ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿಗೆ ಒಟ್ಟು ಸೀಟುಗಳಲ್ಲಿ ಶೇ.33 ಮೀಸಲಾತಿ ಕಲ್ಪಿಸಲು ನ್ಯಾ.ಭಕ್ತವತ್ಸಲ ಸಮಿತಿ ಸಲಹೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟಾರೆ ಸೀಟುಗಳ ಮೀಸಲಾತಿಯು ಶೇ. 50 ಮೀರಬಾರದು ಎಂದು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿಗೆ ಒಟ್ಟು ಸೀಟುಗಳಲ್ಲಿ ಶೇ.33 ಮೀಸಲಾತಿ ಕಲ್ಪಿಸಲು ನ್ಯಾ.ಭಕ್ತವತ್ಸಲ ಸಮಿತಿ ಸಲಹೆ

ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಡಾ. ಕೆ ಭಕ್ತವತ್ಸಲ ಅವರ ನೇತೃತ್ವದ ಸಮಿತಿಯು ನಾಲ್ಕು ಸಲಹೆಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಸಲ್ಲಿಸಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಿವೃತ್ತ ಐಎಎಸ್‌ ಅಧಿಕಾರಿ ಸಿ ಆರ್‌ ಚಿಕ್ಕಮಠ ಅವರು ಸಮಿತಿಯ ಸದಸ್ಯರಾಗಿದ್ದರು.

ಸಮಿತಿಯ ಸಲಹೆಗಳು

  1. ಹಾಲಿ ಒಬಿಸಿ ವಿಂಗಡಣೆ ಅನ್ವಯ ಹಿಂದುಳಿದ ವರ್ಗ ಎ ಮತ್ತು ಬಿ ವಿಭಾಗದ ಅಡಿ ಒಟ್ಟು ಸೀಟುಗಳಲ್ಲಿ ಮೂರನೇ ಒಂದು ಭಾಗದ (ಶೇ.33) ರಾಜಕೀಯ ಮೀಸಲಾತಿ ನೀತಿಯನ್ನು ಮುಂಬರುವ ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿ ಸಮುದಾಯಕ್ಕೆ ಅನ್ವಯಿಸಬೇಕು. ಅಲ್ಲದೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟಾರೆ ಸೀಟುಗಳ ಮೀಸಲಾತಿಯು ಶೇ. 50 ಮೀರಬಾರದು ಎಂದು ತಿಳಿಸಲಾಗಿದೆ.

  2. ಇತರೆ ಹಿಂದುಳಿದ ವರ್ಗಗಳ ಸಮುದಾಯದ ಸದಸ್ಯರಿಗೆ ಬಿಬಿಎಂಪಿ ಮೇಯರ್‌ ಮತ್ತು ಉಪಮೇಯರ್‌ ಸ್ಥಾನಕ್ಕೇರಲು ಮೀಸಲಾತಿ ಪರಿಗಣಿಸಬೇಕು.

  3. ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣಾ ಘಟಕವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಅಡಿಗೆ ತರಬೇಕು.

  4. ಬಿಬಿಎಂಪಿ ಕಾಯಿದೆ 2020ರ ಅನ್ವಯ ಮೇಯರ್‌ ಮತ್ತು ಉಪಮೇಯರ್‌ಗಳಿಗೆ 30 ತಿಂಗಳು ಅಧಿಕಾರ ನೀಡುವ ಮಾದರಿಯಲ್ಲಿಯೇ ಕೆಎಂಸಿ ಕಾಯಿದೆ 1976ರ ಸೆಕ್ಷನ್‌ 10ಕ್ಕೆ ತಿದ್ದುಪಡಿ ತರಲು ಪರಿಗಣನೆ ಮಾಡಬೇಕು.

Also Read
ಬಿಬಿಎಂಪಿ ಚುನಾವಣೆ: ಎರಡು ತಿಂಗಳಲ್ಲಿ ವಾರ್ಡ್‌ ಪುನರ್‌ ವಿಂಗಡಣೆ, ಮೀಸಲಾತಿ ಅಧಿಸೂಚನೆ ಹೊರಡಿಸಲು ಸುಪ್ರೀಂ ಗಡುವು

