Justice Krishna S Dixit and Karnataka HC 
ಸುದ್ದಿಗಳು

'ತನಿಖೆ ಬಾಕಿ ಇದ್ದಾಗ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಸರ್ಕಾರ ನೇಮಕಾತಿ ಆದೇಶ ನೀಡಿದ್ದೇಕೆ?' ಹೈಕೋರ್ಟ್‌

"ಕೆಪಿಎಸ್‌ಸಿಯೇ ನೇಮಿಸಿರುವ ಐವರು ಸದಸ್ಯರ ಉಪ ಸಮಿತಿ ತನಿಖೆ ನಡೆಸುತ್ತಿರುವಾಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಸರ್ಕಾರಕ್ಕೆ ಹೇಗೆ ಕಳುಹಿಸಿತು?" ಎಂದು ಪ್ರಶ್ನಿಸಿದ ನ್ಯಾಯಾಲಯ.

Bar & Bench

ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ರಚಿಸಿದ್ದ ಐವರು ಸದಸ್ಯರ ಉಪ ಸಮಿತಿಯು ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ನಡುವೆಯೇ ನೇಮಕಾತಿ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆಕಳುಹಿಸಿದ್ದು ಹೇಗೆ? ಅದನ್ನು ಆಧರಿಸಿ ಸರ್ಕಾರ ಆತುರದಲ್ಲಿ ನೇಮಕಾತಿ ಆದೇಶ ನೀಡಿರುವುದು ಏಕೆ ಎನ್ನುವ ಬಗ್ಗೆ ವಿವರಣೆ ನೀಡುವಂತೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಹುದ್ದಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಈಚೆಗೆ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿಯಲ್ಲಿನ ಹುಳುಕುಗಳತ್ತ ಬೆರಳು ಮಾಡಿದ ಪೀಠವು ವ್ಯವಸ್ಥೆಯನ್ನು ಶುದ್ಧೀಕರಿಸುವ ಸಂದರ್ಭ ಬಂದಿದೆ ಎಂದು ಬಲವಾಗಿ ಮೌಖಿಕವಾಗಿ ಪ್ರತಿಪಾದಿಸಿತು. “ಕೆಪಿಎಸ್‌ಸಿಯೇ ನೇಮಿಸಿರುವ ಐವರು ಸದಸ್ಯರ ಉಪ ಸಮಿತಿ ತನಿಖೆ ನಡೆಸುತ್ತಿರುವಾಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಸರ್ಕಾರಕ್ಕೆ ಹೇಗೆ ಕಳುಹಿಸಿತು? ತನಿಖೆ ಬಾಕಿ ಇದ್ದರೂ ಸರ್ಕಾರವು ನೇಮಕಾತಿ ಆದೇಶಗಳನ್ನು ಹೇಗೆ ನೀಡಿತು ಎಂಬುದರ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಇಲ್ಲಿ ಸರ್ಕಾರವು ಕೆಪಿಎಸ್‌ಸಿ ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ವಿಚಾರದ ಕುರಿತು ಸರ್ಕಾರ ಅಜ್ಞಾನ ಪ್ರದರ್ಶಿಸಲಾಗದು. ಇಂಥ ವಿಚಾರಗಳು ಆಲೀಸ್ ಇನ್‌ ವಂಡರ್‌ಲ್ಯಾಂಡ್‌ನಲ್ಲಿ ಮಾತ್ರ ನಡೆಯಲು ಸಾಧ್ಯ. ಹೆಚ್ಚೇನು ಹೇಳಲಾಗದು” ಎಂದು ಆದೇಶಿಸಿದೆ.

ಅಲ್ಲದೇ, ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿನ ಅಕ್ರಮದ ಕುರಿತ ವಿಡಿಯೊಗಳನ್ನು ಸಾರ್ವಜನಿಕವಾಗಿ ತೆರೆದಿಡಲಾಗುವುದು. ಇದೆಲ್ಲವೂ ಜನರಿಗೆ ತಿಳಿಯಬೇಕು. ಈ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ನ್ಯಾಯಾಲಯ ಹೇಳಿದ್ದೇನು?

