ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ್ದ ವಿದ್ಯಾರ್ಥಿ ನಾಯಕ ಡಿಬಾರ್: ದೆಹಲಿ ವಿವಿ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಒಂದು ವರ್ಷದವರೆಗೆ ಯಾವುದೇ ಪರೀಕ್ಷೆಗಳಿಗೆ ಹಾಜರಾಗದಂತೆ ಎನ್ಎಸ್ಯುಐ ಮುಖಂಡ ಲೋಕೇಶ್ ಚುಗ್ ಅವರನ್ನು ಡಿಬಾರ್ ಮಾಡಲಾಗಿತ್ತು.
BBC's documentary , Delhi high court
BBC's documentary , Delhi high court

ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಘಟಕವಾದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್‌ ಚುಗ್‌ ತಮ್ಮನ್ನು ಪರೀಕ್ಷೆಯಿಂದ ಡಿಬಾರ್‌ ಮಾಡಿರುವುದನ್ನು ಪ್ರಶ್ನಿಸಿದ್ದ ಮನವಿ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಗುರುವಾರ ದೆಹಲಿ ವಿಶ್ವವಿದ್ಯಾಲಯಕ್ಕೆ ನೋಟಿಸ್‌ ನೀಡಿದೆ.

ಒಂದು ವರ್ಷದ ಅವಧಿಗೆ ಯಾವುದೇ ವಿಶ್ವವಿದ್ಯಾಲಯ/ಕಾಲೇಜು/ಇಲಾಖೆಯ ಪರೀಕ್ಷೆಯಲ್ಲಿ ಭಾಗವಹಿಸದಂತೆ ಚುಗ್‌ ಅವರನ್ನು ಡಿಬಾರ್ ಮಾಡಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಅವರು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.

Also Read
ಬಿಬಿಸಿ ಸಾಕ್ಷ್ಯಚಿತ್ರದ ಮೇಲಿನ ನಿಷೇಧ, ಐಟಿ ದಾಳಿ ಖಂಡಿಸಿದ ನಿವೃತ್ತ ನ್ಯಾ. ರೋಹಿಂಟನ್‌ ನಾರಿಮನ್‌

ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದಾರೆ. ಏಪ್ರಿಲ್ 18ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 27, 2023ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಬಿಬಿಸಿ ನಿರ್ಮಿಸಿದ್ದ ʼಇಂಡಿಯಾ: ದ ಮೋದಿ ಕ್ವೆಶ್ಚನ್‌ʼ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿತ್ತು.

Also Read
ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿ ನಿಷೇಧ ಕೋರಿದ್ದ ಹಿಂದೂ ಸೇನಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ಸಾಕ್ಷ್ಯಚಿತ್ರ ಪ್ರದರ್ಶನ ನಡೆದ ಸ್ಥಳದಲ್ಲಿ ತಾನು ಇರಲಿಲ್ಲ. ಬದಲಿಗೆ ಮಾಧ್ಯಮದ ನೇರ ಸಂದರ್ಶನದಲ್ಲಿ ಪಾಲ್ಗೊಂಡಿದ್ದೆ. ನಿಷೇಧಿತ ಎನ್ನಲಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಕ್ಕಾಗಿ ಪೊಲೀಸರು ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಅವರ ಮೇಲೆ ಶಾಂತಿ ಭಂಗ ತಂದ ಆರೋಪ ಹೊರಿಸಿದರು. ಆದರೆ ಬಂಧಿತ ವಿದ್ಯಾರ್ಥಿಗಳಲ್ಲಿ ತಾನು ಇರಲಿಲ್ಲ ಅಥವಾ ತನ್ನ ಮೇಲೆ ಪೊಲೀಸರು ಯಾವುದೇ ಆರೋಪ ಮಾಡಿರಲಿಲ್ಲ ಎಂದು ಚುಗ್‌ ಮನವಿಯಲ್ಲಿ ತಿಳಿಸಿದ್ದಾರೆ.

ಆದರೂ ವಿವಿ ತನಗೆ ಫೆಬ್ರವರಿ 16ರಂದು ಶೋಕಾಸ್‌ ನೋಟಿಸ್‌ ನೀಡಿತು. ಸಾಕ್ಷ್ಯಚಿತ್ರ ಪ್ರದರ್ಶನ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದಿರುವುದಾಗಿ ಆರೋಪಿಸಲಾಯಿತು. ಮಾರ್ಚ್ 10 ರಂದು ತನ್ನನ್ನು ಡಿಬಾರ್‌ ಮಾಡಿದ ಜ್ಞಾಪನಾಪತ್ರ ನೀಡಲಾಯಿತು. ವಿವಿಯು ಸ್ವಾಭಾವಿಕ ನ್ಯಾಯದ ತತ್ವವನ್ನು ಉಲ್ಲಂಘಿಸಿ ಆದೇಶ ಹೊರಡಿಸಿದ್ದು ಶಿಸ್ತು ಪ್ರಾಧಿಕಾರ ತನ್ನ ವಿರುದ್ಧ ಮಾಡಿದ ಆರೋಪ ಮತ್ತು ಶೋಧದ ಬಗ್ಗೆ ತನಗೆ ತಿಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಆದ್ದರಿಂದ, ಜ್ಞಾಪನಾಪತ್ರವನ್ನು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಲ್ಲಿ ಚುಗ್ ಪಾತ್ರವಿದೆ ಎಂಬ ನೋಟಿಸ್ ಅನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜ್ಞಾಪನಾಪತ್ರಕ್ಕೆ ತಡೆ ನೀಡುವಂತೆಯೂ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com