Actor Darshan with his girlfriend Pavitra Gowda 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ: ಪವಿತ್ರಾಗೌಡ, ರವಿಶಂಕರ್‌, ನಾಗರಾಜು, ಲಕ್ಷ್ಮಣ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾಗೌಡ, ರವಿಶಂಕರ್‌, 11ನೇ ಆರೋಪಿ ಆರ್‌ ನಾಗರಾಜು ಮತ್ತು 12ನೇ ಆರೋಪಿ ಎಂ ಲಕ್ಷ್ಮಣ್‌ ಅವರ ಜಾಮೀನು ಆದೇಶಗಳನ್ನು ಬುಧವಾರ ಕಾಯ್ದಿರಿಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ನಟ ದರ್ಶನ್‌ ಹಾಗೂ 3ನೇ ಆರೋಪಿ ಪವನ್‌ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ನಟ ದರ್ಶನ್‌, ಪವಿತ್ರಾಗೌಡ, ಲಕ್ಷ್ಮಣ್‌, ಲೋಕೇಶ್‌ ಮತ್ತು ರವಿಶಂಕರ್‌ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ಇಂದು ಮುಂದುವರಿಸಿದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಮತ್ತು ಸಂದೇಶ್‌ ಚೌಟ ಅವರು ದರ್ಶನ್‌ ಅರ್ಜಿಗೆ ಸಂಬಂಧಿಸಿದಂತೆ ಪ್ರತ್ಯುತ್ತರ ದಾಖಲಿಸಲಿದ್ದಾರೆ.

ಮೂರನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ವಿನಯ್‌, ಪ್ರದೋಷ್‌ ರಾವ್‌ ಮತ್ತು ಜಗದೀಶ್‌ ಅಲಿಯಾಸ್‌ ಜಗ್ಗನ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್‌ 14ಕ್ಕೆ ನಡೆಸಲಿದೆ.

ಎಸ್‌ಪಿಪಿ ಪ್ರಸನ್ನ ಕುಮಾರ್‌ ವಾದಾಂಶಗಳು

  • ಸಾಕ್ಷಿಗಳಾದ ಕಿರಣ್‌, ಪುನೀತ್‌ ಹೇಳಿಕೆಗಳಿಗೂ ತಾಂತ್ರಿಕ ಸಾಕ್ಷಿಗಳಿಗೂ ಹೊಂದಾಣಿಕೆಯಾಗಿದೆ.

  • ಸೆಕ್ಯೂರಿಟಿ ಗಾರ್ಡ್‌ ನರೇಂದ್ರ ಸಿಂಗ್‌ ಹೇಳಿಕೆಯನ್ನು ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರ ನೆರವಿನಿಂದ ಭಾಷಾಂತರ ಮಾಡಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆಯನ್ನು ನ್ಯಾಯಾಲಯದಲ್ಲಿ ಗೌಪ್ಯ ವಿಚಾರಣೆಯಲ್ಲಿ ರೆಕಾರ್ಡ್‌ ಮಾಡಲಾಗಿದೆ.

  • ನೈಜ ಆರೋಪಿಗಳ ಬಂಧನ, ಕೃತ್ಯದ ಸ್ಥಳದ ಜಪ್ತಿ ಮತ್ತು ಮಹಜರ್‌ ಸರಿಯಾದ ಸಂದರ್ಭಕ್ಕೆ ಮಾಡಲಾಗಿದೆ.

  • ಘಟನೆ ನೋಡಿದ ಪುನೀತನಿಗೆ ಭಯವಾಗಿ ಆತನ ಮಲೈಮಹದೇಶ್ವರ ಬೆಟ್ಟ, ಕಬ್ಬಾಳು, ಹಾಸನ, ಗೋವಾ, ತಿರುಪತಿ ಮತ್ತು ಬೆಂಗಳೂರಿಗೆ ತೆರಳಿದ್ದ. ಆನಂತರ ಆತನ ಹೇಳಿಕೆ ದಾಖಲಿಸಲಾಗಿದೆ. ಇದರಿಂದ ವಿಳಂಬವಾಗಿದೆ. ಇದನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

  • ದರ್ಶನ್‌ ಬಟ್ಟೆ, ಶೂಗಳಲ್ಲಿ ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳ ಬಟ್ಟೆಯಲ್ಲಿ ರೇಣುಕಾಸ್ವಾಮಿಯ ರಕ್ತದ ಕಲೆ ಹೊಂದಾಣಿಕೆಯಾಗಿದೆ. ನಿರ್ದಿಷ್ಟ ಸಂದರ್ಭದಲ್ಲಿ ಆರೋಪಿಗಳೆಲ್ಲರೂ ಪಟ್ಟಣಗೆರೆ ಷೆಡ್‌ನಲ್ಲಿದ್ದರೂ ಎಂಬುದಕ್ಕೆ ಕರೆ ದಾಖಲೆ ಉತ್ತರವಾಗಿದೆ.

  • ರಿಮ್ಯಾಂಡ್‌ ಅರ್ಜಿಯ ಜೊತೆ ಕೇಸ್‌ ಡೈರಿಯನ್ನು ಮ್ಯಾಜಿಸ್ಟ್ರೇಟ್‌ ಅವರಿಗೆ ಸಲ್ಲಿಕೆ ಮಾಡಲಾಗಿದೆ. ಕೇಸ್‌ ಡೈರಿಯಲ್ಲಿ ಎಲ್ಲಾ ಅಂಶಗಳು ಇರಬೇಕು ಎಂದೇನಿಲ್ಲ.

  • ಮೋಹನ್‌ರಾಜ್‌ನಿಂದ ಹಣ ಪಡೆದಿರುವುದಾಗಿ ದರ್ಶನ್‌ ಸ್ವಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಕ್ಷಿಗಳಿಗೆ ಬೇಕಾಗುತ್ತದೆ ಎಂದು ಹಣ ಇಟ್ಟುಕೊಂಡಿರುವುದಾಗಿ ದರ್ಶನ್‌ ಹೇಳಿದ್ದಾರೆ.