  • ಕೆಪಿಎಸ್‌ಸಿಯಲ್ಲಿ ಶೇ.50ರಷ್ಟು ಮಂದಿಯಾದರೂ ಯಾವುದೇ ಆಮಿಷಕ್ಕೆ ಒಳಗಾಗಿ ನೇಮಕವಾಗಬಾರದು. ಮೂರು ಸದಸ್ಯರ ಉಪ ಸಮಿತಿಯು ನಾಲ್ಕು ಸಭೆ ನಡೆಸಿ, ಜೂನ್‌ 24ರ 2024ರಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಅಕ್ರಮದ ಮಾಹಿತಿ ನೀಡಿದ್ದರು. ಅದಾಗ್ಯೂ, ತನಿಖೆ ನಡೆಯುತ್ತಿದ್ದರೂ ಕೆಪಿಎಸ್‌ಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು ಏಕೆ? ತನಿಖೆ ನಡೆಯುತ್ತಿದ್ದರೂ ಅಭ್ಯರ್ಥಿಗಳ ಪಟ್ಟಿಯನ್ನು ಏಕೆ ಕಳುಹಿಸಿದ್ದೀರಿ ಎಂದು ಸರ್ಕಾರ ಕೇಳಿಲ್ಲ? ಇಷ್ಟಾದರೂ ಸರ್ಕಾರವು ಕೆಪಿಎಸ್‌ಸಿಗೆ ಪಟ್ಟಿಯನ್ನು ಏಕೆ ಹಿಂದಿರುಗಿಸಲಿಲ್ಲ?

  • ಶೇ.70 ನೇಮಕಾತಿಯಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಶೇ. 30ರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬ ಭಾವನೆ ಜನರಲ್ಲಿ ಬರಬೇಕಲ್ಲವೇ? ಎಲ್ಲೆಲ್ಲಿ ಮೆರಿಟ್‌ ಇತ್ತೋ ಅಲ್ಲಿ ಒಳ್ಳೆಯದಾಗಿದೆ. ವಿಶ್ವೇಶ್ವರಯ್ಯ, ಕೆಂಪೇಗೌಡ ಇದ್ದುದರಿಂದ ಏನೆಲ್ಲಾ ಆಯ್ತು? 

  • ಬೆಳಿಗ್ಗೆ ಎದ್ದು ವಾಯು ವಿಹಾರ ಮಾಡಿ (ಅಡ್ವೊಕೇಟ್‌ ಜನರಲ್‌ ಕುರಿತು), ಜನರು ಸರ್ಕಾರದ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಎಂಬುದು ತಿಳಿಯುತ್ತದೆ. ನೂರಕ್ಕೂ ನೂರು ವ್ಯವಹಾರ ಆಗುತ್ತದೆ ಎಂದರೆ ಸಾಮಾನ್ಯ ಜನರು ನಾವೇಕೆ ಓದಬೇಕು ಎಂದುಕೊಳ್ಳುವುದಿಲ್ಲವೇ? ಬುದ್ದಿವಂತ ವರ್ಗದಿಂದಲೇ ಎಷ್ಟೋ ಸಮಸ್ಯೆಯಾಗಿದೆ. ಬೌದ್ಧಿಕ ಶಕ್ತಿಯನ್ನು ಉತ್ಪಾದನಾ ವಲಯದಲ್ಲಿ ಬಳಕೆ ಮಾಡಲಾಗುತ್ತಿಲ್ಲ. ಕೆಟ್ಟ ಐಡಿಯಾ ಇದ್ದರು ಒಳ್ಳೆಯ ಜನರು ಇದ್ದರೆ ಅದನ್ನು ಉತ್ತಮವಾದವನ್ನು ಸೃಷ್ಟಿಸುತ್ತಾರೆ. 

