Supreme Court, Marital Rape 
ಸುದ್ದಿಗಳು

ವೈವಾಹಿಕ ಅತ್ಯಾಚಾರ ಎಂಬುದು ಜನತೆ ಮತ್ತು ಪುರುಷ ಪ್ರಧಾನತೆಯ ನಡುವಿನ ಸಂಘರ್ಷ: ಸುಪ್ರೀಂನಲ್ಲಿ ಕರುಣಾ ನಂದಿ ವಾದ

ಅತ್ಯಾಚಾರ ಈಗಾಗಲೇ ಅಪರಾಧ ಎನಿಸಿಕೊಂಡಿದ್ದು ಅದರ ವ್ಯಾಪ್ತಿಯಿಂದ ಪತಿಯನ್ನು ಮಾತ್ರ ಹೊರಗಿಡಲಾಗಿದೆ. ಆತನಿಗೆಂದೇ ಪ್ರತ್ಯೇಕ ಅಪರಾಧ ಇರಬಾರದು ಎಂದು ಹಿರಿಯ ವಕೀಲೆ ಕರುಣಾ ನಂದಿ ವಾದಿಸಿದರು.

Bar & Bench

ಭಾರತದಲ್ಲಿ ವೈವಾಹಿಕ ಅತ್ಯಾಚಾರವನ್ನುಅಪರಾಧೀಕರಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಆರಂಭಿಸಿದೆ. [ ಹೃಷಿಕೇಶ್ ಸಾಹೂ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ]

ವೈವಾಹಿಕ ಸಂಸ್ಥೆಯ ಮೇಲೆ ವೈವಾಹಿಕ ಅತ್ಯಾಚಾರದ ಅಪರಾಧಿಕರಣದಿಂದಾಗುವ ಪರಿಣಾಮವನ್ನು ವಿವರಿಸುವಂತೆ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಕೇಳಿತು.

ಪತ್ನಿಯರು ಅವರ ಗಂಡಂದಿರ ಮೇಲೆ ಅತ್ಯಾಚಾರದ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ತಡೆಯುವ ಕಾನೂನು ವಿನಾಯಿತಿ ರದ್ದುಗೊಳಿಸಿದರೆ ಅದು ಪ್ರತ್ಯೇಕ ಅಪರಾಧವನ್ನು ಸೃಷ್ಟಿಸುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್‌ಗೊಳಿಸುವಂತೆ ಒತ್ತಾಯಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಿದ್ದ, ಕೇಂದ್ರ ಸರ್ಕಾರ ಮದುವೆಯಾದ ಮಹಿಳೆಯರಿಗೆ ಕಾನೂನಿನ ಅಭಯವಿದೆ. ವೈವಾಹಿಕ ಅತ್ಯಾಚಾರದ ವಿಷಯವು ಕಾನೂನಿಗಿಂತಲೂ ಹೆಚ್ಚಾಗಿ ಸಾಮಾಜಿಕ ವ್ಯಾಪ್ತಿಗೆ ಬರುತ್ತದೆ ಎಂದು ಈ ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು.

ಐಪಿಸಿ ಸೆಕ್ಷನ್‌ 375ಕ್ಕೆ ವಿನಾಯಿತಿ 2ರ ಮೂಲಕ ವೈವಾಹಿಕ ಅತ್ಯಾಚಾರವನ್ನು ಅತ್ಯಾಚಾರದ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಜುಲೈ 1ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿಯೂ (ಬಿಎನ್‌ಎಸ್‌) ಇದೇ ಅಂಶಗಳಿವೆ.

ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ 2022ರಲ್ಲಿ, ಭಿನ್ನ ತೀರ್ಪು ನೀಡಿತ್ತು. ಪ್ರಕರಣ ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತ್ತು.

ಅರ್ಜಿದಾರರ ಪರವಾಗಿ ಇಂದು ವಾದ ಆರಂಭಿಸಿದ ಹಿರಿಯ ವಕೀಲೆ ಕರುಣಾ ನಂದಿ ಅತ್ಯಾಚಾರ ಆರೋಪದ ಮೇಲೆ ಪತಿಯನ್ನು ವಿಚಾರಣೆಗೆ ಒಳಪಡಿಸದಂತೆ  ತಡೆಯುವುದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಬೇಕು ಎಂದು ಕೋರಿದರು.

