[ಪೆಗಸಸ್‌ ಹಗರಣ] ಮಮತಾ ಸರ್ಕಾರ ರಚಿಸಿದ್ದ ನ್ಯಾ. ಮದನ್‌ ಲೋಕೂರ್‌ ನೇತೃತ್ವದ ಆಯೋಗದ ಕಾರ್ಯನಿರ್ವಹಣೆಗೆ ಸುಪ್ರೀಂ ತಡೆ

ಪೆಗಸಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವಿಧ ಮನವಿಗಳ ವಿಚಾರಣೆ ನಡೆಸುತ್ತಿದ್ದ ಹಂತದಲ್ಲೇ ಪಶ್ಚಿಮ ಬಂಗಾಳ ಸರ್ಕಾರವು ನ್ಯಾ. ಲೋಕೂರ್‌ ನೇತೃತ್ವದಲ್ಲಿ ಆಯೋಗ ರಚಿಸಿತ್ತು.
Justice MB Lokur, Pegasus and west bengal

Justice MB Lokur, Pegasus and west bengal

Published on

ಪೆಗಸಸ್‌ ಬೇಹುಗಾರಿಕಾ ಹಗರಣದ ತನಿಖೆಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ರಚಿಸಿದ್ದ ದ್ವಿಸದಸ್ಯ ಆಯೋಗದ ಕಾರ್ಯನಿರ್ವಹಣೆಗೆ ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ.

ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠವು ಆದೇಶ ಮಾಡಿದೆ.

“ ನ್ಯಾ. ಲೋಕೂರ್‌ ಆಯೋಗದ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ನೋಟಿಸ್‌ ಜಾರಿ ಮಾಡಿ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 27ರಂದು ಪೆಗಸಸ್‌ ಹಗರಣದ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್‌ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿದ್ದರೂ ಹೇಗೆ ನ್ಯಾ. ಲೋಕೂರ್‌ ನೇತೃತ್ವದ ಸಮಿತಿ ಕೆಲಸ ಮಾಡುತ್ತಿದೆ ಎಂದು ನ್ಯಾಯಾಂಗ ನಿಂದನೆ ಮನವಿಯಲ್ಲಿ ಪ್ರಶ್ನಿಸಲಾಗಿತ್ತು.

ಸುಪ್ರೀಂ ಕೋರ್ಟ್‌ ಸಮಿತಿಯನ್ನು ನೇಮಿಸಿದ ನಂತರ ಪಶ್ಚಿಮ ಬಂಗಾಳ ಸರ್ಕಾರ ರಚಿಸಿರುವ ಆಯೋಗವನ್ನು ವಿಸರ್ಜಿಸಲು ಕೋರಿ ಈ ಹಿಂದೆ ಅರ್ಜಿಯೊಂದು ದಾಖಲಾಗಿತ್ತು. ಸುಪ್ರೀಂ ಕೋರ್ಟ್‌ ಅರ್ಜಿಯ ಸಂಬಂಧ ನೋಟಿಸ್‌ ಜಾರಿ ಮಾಡಿತ್ತು, ಆದರೆ ಲೋಕೂರ್‌ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಮಧ್ಯಂತರ ಆದೇಶವನ್ನು ನೀಡದಂತೆ ಆಗ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಭೀಷೇಕ್‌ ಮನು ಸಿಂಘ್ವಿ ಅವರೇ ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯದ ಇಂಗಿತವನ್ನು ತಾವು ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದ್ದರು.

ಇಂದು ನ್ಯಾಯಾಂಗ ನಿಂದನೆ ಮನವಿಯಲ್ಲೂ ಇದೇ ವಿಷಯ ಮತ್ತೆ ಮೂಡಿದ್ದರಿಂದ ಸಿಜೆಐ ರಮಣ ಅವರು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರಿಗೆ “ಏನಿದು ಸಿಂಘ್ವಿ ಅವರೇ? ಯಾವುದೇ ಆದೇಶ ಮಾಡುವ ಅಗತ್ಯವಿಲ್ಲ ಎಂದು ನೀವು ನಮಗೆ ಹೇಳಿದ್ದೀರಲ್ಲಾ” ಎಂದು ಪ್ರಶ್ನಿಸಿತು.

ಇದಕ್ಕೆ ಸಿಂಘ್ವಿ ಅವರು “ಹಿಂದೆ ಸರಿಯುವ ಅಗತ್ಯತೆಯನ್ನು ನಾನು ವಿವರಿಸಿದ್ದೇನೆ. ಆದರೆ, ಆಯೋಗವನ್ನು ನಾನು ನಿಯಂತ್ರಿಸುತ್ತಿಲ್ಲ. ನಿಮ್ಮ ಆದೇಶ ಹೊರಬೀಳುವವರೆಗೂ ಅವರು ಕೆಲಸ ಆರಂಭಿಸಿರಲಿಲ್ಲ” ಎಂದರು. ಇದಕ್ಕೆ ನ್ಯಾಯಾಲಯವು “ನಿಮ್ಮ ಸ್ಥಿತಿ ನಮಗೆ ಅರ್ಥವಾಗುತ್ತದೆ” ಎಂದು ಹೇಳಿ, ಆಯೋಗದ ಕಾರ್ಯನಿರ್ವಹಣೆಗೆ ತಡೆ ವಿಧಿಸಿತು.

Also Read
[ಪೆಗಸಸ್‌ ಹಗರಣ] ರಾಷ್ಟ್ರೀಯ ಭದ್ರತೆ ವಿಚಾರ ಪ್ರಸ್ತಾಪಿಸಿ ನುಣುಚಿಕೊಳ್ಳಲಾಗದು ಎಂದ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಇಸ್ರೇಲ್‌ ಮೂಲದ ಗೂಢಚರ್ಯೆ ಸಂಸ್ಥೆ ಎನ್‌ಎಸ್‌ಒ ಅಭಿವೃದ್ಧಿಪಡಿಸಿರುವ ಪೆಗಸಸ್‌ ಸಾಫ್ಟ್‌ವೇರ್‌ ಮೂಲಕ ಭಾರತದ ವಕೀಲರು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು, ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಇತರರ ಮೇಲೆ ನಿಗಾ ಇಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ನ್ಯಾ. ಮದನ್‌ ಲೋಕೂರ್‌ ನೇತೃತ್ವದಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್‌ ಭಟ್ಟಾಚಾರ್ಯ ಅವರನ್ನು ಒಳಗೊಂಡು ಸಮಿತಿ ರಚಿಸಿತ್ತು.

ಪೆಗಸಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವಿಧ ಮನವಿಗಳ ವಿಚಾರಣೆ ನಡೆಸುತ್ತಿದ್ದ ಹಂತದಲ್ಲೇ ಪಶ್ಚಿಮ ಬಂಗಾಳ ಸರ್ಕಾರವು ನ್ಯಾ. ಲೋಕೂರ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು ಎಂಬುದು ಗಮನಾರ್ಹ.

Kannada Bar & Bench
kannada.barandbench.com