  • ಕೆಲವು ರಾಜ್ಯದಲ್ಲಿ 2.55 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಆ ರಾಜ್ಯ ಯಾವುದು ಎಂದು ನಾನು ಹೆಸರು ಹೇಳುವುದಿಲ್ಲ. ಆನಂತರ ಅದಕ್ಕೆ ಬಣ್ಣ ಹಾಕುವುದು ಬೇಡ. ನಮ್ಮಲ್ಲಿ ಎಷ್ಟು ಜಲಾಶಯ, ನದಿಗಳಿವೆ.. ಬೇರೆಯವರನ್ನು ಟೀಕೆ ಮಾಡುತ್ತಾ ಕುಳಿತರೆ ಇಲ್ಲಿ ಉದ್ಧಾರವಾಗುವುದು ಯಾವಾಗ? ಅಲ್ಲಿ ಆಗುವುದು ಹೇಗೆ? ಇಲ್ಲಿ ಏಕೆ ಆಗುವುದಿಲ್ಲ? ವೈದ್ಯಕೀಯ, ಎಂಜಿನಿಯರಿಂಗ್‌, ಫಾರ್ಮಸಿ ಕಾಲೇಜುಗಳು ಇಲ್ಲಿವೆ. ಇದಕ್ಕಾಗಿ ನಮಗೆ ಒಳ್ಳೆಯ ಅಧಿಕಾರಿಗಳು ಬೇಕು. ಮೆರಿಟ್‌ ಒಂದೇ ಪರಿಗಣಿಸಬೇಕು ಎಂದು ಹೇಳಲಾಗದು. ಆದರೆ, ಪ್ರಾಮಾಣಿಕತೆ? 

  • ಯಾವುದೇ ನಿಯಮ ತನ್ನಷ್ಟೇ ತಾನು ಕೆಲಸ ಮಾಡುವುದಿಲ್ಲ. ಅದಕ್ಕೆ ಅಂತಿಮವಾಗಿ ಮನುಷ್ಯರು ಬೇಕು. ಆ ಮನುಷ್ಯರನ್ನು ನೇಮಕ ಮಾಡಲು ಏನು ಮಾಡುತ್ತೀರಿ/ಪ್ರಕ್ರಿಯೆ ಏನು ಅನುಸರಿಸುತ್ತೀರಿ ಎಂಬುದನ್ನು ಸರ್ಕಾರ ತಿಳಿಸಬೇಕು. 

  • ತನಿಖೆ ನಡೆಯುತ್ತಿರುವಾಗ ಅಭ್ಯರ್ಥಿಗಳ ಪಟ್ಟಿಯನ್ನು ಏಕೆ ಅಂತಿಮಗೊಳಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಏಕೆ ಹೇಳಿಲ್ಲ? ನೇಮಕಾತಿ ಆದೇಶ ನೀಡುವಾಗ ಅಷ್ಟು ಆತುರದಲ್ಲಿ ಸರ್ಕಾರ ನಡೆದುಕೊಂಡಿರುವುದೇಕೆ? ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಅದನ್ನು ತಾರ್ಕಿಕವಾಗಿ ಅಂತ್ಯ ಕಾಣಿಸಲಾಗುವುದು. ನಮ್ಮ ಮಿತಿ ಗೊತ್ತಿದೆ. ಪಟ್ಟಿಯನ್ನು ಅಂತಿಮಗೊಳಿಸಿದ್ದು ಯಾರು, ಅವರ ಹೆಸರುಗಳನ್ನು ನೀಡಬೇಕು. ಅವರ ಆಂತರಿಕ ಅಂಗಗಳಿಗೆ ಏನಾದರೂ ಆಗಲೇಬೇಕು. ಹೀಗೆ ಮಾಡಿದರೆ ಒಳ್ಳೆಯವರ ಗತಿ ಏನು? ಐವರು ಸದಸ್ಯರ ಸಮಿತಿ ತನಿಖೆ ನಡೆಸುತ್ತಿದೆ. ಅದಾಗ್ಯೂ ಹೇಗೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗಿದೆ ಎಂದು ಸರ್ಕಾರ ಪ್ರಶ್ನಿಸಬೇಕಿತ್ತು. ಇದರಲ್ಲಿ ಕೆಲವರು ಭಾಗಿಯಾಗದೇ ಇರಲು ಸಾಧ್ಯವಿಲ್ಲ. 

  • ಕೆಪಿಎಸ್‌ಸಿಯು ಎರಡು ಮುಚ್ಚಿದ ಲಕೋಟೆಯಲ್ಲಿ 24 ಅಭ್ಯರ್ಥಿಗಳ ಓಎಂಆರ್‌ ಪ್ರತಿಗಳು, ಇನ್ನೊಂದರಲ್ಲಿ ಎಫ್‌ಎಸ್‌ಎಲ್‌ ವರದಿ, ಹಾರ್ಡ್‌ ಡಿಸ್ಕ್‌ ಮತ್ತು ಪೆನ್‌ಡ್ರೈವ್‌ ಸೇರಿವೆ. ಇದನ್ನು ರಿಜಿಸ್ಟ್ರಾಲ್‌ ಜನರಲ್‌ ತಮ್ಮ ಕಚೇರಿಯಲ್ಲಿ ಮುಂದಿನ ಆದೇಶದವರೆಗೆ ಇಟ್ಟುಕೊಳ್ಳಬೇಕು. 