ಆದರೆ ಇಂತಹ ನಿರ್ಧಾರದಿಂದ ನ್ಯಾಯಾಲಯವೇ ಪ್ರತ್ಯೇಕ ಅಪರಾಧವನ್ನು ಸೃಷ್ಟಿಸಿದಂತಾಗುವುದಿಲ್ಲವೇ ಎಂದು ಸಿಜೆಐ ಪ್ರಶ್ನಿಸಿದರು.

ಈ ವೇಳೆ ನಂದಿ ಅವರು ಈ ಅಪರಾಧವನ್ನು ಕಾನೂನು ಈಗಲೂ ಒಳಗೊಳ್ಳುತ್ತದೆ ಎಂದು ಐಪಿಸಿ ಸೆಕ್ಷನ್‌ 375ರ ನಿಬಂಧನೆಗಳನ್ನು ಇದಕ್ಕೆ ಪೂರಕವಾಗಿ ವಿವರಿಸಿದರು. ಮುಂದುವರೆದು ಅವರು, "ಈ ವಿಷಯದಲ್ಲಿ ಮೂರು ವರ್ಗದ ಸಂತ್ರಸ್ತೆಯರು ಅಥವಾ ಆರೋಪಿಗಳನ್ನು ನಾವು ಕಾಣಬಹುದು. ಮೊದಲನೆಯದು ಸಂತ್ರಸ್ತೆಗೆ ಸಂಬಂಧವಿರದ ಆರೋಪದಿಂದ ನಡೆಯುವ ಅತ್ಯಾಚಾರ, ಎರಡನೆಯದು ಆಕೆಯ ಸಮ್ಮತಿಯಿಲ್ಲದೆ (ಪತಿ) ನಡೆಸುವ ಲೈಂಗಿಕ ಸಂಭೋಗ ಮತ್ತು ಮೂರನೆಯದು ಅಕೆಯಿಂದ ಪ್ರತ್ಯೇಕಿತನಾದ ಪತಿ ನಡೆಸುವ ಅತ್ಯಾಚಾರ, ಹಾಗಾಗಿ ಇದೇನು ಹೊಸ ಅಪರಾಧವಲ್ಲ," ಎಂದು ವಿವರಿಸಿದರು.

ಅಲ್ಲದೆ, "ತನ್ನ ಗಂಡನಿಂದ ಅತ್ಯಾಚಾರಕ್ಕೀಡಾದರಾಗಲಿ ಅಥವಾ ಅಪರಿಚಿತ ಅಥವಾ ಪ್ರತ್ಯೇಕಗೊಂಡಿರುವ ಪತಿಯಿಂದ ಅತ್ಯಾಚಾರಕ್ಕೀಡಾಗುವುದಾಗಲಿ ಇದರಿಂದ ಉಂಟಾಗುವ ತೊಂದರೆ ವಿಭಿನ್ನವೇನಲ್ಲ. ಒಂದೊಮ್ಮೆ ಲಿವ್‌-ಇನ್‌ ಸಂಬಂಧದಲ್ಲಿ ಇದ್ದರೂ ಆಗಲೂ ಸಹಮತವಿಲ್ಲದೆ ಲೈಂಗಿಕ ಕ್ರಿಯೆ ನಡೆದರೆ ಅದು ಸಹ ಅತ್ಯಾಚಾರವೇ. ಹೀಗಿರುವಾಗ ಮದುವೆಯಾಗಿರುವಾಕೆಯ ಮೇಲೆ ಕ್ರೂರ, ಹಿಂಸಾತ್ಮಕ ಕ್ರಿಯೆಗಳನ್ನು (ಪತಿ) ನಡೆಸಿದರೆ ಅದು ಅತ್ಯಾಚಾರವಲ್ಲವೇ?" ಎಂದು ಪ್ರಶ್ನಿಸಿದರು.

