ಚಿತ್ರದುರ್ಗದ ರೇಣುಕಾಸ್ವಾಮಿ ದೇಹದಲ್ಲಿನ ಹೊರಭಾಗ ಮತ್ತು ಒಳಭಾಗದಲ್ಲಿನ ಗಾಯಗಳು, ಆರೋಪಿಗಳ ನಡುವಿನ ಕರೆ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿ, ವೈದ್ಯರು ಮತ್ತು ಸಾಕ್ಷಿಗಳ ಹೇಳಿಕೆಯು ಒಂದಲ್ಲಾ ಒಂದು ರೀತಿಯಲ್ಲಿ ಆರೋಪಿಗಳೇ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದರತ್ತ ಬೆರಳು ಮಾಡಿವೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಮಂಗಳವಾರ ಪ್ರಬಲವಾಗಿ ವಾದಿಸಿದರು.
ನಟ ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಲೋಕೇಶ್ ಮತ್ತು ರವಿಶಂಕರ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ನಡೆಸಿದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ಮತ್ತು ಸಂದೇಶ್ ಚೌಟ ಅವರ ವಾದಕ್ಕೆ ಪ್ರತಿಯಾಗಿ ವಾದಿಸುವ ಮೂಲಕ ಅರ್ಜಿದಾರರೇ ಕೃತ್ಯದ ಹಿಂದಿನ ಕೈಗಳು ಎಂದು ನ್ಯಾಯಾಲಯದ ಮುಂದೆ ಸಾದರಪಡಿಸುವ ಯತ್ನ ಮಾಡಿದರು. ನಾಳೆಯೂ ಪ್ರಾಸಿಕ್ಯೂಷನ್ ಪರವಾಗಿ ಪ್ರಸನ್ನಕುಮಾರ್ ಅವರು ವಾದಿಸಲಿದ್ದಾರೆ.
ಆರೋಪಿಗಳ ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿಯ 6-7 ಪಕ್ಕೆಲುಬುಗಳು ಮುರಿದಿವೆ. ಒಟ್ಟಾರೆ 17 ಕಡೆ ಮೂಳೆಗಳು ಮುರಿದಿದ್ದು, ದೇಹದ ಹೊರಗೆ 39 ಗಾಯಗಳಾಗಿವೆ ಎಂದು ಮರಣೋತ್ತರ ವರದಿಯಲ್ಲಿ ಹೇಳಲಾಗಿದೆ. ಇದರಲ್ಲಿ 13 ಹೊರಭಾಗದ ಗಾಯಗಳು ಸಾವಿಗೆ ಮುಂಚೆ ಆಗಿವೆ. ಲಂಗ್ಸ್ ಪಂಕ್ಚರ್ ಆಗಿದೆ. ಸಾಕಷ್ಟು ರಕ್ತಸ್ರಾವವಾಗಿದೆ. ಮೂಳೆ ಮುರಿತದ ಗಾಯಗಳೆಲ್ಲವೂ ಸಾವಿಗೂ ಮುಂಚೆಯೇ ಆಗಿವೆ.
ರೇಣುಕಾಸ್ವಾಮಿಯನ್ನು ವಾಹನದ ಬಂಪರ್‌ಗೆ ಗುದ್ದಿಸಲಾಗಿದೆ. ಇದರಿಂದ ಆಗಿರುವ ಗಾಯ ದೇಹದಲ್ಲಿ ಪತ್ತೆಯಾಗಿದೆ. ಪಕ್ಕೆಲುಬುಗಳು ಮುರಿಯುವುದು ಒಬ್ಬ ವ್ಯಕ್ತಿ ಇನ್ನೊಬ್ಬನ ಮೇಲೆ ನಿಂತಾಗ ಆಗುತ್ತದೆ ಎಂದು ವರದಿ ಹೇಳಿದೆ.
ಹೊಟ್ಟೆಯಲ್ಲಿ ಹಸಿರು ದ್ರವ ಆಧರಿಸಿ ಸಾವಿಗೂ ಎರಡು ಗಂಟೆ ಮುಂಚೆ ರೇಣುಕಾಸ್ವಾಮಿ ಊಟ ಮಾಡಿದ್ದನು. ಆಹಾರ ಜೀರ್ಣವಾಗುವುದಕ್ಕೂ ಮುನ್ನ ಸಾವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಆರೋಪಿಗಳು ಊಟ ಸೇವನೆ ಮಾಡಿದ್ದಾರೆ.
ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಕರೆತಂದಿರುವುದು ಮತ್ತು ಇತರೆ ಆರೋಪಿಗಳ ಜೊತೆಗಿನ ಸಂಭಾಷಣೆ, ಕರೆ ದಾಖಲೆ, ವಿಡಿಯೊ, ಟವರ್ ಲೊಕೇಷನ್, ಚಿತ್ರಗಳು ದಾಖಲೆಗಳಿವೆ. ಪ್ರತ್ಯಕ್ಷ ಸಾಕ್ಷಿ ಸುಳ್ಳು ಹೇಳಬಹುದು. ತಾಂತ್ರಿಕ ಮತ್ತು ಡಿಜಿಟಲ್ ಸಾಕ್ಷಿ ಸುಳ್ಳು ಹೇಳಲು ಸಾಧ್ಯವೇ?
ರೇಣುಕಾಸ್ವಾಮಿ ಮೇಲಿನ ಹಲ್ಲೆಯ ತೀವ್ರತೆ ಹೇಗಿದೆ ಎಂದರೆ ಆತನ ಮರ್ಮಾಂಗದ ಬಲ ವೃಷಣ ಹೊರಬಂದಿದೆ. ಇದು ದರ್ಶನ್ ಹಲ್ಲೆಯ ಪರಿಣಾಮ. ಇದು ದರ್ಶನ್ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಹೇಳಿದಂತೆ ಅರೇಬಿಯನ್ ನೈಟ್ಸ್ ಕತೆಯೇ?
ಅಖಿಲ ಕರ್ನಾಟಕ ದರ್ಶನ್ ಸೇನೆಯ ಚಿತ್ರದುರ್ಗ ಘಟಕದ ಅಧ್ಯಕ್ಷ ರಾಘವೇಂದ್ರ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವ ಹೊಣೆ ಒತ್ತಿದ್ದನು. ಈ ದರ್ಶನ್ ಸೇನೆ ಪರ್ಯಾಯ ಸರ್ಕಾರ ನಡೆಸಿದೆ. ಇವರು ಪ್ರತ್ಯೇಕ ನಿಯಮ ರೂಪಿಸಿಕೊಂಡು ಕೃತ್ಯ ಎಸಗಿದ್ದಾರೆ. ಅವರಿಗೆ ನೆಲದ ಕಾನೂನಿನ ಮೇಲೆ ಗೌರವವಿಲ್ಲ.
ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂನಲ್ಲಿ ಎರಡನೇ ಆರೋಪಿ ಪವಿತ್ರಾಗೌಡಗೆ ಮರ್ಮಾಂಗದ ಚಿತ್ರ ಕಳುಹಿಸಿದ್ದಾನೆ. ಇದಕ್ಕೆ ಆಕೆ ಎಡಗೈನ ಹೆಬ್ಬೆರಳಿನ ಮೂಲಕ ಪ್ರತಿಕ್ರಿಯಿಸಿದ್ದಾಳೆ. ಹೀಗೆ ಮಾಡುವ ಅವಶ್ಯಕತೆ ಏನಿತ್ತು? ಆ ಖಾತೆಯನ್ನು ನಿರ್ಬಂಧಿಸಿ, ಸಂಬಂಧಿತ ಪೊಲೀಸರಿಗೆ ದೂರು ನೀಡಬಹುದಿತ್ತಲ್ಲವೇ?
ಇಡೀ ಪ್ರಕರಣವನ್ನು ತೀರ ವೈಭವೀಕರಿಸಲಾಗಿದೆ. ಹೇಗೆಂದರೆ ದರ್ಶನ್ ಸಿಗರೇಟು ಸೇದುವ ದೃಶ್ಯ ವೈರಲ್ ಚಿತ್ರ ಆಧರಿಸಿ ನಾಗರಾಜ್ ಮತ್ತು ಲಕ್ಷ್ಮಣ್ ಅವರನ್ನು ರಾಜ್ಯದ ಬೇರೆ ಜಿಲ್ಲೆಗಳ ಜೈಲಿಗೆ ವರ್ಗಾಯಿಸಲಾಗಿದೆ. ಜೈಲಿನಲ್ಲಿ ಸಿಗರೇಟು ಸೇದಲು ನಿಷೇಧವಿಲ್ಲ. ಧೂಮಪಾನಕ್ಕೆ ಜೈಲಿನಲ್ಲಿ ಪ್ರತ್ಯೇಕ ಸ್ಥಳವಿದೆ. ಇದನ್ನು ಆಧರಿಸಿ ಕುಳ್ಳ ಸೀನನ ಪ್ರಕರಣದಲ್ಲಿ ಆತನ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ತನಿಖೆಯ ಎಲ್ಲಾ ಅಂಶಗಳನ್ನೂ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. 15, 16, 17ನೇ ಆರೋಪಿಗಳಿಗೆ ಹೈಕೋರ್ಟ್ ಮತ್ತು ವಿಚಾರಣಾಧೀನ ನ್ಯಾಯಾಲಯಗಳು ಜಾಮೀನು ಮಂಜೂರು ಮಾಡಿವೆ. ಅವರ ವಿರುದ್ಧದ ಆರೋಪಗಳು ಜಾಮೀನುಸಹಿತ ಆರೋಪಗಳಾಗಿವೆ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಭಯೋತ್ಪಾದನಾ ಕೃತ್ಯದ ರೀತಿಯಲ್ಲಿ ಮಾಧ್ಯಮಗಳು ಬಿಂಬಿಸಿವೆ.