ಸಮಿತಿಯ ತೀರ್ಮಾನಗಳು

  1. ರಾಜ್ಯದಲ್ಲಿ 1996, 2001, 2010 ಮತ್ತು 2015ರಲ್ಲಿ ನಡೆದಿರುವ ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿನ ಪ್ರತ್ಯಕ್ಷ (ಎಂಫರಿಕಲ್‌) ದತ್ತಾಂಶ ಆಧರಿಸಿ ಹೇಳುವುದಾದರೆ ಇತರೆ ಹಿಂದುಳಿದ ವರ್ಗಗಳ ವಿಭಾಗ ಎ ಮತ್ತು ಬಿ ಅಡಿ ಬರುವ ಅಸಂಖ್ಯಾತ ಜಾತಿ ಮತ್ತು ಸಮುದಾಯಗಳು ಇಂದಿಗೂ ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿವೆ ಎನ್ನುವ ತೀರ್ಮಾನಕ್ಕೆ ಬರಬಹುದು. ಹೀಗಾಗಿ, ನಗರ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಟ್ಟಾರೆ ಸೀಟುಗಳ ಪೈಕಿ ಮೂರನೇ ಒಂದು ಭಾಗದಷ್ಟು (ಶೇ 33) ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ (ಅಲ್ಪಸಂಖ್ಯಾತರೂ ಸೇರಿ) ನೀಡುವುದು ಸಮರ್ಥನೀಯ.

  2. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಯಿದೆ 2020ರ ಸೆಕ್ಷನ್‌ 57ರ ಅಡಿ ಚುನಾವಣೆ ನಡೆದಾಗಿನಿಂದ ಮೇಯರ್‌ ಮತ್ತು ಉಪಮೇಯರ್‌ ಅವಧಿಯು 30 ತಿಂಗಳು ಇರಲಿದೆ. ಆದರೆ, ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ (ಕೆಎಂಸಿ) ಕಾಯಿದೆ 1976ರ ಸೆಕ್ಷನ್‌ 10ರ ಅಡಿ ಮೇಯರ್‌ ಮತ್ತು ಉಪಮೇಯರ್‌ ಅವಧಿಯು 12 ತಿಂಗಳಾಗಿವೆ. ಹೀಗಾಗಿ, ಕೆಎಂಸಿ ಕಾಯಿದೆಯ ಸೆಕ್ಷನ್‌ 10ಕ್ಕೆ ತಿದ್ದುಪಡಿ ತರಬೇಕಿದೆ.

  3. ರಾಜ್ಯದಲ್ಲಿ ಕೆಎಂಸಿ ಕಾಯಿದೆ ಸೆಕ್ಷನ್‌ 10ರ ಅಡಿ ಹಿಂದುಳಿದ ವರ್ಗಗಳ ವಿಭಾಗ ಎ ಮತ್ತು ಬಿ ಅಡಿ ಬರುವ ಸದಸ್ಯರಿಗೆ ಒಟ್ಟಾರೆ ಮೇಯರ್‌ ಮತ್ತು ಉಪಮೇಯರ್‌ಗಳ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ, ಬಿಬಿಎಂಪಿ ಕಾಯಿದೆ ಸೆಕ್ಷನ್‌ 58ರಲ್ಲಿ ಒಬಿಸಿಗಳಿಗೆ ಸಂಬಂಧಿಸಿದ ಸೀಟುಗಳ ಮೀಸಲಾತಿ ಕುರಿತು ಮೌನವಹಿಸಲಾಗಿದೆ.

  4. ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಬಿಬಿಎಂಪಿ ಕಾಯಿದೆಯ ಹಿಂದುಳಿದ ವರ್ಗಗಳ ವ್ಯಾಖ್ಯಾನದಲ್ಲಿ ಒಬಿಸಿ ವಿಭಾಗ ಎ ಮತ್ತು ಬಿ ಬಗ್ಗೆ ಉಲ್ಲೇಖಿಸದಿರುವುದು ಮತ್ತೊಂದು ಮಹತ್ವದ ವಿಷಯವಾಗಿದೆ. ಆದರೆ, ಬಿಬಿಎಂಪಿ ಕಾಯಿದೆ ಸೆಕ್ಷನ್‌ 8ರ ಉಪ ಸೆಕ್ಷನ್‌ 3ರಲ್ಲಿ ಬರುವ 1, 2 ಮತ್ತು 3ನೇ ಉಪ ನಿಯಮದಲ್ಲಿ ಹಿಂದುಳಿದ ವರ್ಗದ ವಿಭಾಗ ಎ ಮತ್ತು ಬಿ ಬಗ್ಗೆ ಉಲ್ಲೇಖಿಸಲಾಗಿದೆ.