ಈ ವೇಳೆ ನ್ಯಾಯಾಲಯವು ವೈವಾಹಿಕ ಚೌಕಟ್ಟಿನಲ್ಲಿ ಸಮ್ಮತಿಯಿಲ್ಲದೆ ನಡೆಯುವ ಸಂಭೋಗವನ್ನು ಅಪರಾಧೀಕರಣಗೊಳಿಸುವುದು ವಿವಾಹವೆನ್ನುವ ಸಂಸ್ಥೆಯನ್ನು ಅಸ್ಥಿರಗೊಳಿಸುವ ಸಾಧ್ಯತೆ ಇಲ್ಲವೇ ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ನಂದಿ ಅವರು, ಸುಪ್ರೀಂ ಕೋರ್ಟ್‌ ಈ ಹಿಂದೆ ಪ್ರಕರಣವೊಂದರಲ್ಲಿ ತಿಳಿಸಿರುವಂತೆ ಖಾಸಗಿತನವನ್ನು (ವಿವಾಹದಂತಹ ಸಾಮಾಜಿಕ ಸಂಸ್ಥೆಗಳು ಹೊಂದಿರುವ ಖಾಸಗಿತನ) ಮಹಿಳೆಯರನ್ನು ಶೋಷಿಸಲು ಬಳಸಲಾಗದು ಎನ್ನುವ ಅಂಶವನ್ನು ನ್ಯಾಯಾಲಯದ ಮುಂದಿರಿಸಿದರು.

"ಕೆ ಎಸ್ ಪುಟ್ಟಸ್ವಾಮಿ ಪ್ರಕರಣದಲ್ಲಿ ಖಾಸಗಿತನದ ಮುಸುಕನ್ನು ಮಹಿಳೆಯರ ಹಕ್ಕನ್ನು ದಮನಿಸಲು ಅಥವಾ ಲಿಂಗಾಧಾರಿತ ಹಿಂಸೆ ನಡೆಸಲು ಬಳಸಲಾಗದು ಎನ್ನಲಾಗಿದೆ," ಎಂದು ವಿವರಿಸಿದರು.

ಈ ಹಂತದಲ್ಲಿ ನ್ಯಾಯಮೂರ್ತಿ ಪರ್ದಿವಾಲಾ, "ಹಾಗಾದರೆ ಹೆಂಡತಿ ಲೈಂಗಿಕತೆಯನ್ನು ನಿರಾಕರಿಸಿದಾಗ, ಪತಿಗೆ ವಿಚ್ಛೇದನ  ಕೇಳುವುದೊಂದೇ ಆಯ್ಕೆ ಎಂದು ನೀವು ಹೇಳುತ್ತಿದ್ದೀರಾ?" ಎಂದಿತು.

ಆಗ ಕರುಣಾ ಅವರು ವೈವಾಹಿಕ ಅತ್ಯಾಚಾರ ಎಂಬುದು ಪುರುಷನ ವಿರುದ್ಧ ಮಹಿಳೆ ನಡೆಸುತ್ತಿರುವ ವ್ಯಾಜ್ಯವಲ್ಲ ಬದಲಿಗೆ ಇದು ಜನತೆ ಮತ್ತು ಪುರುಷ ಪ್ರಧಾನತೆಯ ನಡುವಿನ ಸಂಘರ್ಷ. ಪುರುಷರ ಹಕ್ಕುಗಳನ್ನು ಕೂಡ ಇದು ಒಳಗೊಂಡಿದೆ ಎಂದರು.

ನಂತರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು ವಿದೇಶಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳತ್ತ ಗಮನ ಸೆಳೆದರು.  ಈ ಹಂತದಲ್ಲಿ ಪ್ರತ್ಯೇಕವಾಗಿ ವಾಸಿಸುವ ಹೆಂಡತಿಯೊಂದಿಗೆ ಗಂಡ ನಡೆಸುವ ಲೈಂಗಿಕ ಸಂಭೋಗವನ್ನು ಅಪರಾಧವೆಂದು ಪರಿಗಣಿಸುವ ಬಿಎನ್‌ಎಸ್‌  ಸೆಕ್ಷನ್ 67 ಅಥವಾ ಐಪಿಸಿ ಸೆಕ್ಷನ್‌ 376 ಬಿ ಬಗ್ಗೆಯೂ ಚರ್ಚೆ ನಡೆಯಿತು. ಬರುವ ಮಂಗಳವಾರ (ಅ.22) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.