Supreme Court, Pegasus snoopgate

 
ಸುದ್ದಿಗಳು

ಪೆಗಸಸ್: ತಮ್ಮ ಸಾಧನ ಬೇಹುಗಾರಿಕೆಗೆ ತುತ್ತಾಗಿದೆ ಎಂಬ ಶಂಕೆ ಇರುವವರು ವಿವರ ಸಲ್ಲಿಸಲು ಸೂಚಿಸಿದ ಸುಪ್ರೀಂ ತನಿಖಾ ಸಮಿತಿ

ಪೆಗಸಸ್ ಮಾಲ್‌ವೇರ್‌ ದಾಳಿಗೆ ತಮ್ಮ ಸಾಧನಗಳು ತುತ್ತಾಗಿವೆ ಎನ್ನುವ ಅನಿಸಿಕೆ ಏಕೆ ಮೂಡಿದೆ ಎಂದು ಕಾರಣಗಳನ್ನು ನೀಡುವಂತೆ ಸಮಿತಿ ನಾಗರಿಕರನ್ನು ಕೋರಿದೆ.

Bar & Bench

ತಮ್ಮ ಸಾಧನಗಳು ಪೆಗಸಸ್‌ ಸ್ಪೈವೇರ್‌ ದಾಳಿಗೆ ತುತ್ತಾಗಿವೆ ಎಂಬ ಅನುಮಾನ ಹೊಂದಿರುವ ನಾಗರಿಕರು ಈ ಕುರಿತು ವಿವರವನ್ನು ಒದಗಿಸುವಂತೆ ಕೋರಿ ಪೆಗಸಸ್‌ ಗೂಢಚರ್ಯೆ ಹಗರಣದ ತನಿಖೆಗಾಗಿ ಸುಪ್ರೀಂಕೋರ್ಟ್‌ ರಚಿಸಿರುವ ತಾಂತ್ರಿಕ ಸಮಿತಿಯು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದೆ.

ತಾಂತ್ರಿಕ ಸಮಿತಿಯ ಇಮೇಲ್‌ enquiry@pegasus-india-investigation.in ಗೆ ಜನವರಿ 7, 2022 ರೊಳಗೆ ವಿವರಗಳನ್ನು ಕಳಿಸುವಂತೆ ಕೋರಲಾಗಿದೆ. ತಮಗೆ ಹಾಗೆ ಅನುಮಾನ ಮೂಡಲು ಕಾರಣಗಳೇನು ಎಂಬ ವಿವರ ಮತ್ತು ತಮ್ಮ ಸಾಧನಗಳನ್ನು ಸಮಿತಿಯು ಪರೀಕ್ಷೆಗೊಳಪಡಿಸಲು ಅನುವು ಮಾಡಲು ಸಾಧ್ಯವೇ ಎನ್ನುವ ಮಾಹಿತಿ ಒದಗಿಸುವಂತೆ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಮಾಜಿ ಐಪಿಎಸ್‌ ಅಧಿಕಾರಿ ಅಲೋಕ್‌ ಜೋಶಿ ಹಾಗೂ ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ. ಸಂದೀಪ್‌ ಒಬೆರಾಯ್‌ ಅವರನ್ನು ಒಳಗೊಂಡ ಸ್ವತಂತ್ರ ತ್ರಿಸದಸ್ಯ ಸಮಿತಿಯು ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಅಕ್ಟೋಬರ್‌ 7ರಂದು ಆದೇಶಿಸಿತ್ತು. ಸ್ವತಂತ್ರ ತಜ್ಞರ ಸಮಿತಿಯ ಅಡಿಯಲ್ಲಿ ಪ್ರೊ. ನವೀನ್‌ ಕುಮಾರ್‌ ಚೌಧರಿ, ಪ್ರೊ. ಪಿ ಪ್ರಭಾಹರನ್‌ ಹಾಗೂ ಸಹಾಯಕ ಪ್ರಾಧ್ಯಾಪಕ ಅಶ್ವಿನ್‌ ಅನಿಲ್‌ ಗುಮಾಸ್ತೆ ಅವರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚನೆಗೆ ಸುಪ್ರೀಂಕೋರ್ಟ್‌ ಸೂಚಿಸಿತ್ತು.

Public Notice, Pegasus-Technical Committee

ತನಿಖೆಗೆ ಆದೇಶಿಸುವ ವೇಳೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠ ರಾಷ್ಟ್ರೀಯ ಭದ್ರತೆಯ ವಿಚಾರ ಪ್ರಸ್ತಾಪಿಸಿ ಪ್ರಕರಣದಿಂದ ಜಾರಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ತರುವಾಯ, ಹಗರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ್ದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ದ್ವಿಸದಸ್ಯ ಆಯೋಗದ ಕಾರ್ಯನಿರ್ವಹಣೆಯನ್ನು ಸುಪ್ರೀಂಕೋರ್ಟ್ ತಡೆಹಿಡಿದಿತ್ತು.