ಮರಣೋತ್ತರ ಪರೀಕ್ಷೆಗೂ ಮುನ್ನ ಮೃತದೇಹವನ್ನು ಶೈತ್ಯಾಗಾರದಲ್ಲಿ ಏಕೆ ಇಡಲಾಗಿತ್ತು? ಸ್ಟೋನಿ ಬ್ರೂಕ್ ಬಾರ್ ಮತ್ತು ರೆಸ್ಟೋರೆಂಟ್ ಒಳಸಂಚಿನ ತಾಣ ಎಂದು ಬಿಂಬಿಸಲಾಗಿದೆ. ಆದರೆ, ಅದಕ್ಕೆ ಸಾಕ್ಷಿಯಿಲ್ಲ.
ಕೊಲೆಯಲ್ಲಿ ಮಾರಕಾಸ್ತ್ರಗಳನ್ನು ಬಳಕೆ ಮಾಡಲಾಗಿಲ್ಲ. ನೈಲಾನ್ ಹಗ್ಗ, ಕೋಲು, ಕೊಂಬೆ ಮತ್ತು ವಾಟರ್ ಬಾಟಲ್ ಬಳಸಲಾಗಿದೆ. ಲಕ್ಷ್ಮಣ್ ಮತ್ತು ನಾಗರಾಜ್ ಯಾವುದೇ ಮಾರಕಾಸ್ತ್ರಗಳನ್ನು ಬಳಕೆ ಮಾಡಿಲ್ಲ. ಹಲ್ಲೆ ಮಾಡಿದ್ದರೂ ಅವರಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ.
ಒಂದೇ ಒಂದು ಗಾಯ ಮಾತ್ರ 2.5 ಸೆಂಟಿಮೀಟರ್ ಉದ್ದವಿದೆ. ಉಳಿದೆಲ್ಲವೂ ಸಣ್ಣಪುಟ್ಟ ಗಾಯಗಳಾಗಿರುವುದರಿಂದ ಇದನ್ನು ಉದ್ದೇಶಪೂರ್ವಕ ಕೊಲೆ ಎಂದು ಪರಿಗಣಿಸಬಾರದು.
ಎಫ್‌ಐಆರ್ ದಾಖಲಿಸುವುದು ತಡವಾಗಿದೆ. ಜೂನ್ 8ರ ರಾತ್ರಿ 8 ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಇನ್‌ಸ್ಪೆಕ್ಟರ್ ವಿನಯ್‌ಗೆ ಮಾಹಿತಿ ಇತ್ತು. ಪ್ರದೋಷ್ ರಾವ್ ಜೊತೆ ನಿರಂತರವಾಗಿ ವಿನಯ್ ಮಾತನಾಡಿದ್ದಾರೆ. ಹಾಗಾದರೆ ವಿನಯ್ ಏನನ್ನು ನಿರೀಕ್ಷಿಸುತ್ತಿದ್ದರು? ಹಲ್ಲೆ ಪ್ರಕರಣವು ಸಂಜ್ಞೇ ಅಪರಾಧವಾಗಿದ್ದರೂ ತಡವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಜೂನ್ 9ರ ಬೆಳಿಗ್ಗೆ 9 ಗಂಟೆಗೆ ಸತ್ವ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಸಾಕ್ಷಿ ಸೃಷ್ಟಿ, ಸಾಕ್ಷ್ಯ ನಾಶ, ಸಾಕ್ಷಿಗಳ ತದ್ವಿರುದ್ಧ ಮಾಹಿತಿ ನೀಡಲಾಗಿದೆ. ರೇಣುಕಾಸ್ವಾಮಿಯ ಸಾವಿನ ಸಮಯ ತಿಳಿದಿಲ್ಲ. ರಿಮಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರು ಹೇಳಿಲ್ಲ. ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ ಮಾಡಲಾಗಿದೆ. ಕೊಲೆಗೆ ಬಳಕೆ ಮಾಡಿದ ವಸ್ತುಗಳಲ್ಲಿ ರಕ್ತ ಮಾದರಿ ಪತ್ತೆಯಾಗಿಲ್ಲ. ಆರೋಪಪಟ್ಟಿಯಲ್ಲಿ ಸಾಕಷ್ಟು ತಪ್ಪುಗಳಿವೆ. ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ, ನಾಗರಾಜ್ ಮತ್ತು ಲಕ್ಷ್ಮಣ್‌ಗೆ ಜಾಮೀನು ಮಂಜೂರು ಮಾಡಬೇಕು.