Pawan Khera and Arnab Goswami 
ಸುದ್ದಿಗಳು

ಕಾಂಗ್ರೆಸ್ 'ದೇಶದ ಶತ್ರು' ಎಂದ ಅರ್ನಾಬ್ ಗೋಸ್ವಾಮಿ: ದೆಹಲಿ ಹೈಕೋರ್ಟ್‌ನಲ್ಲಿ ಖೇರಾ ಮಾನಹಾನಿ ದಾವೆ

ʼಆಪರೇಷನ್ ಸಿಂಧೂರ್‌ʼ ಸಂಬಂಧಿಸಿದ ಟಿವಿ ಕಾರ್ಯಕ್ರಮದಲ್ಲಿ ಗೋಸ್ವಾಮಿ ಈ ಹೇಳಿಕೆ ನೀಡಿದ್ದರು.

Bar & Bench

ಪಹಲ್ಗಾಮ್‌ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಸೇನಾ ಕಾರ್ಯಚರಣೆ ಆಪರೇಷನ್‌ ಸಿಂಧೂರ್‌ಗೆ ಸಂಬಂಧಿಸಿದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ದೇಶದ ಶತ್ರುವಿನ ಪರವಾಗಿ ನಿಂತಿದೆ ಎಂದು ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ನೀಡಿದ್ದ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಇಂದು ಸಂಕ್ಷಿಪ್ತವಾಗಿ ಅರ್ಜಿ ಆಲಿಸಿದರು.

ಭಾರತ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿದ್ದಾಗ ರಿಪಬ್ಲಿಕ್ ಟಿವಿಯಲ್ಲಿ ಗೋಸ್ವಾಮಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಖೇರಾ ದೂರಿದ್ದಾರೆ. "ಈಗ ಪಕ್ಷ ರಾಷ್ಟ್ರದ ಶತ್ರುವಿನ ಜೊತೆಗಿದೆ, ನೀವು ಕಾಂಗ್ರೆಸ್ ಮತದಾರರಾಗಿದ್ದರೆ, ನೀವು ಕೂಡ ರಾಷ್ಟ್ರದ ಶತ್ರುವೇ" ಎಂದು ಗೋಸ್ವಾಮಿ ಹೇಳಿದ್ದರು ಎನ್ನಲಾಗಿದೆ.

ಖೇರಾ ಅವರು ಖಾಸಗಿಯಾಗಿ ಮೊಕದ್ದಮೆ ಹೂಡಿದ್ದರೂ ಹೇಳಿಕೆ ರಾಜಕೀಯ ಪಕ್ಷದ ವಿರುದ್ಧವಾಗಿರುವುದರಿಂದ ದೂರನ್ನು ತಿದ್ದುಪಡಿ ಮಾಡುವಂತೆ ನ್ಯಾಯಾಲಯ ಸಲಹೆ ನೀಡಿತು. ಇದಕ್ಕೆ ಖೇರಾ ಪರ ವಕೀಲರು ಒಪ್ಪಿದರು.

ಈ ಮಧ್ಯೆ ಗೋಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಮೊಕದ್ದಮೆಯ ಪ್ರತಿಯನ್ನು ತಮಗೆ ನೀಡಿಲ್ಲ ಎಂದರು.

ಮೊಕದ್ದಮೆಯ ಕುರಿತು ಸಮನ್ಸ್ ಜಾರಿ ಮಾಡಿದರೆ ನ್ಯಾಯಾಲಯ  ಜೇಠ್ಮಲಾನಿ ಅವರ ವಾದ ಆಲಿಸುತ್ತದೆ ಎಂದು ನ್ಯಾಯಮೂರ್ತಿ ಕೌರವ್ ತಿಳಿಸಿದರು.

"ನಾವು ನಿಮಗೆ ಸಮನ್ಸ್ ಜಾರಿ ಮಾಡಿಲ್ಲ. ನಿಮಗೆ ಸಮನ್ಸ್ ಜಾರಿ ಮಾಡಿದ ನಂತರ ನಾವು ನಿಮ್ಮ ಮಾತನ್ನು ಕೇಳುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.

ಖೇರಾ ಅವರು ತಿದ್ದುಪಡಿ ಮಾಡಿದ ಅರ್ಜಿಯನ್ನು ಸಲ್ಲಿಸಿದ ನಂತರ ಮುಂದಿನ ವಿಚಾರಣೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.