  5. ಸಂವಿಧಾನದ 15(4) ಮತ್ತು 16(4)ನೇ ವಿಧಿಯ ಉದ್ದೇಶಕ್ಕಾಗಿ ಎಸ್‌ಸಿ/ಎಸ್‌ಟಿ ಪಟ್ಟಿಯ ಅಧಿಸೂಚನೆಯನ್ನು ಈ ಸಮುದಾಯಗಳ ರಾಜಕೀಯ ಮೀಸಲಾತಿ ಸೀಟುಗಳಿಗೂ ಒಳಗೊಳ್ಳಲಾಗಿದ್ದು, ಎಸ್‌ಸಿ/ಎಸ್‌ಟಿ ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಸ್‌ಸಿ/ಎಸ್‌ಟಿ ಪಟ್ಟಿ ಇಲ್ಲ ಎಂಬುದು ನಮ್ಮ ಅರಿವಿಗೆ ಬಂದಿದೆ.

  6. ರಾಜ್ಯದಲ್ಲಿ ಒಬಿಸಿ ಸಮುದಾಯಕ್ಕೆ ಸೇರಿದ (ಅಲ್ಪಸಂಖ್ಯಾತರು ಸೇರಿದಂತೆ) ಒಟ್ಟಾರೆ ಜನಸಂಖ್ಯೆಯ ಶೇ. 44.40ರಷ್ಟನ್ನು ಪರಿಗಣಿಸಿ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂಬ ಆಧಾರದಲ್ಲಿ ಹಿಂದುಳಿದ ವರ್ಗಗಳ ಅಡಿ ಬರುವ ಜಾತಿಗಳನ್ನು ಶಿಕ್ಷಣ ಮತ್ತು ಉದ್ಯೋಗ ಮತ್ತು ರಾಜಕೀಯ ಮೀಸಲಾತಿಗೂ ಒಳಗೊಳ್ಳಲಾಗಿದೆ. ಹೀಗಾಗಿ, ಒಬಿಸಿಯ ಜನಸಂಖ್ಯೆ ಮತ್ತು ಪ್ರತ್ಯಕ್ಷ ದತ್ತಾಂಶ ಆಧರಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟಾರೆ ಸೀಟುಗಳ ಪೈಕಿ ಮೂರನೇ ಒಂದು ಭಾಗವನ್ನು (ಶೇ. 33) ಒಬಿಸಿಗೆ ಮೀಸಲಿಡಲಾಗಿದೆ. ಹೀಗಾಗಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಬಿಸಿಗಳಿಗೆ ಮೂರನೇ ಒಂದು ಭಾಗ (ಶೇ. 33) ಸಮರ್ಥನೀಯ.

  7. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಹೊರತುಪಡಿಸಿ ಇತರೆ ಅಲ್ಪಸಖ್ಯಾತ ಸಮುದಾಯಗಳು ರಾಜಕೀಯ ಮೀಸಲಾತಿ ಪಡೆಯಲಾಗುತ್ತಿಲ್ಲ. ಶಿಕ್ಷಣ ಮತ್ತು ಉದ್ಯೋಗ ಸೀಟುಗಳಲ್ಲಿನ ಮೀಸಲಾತಿಗಾಗಿ ವಿಭಾಗ II(ಬಿ) ಅಡಿ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗ ವಿಭಾಗ-ಎ ಅಡಿ ಪಟ್ಟಿ ಮಾಡಲಾಗಿದೆ. ರಾಜ್ಯದಲ್ಲಿ 1996, 2001, 2010 ಮತ್ತು 2015ರಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ ಎಂಬುದು ಪ್ರತ್ಯಕ್ಷ ದತ್ತಾಂಶದಿಂದ ತಿಳಿದು ಬರುತ್ತದೆ.

  8. 2027 ಅಥವಾ 2028ರಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಪರಿಣಾಮಕಾರಿಯಾಗಿ ಮೀಸಲಾತಿ ಕಲ್ಪಿಸಲು ಹಾಲಿ ಹಿಂದುಳಿದ ವರ್ಗಗಳ ವಿಭಾಗ ಎ ಮತ್ತು ಬಿ ಅನ್ನು ಮರು ವರ್ಗೀಕರಿಸಿ, ಮತ್ತೆರಡು ಹಿಂದುಳಿದ ವರ್ಗಗಳನ್ನಾಗಿಸಲು ಪರಿಶೀಲಿಸಬಹುದು ಎಂಬ ಅಭಿಪ್ರಾಯ ಹೊಂದಿದ್ದೇವೆ ಎಂದು ಸಮಿತಿಯು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

Also Read
ಜಿ.ಪಂ-ತಾ.ಪಂ ಚುನಾವಣೆ ಸನ್ನಿಹಿತ: 3 ತಿಂಗಳಲ್ಲಿ ಪುನರ್‌ವಿಂಗಡಣೆ, ಮೀಸಲಾತಿ ನಿರ್ಧರಿಸಲು ಹೈಕೋರ್ಟ್‌ ನಿರ್ದೇಶನ

Related Stories

No stories found.
Kannada Bar & Bench
kannada.barandbench.com