  • ನ್ಯಾಯಾಲಯ, ಸಾಂವಿಧಾನಿಕ ಸಂಸ್ಥೆಗಳು ಹೇಗೆ ಕರ್ತವ್ಯ ನಿರ್ವಹಿಸುತ್ತವೆ ಎಂಬುದು ಜನರಿಗೆ ಗೊತ್ತಾಗಲಿ. ಕೆಪಿಎಸ್‌ಸಿ ನೇಮಕಾತಿ ಸಂದರ್ಭದಲ್ಲಿ ಏನೆಲ್ಲಾ ಆಗಿದೆ ಎಂಬುದರ ವಿಡಿಯೊವನ್ನು ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಪ್ರಸಾರ ಮಾಡೋಣ. ಇದೆಲ್ಲವೂ ಜನರಿಗೆ ತಿಳಿಯಬೇಕಿದೆ. ಎಲ್ಲೆಲ್ಲಿ ಸೆಗಣಿ ತಯಾರಾಗುತ್ತದೆ. ಎಲ್ಲೆಲ್ಲಿ ಸೆಗಣಿ ತಿನ್ನೋರು ಇದ್ದಾರೆ. ಎಲ್ಲೆಲ್ಲಿ ಸೆಗಣಿ ತಾವು ತಿಂದು, ಬೇರೆಯವರಿಗೆ ಒರೆಸುವವರು ಇದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕಿದೆ. ವ್ಯವಸ್ಥೆ ಸ್ವಚ್ಛವಾಗುವುದಿಲ್ಲ. ಯಾರಾದರೂ, ಎಲ್ಲಿಯಾದರೂ ಸ್ವಚ್ಛ ಮಾಡುವ ಕೆಲಸ ಆರಂಭಿಸಬೇಕಿದೆ. ಮಾತ್ರೆಯಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಇದಕ್ಕೆ ನಾಲ್ಕಾರು ತಲೆಗಳು ಉರುಳಬೇಕು. ಇಲ್ಲವಾದರೆ ಅಷ್ಟೂ ಮಂದಿ ಅಪ್ರಾಮಾಣಿಕರು ಎಂದಾಗಿ ಬಿಡುತ್ತದೆ. ಎಲ್ಲಾ ಕಡೆ ಒಳ್ಳೆಯವರು ಮತ್ತು ಕೆಟ್ಟವರು ಇದ್ದಾರೆ. ಇದನ್ನು ಸರಿಪಡಿಸಲು ನಮಗೆ (ಅರ್ಜಿದಾರರು ಮತ್ತು ಅಡ್ವೊಕೇಟ್‌ ಜನರಲ್) ಸಹಾಯ ಮಾಡಬೇಕು. 

  • ಹಾಲಿ ಕೆಪಿಎಸ್‌ಸಿ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಯಾವುದಾದರೂ ಪ್ರಕರಣಗಳು ಹಿಂದೆ ಅಥವಾ ಈಗ ಇವೆಯೇ ಎಂಬ ಪಟ್ಟಿಯನ್ನು ಸರ್ಕಾರ ಒದಗಿಸಬೇಕು. ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಮಾಹಿತಿಯನ್ನೂ ಒದಗಿಸಬೇಕು.

  • ನೇಮಕವಾಗಿ ಕರ್ತವ್ಯದಲ್ಲಿರುವ ಸಹಾಯಕ ಎಂಜಿನಿಯರ್‌ಗಳ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಆತುರದ ಕ್ರಮಕೈಗೊಳ್ಳುವಂತಿಲ್ಲ. ಕೆಪಿಎಸ್‌ಸಿ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ.

