Chief Justice Sanjay Karol and Justice Sanjay Kumar
Chief Justice Sanjay Karol and Justice Sanjay Kumar  
ಸುದ್ದಿಗಳು

ಬಿಹಾರ ಪುರಸಭಾ ಚುನಾವಣೆಯ ಒಬಿಸಿ, ಇಬಿಸಿ ಮೀಸಲಾತಿ ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್

Bar & Bench

ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂಪಿಸಿದ್ದ ತ್ರಿವಳಿ ಪರೀಕ್ಷೆ ಉಲ್ಲಂಘಿಸಿದ ಕಾರಣಕ್ಕೆ ಬಿಹಾರದ ಪಾಲಿಕೆ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ (ಒಬಿಸಿ) ಮತ್ತು ಅತಿ ಹಿಂದುಳಿದ ವರ್ಗಕ್ಕಾಗಿ (ಇಬಿಸಿ) ನೀಡಲಾಗಿದ್ದ ಮೀಸಲಾತಿಯನ್ನು ಪಾಟ್ನಾ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ [ಸುನಿಲ್ ಕುಮಾರ್ ಮತ್ತಿತರರು ಹಾಗೂ ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಒಬಿಸಿ/ಇಬಿಸಿ ವರ್ಗಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವಾಗ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ತ್ರಿವಳಿ ಪರೀಕ್ಷೆಗಳಲ್ಲಿ ಎರಡನ್ನು ಪಾಲಿಸಲು ಬಿಹಾರ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎಸ್ ಕುಮಾರ್ ಅವರಿದ್ದ ಪೀಠ ಹೇಳಿದೆ. ಒಬಿಸಿಗೆ ಮೀಸಲಾದ ಸ್ಥಾನಗಳನ್ನು ಸಾಮಾನ್ಯ ವರ್ಗದ ಸ್ಥಾನಗಳಾಗಿ ಮತ್ತೆ ನೋಟಿಫೈ ಮಾಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪೀಠ ಸೂಚಿಸಿದೆ.

ಪರಿಣಾಮ, ಬಿಹಾರ ಸರ್ಕಾರದ ಎಲ್ಲಾ ಪುರಸಭೆಗಳಿಗೆ ಅಕ್ಟೋಬರ್ 10 ಮತ್ತು 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ತ್ರಿವಳಿ ಪರೀಕ್ಷೆಗಳನ್ನು ಉಲ್ಲಂಘಿಸಿರುವುದರಿಂದ ಪಾಟ್ನಾ ನಗರ ನಿಗಮ ಚುನಾವಣೆಯನ್ನು ಹಿಂದುಳಿದ ವರ್ಗದ ವರ್ಗಕ್ಕೆ ಮೀಸಲಾತಿ ನೀಡದೆ ನಡೆಸಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ತ್ರಿವಳಿ ಪರೀಕ್ಷೆ ಎಂದರೇನು?

ವಿಕಾಸ್ ಕಿಶನ್‌ರಾವ್ ಗಾವಳಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಪ್ರಸ್ತಾಪಿಸಿರುವ ತ್ರಿವಳಿ ಪರೀಕ್ಷೆಯ ಪ್ರಕಾರ, ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನ ಮೀಸಲಿಡುವ ಮೊದಲು ಸರ್ಕಾರ ಈ ಕೆಳಗಿನ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ:

  • ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ಸಮುದಾಯಗಳ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಆಯೋಗ ರಚಿಸಬೇಕು. 

  • ಈ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ನಿಗದಿಪಡಿಸಬೇಕು. 

  • ಮೀಸಲಾತಿ ಶೇ50 ರ ಮಿತಿಯನ್ನು ಉಲ್ಲಂಘಿಸುವಂತಿಲ್ಲ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Sunil_Kumar___Ors_v_State_of_Bihar___Ors.pdf
Preview