸಲು ಕೋರಿ ಆಗ ಕಾಂಗ್ರೆಸ್ ಪಕ್ಷದಲ್ಲಿದ್ದ ಪಟೇಲ್‌ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದ್ದರು. 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು ತನ್ನ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅವರು ಕೋರಿದ್ದರು. ಆದರೆ ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿತ್ತು.