ಅಡ್ವೊಕೇಟ್‌ ಜನರಲ್‌ ವಾದ

  • ಕೆಪಿಎಸ್‌ಸಿಯ ಇಂದಿನ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಅದರ ಸದಸ್ಯರು, ಸಂವಿಧಾನ, ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ, ಎಷ್ಟು ಸದಸ್ಯರು ಇರಬೇಕು, ಸಂದರ್ಶನ ನಡೆಸಬೇಕಿರುವ ರೀತಿ, ಎರವಲು ಸೇವೆಯ ಮೇಲೆ ನಿಯೋಜನೆ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಕರಡು ಮಸೂದೆ ರಚಿಸಲಾಗಿದೆ. ಆಯೋಗವು ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಪೂರ್ವಾನುಮತಿ ಪಡೆಯುವಂತೆ ಮಾಡುವ ಚಿಂತನೆ ಇದೆ. ಕೆಪಿಎಸ್‌ಸಿ ಪರಿಸ್ಥಿತಿ ಚಿಂತಾಜಕವಾಗಿದೆ.

  • ಕೆಪಿಎಸ್‌ಸಿ ತಿದ್ದುಪಡಿ ಕಾಯಿದೆಯಲ್ಲಿ ನ್ಯಾಯಾಲಯ ಎತ್ತಿರುವ ಎಲ್ಲಾ ವಿಚಾರಗಳನ್ನು ಅಡಕಗೊಳಿಸಲಾಗಿದೆ. ಇದನ್ನು ಮುಂದಿನ ವಿಚಾರಣೆ ವೇಳೆಗೆ ಪೀಠದ ಮುಂದೆ ಇಡಲಾಗುವುದು. ನ್ಯಾಯಾಲಯ ನೀಡುವ ಸಲಹೆಗಳನ್ನೂ ಅದಕ್ಕೆ ಸೇರ್ಪಡೆ ಮಾಡಲಾಗುವುದು.

  • ಯುಪಿಎಸ್‌ಸಿ ಸೇರಿದಂತೆ ಅತಿಹೆಚ್ಚು ಸದಸ್ಯರು ಇರುವುದು ಕೆಪಿಎಸ್‌ಸಿಯಲ್ಲಿ. ಅದನ್ನು ಕಡಿತಗೊಳಿಸಲಾಗುವುದು. ಸಂದರ್ಶಕರ ಸಂಖ್ಯೆ ಕಡಿತಗೊಳಿಸಿ, ತಜ್ಞರನ್ನು ಅಲ್ಲಿಗೆ ನೇಮಕ ಮಾಡಲಾಗುವುದು. ಇದೆಲ್ಲವೂ ತಿದ್ದುಪಡಿ ಮಸೂದೆಯಲ್ಲಿ ಸೇರಿದೆ.

  • ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಾವಧಿಯಲ್ಲಿ ತನಿಖೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬಹುದು. 2024ರ ಮಾರ್ಚ್‌ 4ರಂದು ಮೂವರು ಸದಸ್ಯರ ಸಮಿತಿಯನ್ನು ರದ್ದುಗೊಳಿಸಿ, ಐವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಒಟ್ಟಾರೆ ಕೆಪಿಎಸ್‌ಸಿ ಶುದ್ಧೀಕರಣಕ್ಕೆ ನ್ಯಾಯಾಲಯಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸಲಾಗುವುದು.

  • ಕೆಪಿಎಸ್‌ಸಿ ಒಳಗಿನ ಸಮಸ್ಯೆ ಹೂಟಾ ಸಮಿತಿಯ ಶಿಫಾರಸ್ಸುಗಳ ಆನಂತರದ ಬೆಳವಣಿಗೆಗಳ ಬಗ್ಗೆ ನ್ಯಾಯಾಲಯಕ್ಕೆ ವಿಸ್ತೃತವಾದ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದ ಕೆಪಿಎಸ್‌ಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ರೊಬೆನ್‌ ಜಾಕಬ್‌.

  • ನೇಮಕಾತಿಯನ್ನು ಕಾಲಮಿತಿಯಲ್ಲಿ ನಡೆದಿದ್ದರೆ ಹಗರಣಕ್ಕೆ ಅವಕಾಶವೇ ಇರುತ್ತಿರಲಿಲ್ಲ. ನಾಲ್ಕು ತಿಂಗಳು ವಿಳಂಬ ಮಾಡಿದ್ದು ಇಂದಿನ ಸ್ಥಿತಿಗೆ ಕಾರಣ ಎಂದು ದೂರಿದ ಹಿರಿಯ ವಕೀಲ ಭಾಗವತ್.‌