Justice NV Ramana 
ಸುದ್ದಿಗಳು

ನ್ಯಾಯಾಲಯಕ್ಕೆ ತೆರಳಲು ಜನ ಹಿಂಜರಿಯಬಾರದು, ನ್ಯಾಯಾಂಗದ ಮೇಲಿನ ನಂಬಿಕೆ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ: ಸಿಜೆಐ ರಮಣ

ಅನೇಕ ಬಾರಿ, ಜನ ನ್ಯಾಯಾಲಯಗಳನ್ನು ಸಂಪರ್ಕಿಸಲು ಉತ್ಸುಕರಾಗಿರುವುದಿಲ್ಲ. ತಮ್ಮ ಜೀವನದಲ್ಲಿ ನ್ಯಾಯಾಲಯ ಹೇಗಿರುತ್ತದೆ ಎಂದು ನೋಡಿಯೇ ಇಲ್ಲ ಎಂಬುದಾಗಿ ಹೆಮ್ಮೆಪಡುತ್ತಾರೆ ಎಂದು ಸಿಜೆಐ ಹೇಳಿದರು.

Bar & Bench

ದೇಶದ ನ್ಯಾಯಾಲಯಗಳು ಸಾಂವಿಧಾನಿಕ ಹಕ್ಕುಗಳಿಗೆ ಖಾತರಿ ನೀಡುತ್ತಿದ್ದು ವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿದಿವೆ. ಜೊತೆಗೆ ಕಾರ್ಯಾಂಗದ ಕ್ರಮಗಳ ವಿರುದ್ಧ ಅವರಿಗೆ ರಕ್ಷಣೆ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶನಿವಾರ ಹೇಳಿದ್ದಾರೆ.

ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ ನೂತನ ಸಂಪರ್ಕ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಮಾತನಾಡುತ್ತಿದ್ದರು. "ಆದರೆ ಅನೇಕ ಬಾರಿ, ಜನ ನ್ಯಾಯಾಲಯಗಳನ್ನು ಸಂಪರ್ಕಿಸಲು ಉತ್ಸುಕರಾಗಿರುವುದಿಲ್ಲ. ತಮ್ಮ ಜೀವನದಲ್ಲಿ ನ್ಯಾಯಾಲಯ ಹೇಗಿರುತ್ತದೆ ಎಂದು ನೋಡಿಯೇ ಇಲ್ಲ ಎಂಬುದಾಗಿ ಹೆಮ್ಮೆಪಡುತ್ತಾರೆ" ಎಂದು ಅವರು ಹೇಳಿದರು.

"ಈ ಕಲ್ಪನೆ ತೊಡೆದು ಹಾಕಲು ಈಗ ಕಾಲ ಕೂಡಿಬಂದಿದೆ. ಸಾಮಾನ್ಯ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಿದ್ದು ಅವನು ನ್ಯಾಯಾಲಯ ಸಂಪರ್ಕಿಸಲು ಹಿಂಜರಿಯಬಾರದು. ನ್ಯಾಯಾಂಗದಲ್ಲಿ ಜನರು ಇಡುವ ನಂಬಿಕೆ ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾಗಿದೆ" ಎಂದು ವಿವರಿಸಿದರು.

ದೇಶದ ನ್ಯಾಯಾಂಗ ಮೂಲಸೌಕರ್ಯದ ಸ್ಥಿತಿ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು “ದೇಶದಲ್ಲಿ ಒಟ್ಟು 24,280 ನ್ಯಾಯಾಂಗ ಅಧಿಕಾರಿಗಳು ಇದ್ದಾರೆ. 623 ಬಾಡಿಗೆ ಕಟ್ಟಡಗಳು ಸೇರಿದಂತೆ 20,143 ನ್ಯಾಯಾಲಯಗಳಿವೆ” ಎಂದರು.

ನ್ಯಾಯಾಲಯಗಳಿಗೆ ಉತ್ತಮ ಮೂಲಸೌಕರ್ಯ ಎಂಬುದು ಯಾವಾಗಲೂ ಮರೀಚಿಕೆಯಾಗಿದ್ದು ಭಾರತದ ಕೋರ್ಟ್‌ಗಳು ಶಿಥಿಲ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನ್ಯಾಯಾಂಗ ಕಾರ್ಯಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪರಿಣಾಮಕಾರಿ ನ್ಯಾಯಾಂಗವು ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡಲಿದ್ದು ನ್ಯಾಯದಾನದಲ್ಲಿ ವಿಫಲವಾದರೆ ಅದು ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಅವರು ಹೇಳಿದರು. ಪರಿಣಾಮಕಾರಿ ನ್ಯಾಯ ವಿತರಣೆಗಾಗಿ, ಉತ್ತಮ ಮೂಲಸೌಕರ್ಯ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

"ನೀವು ನ್ಯಾಯಾಂಗ ವ್ಯವಸ್ಥೆಯಿಂದ ಭಿನ್ನ ಫಲಿತಾಂಶ ಬಯಸಿದರೆ ನಾವು ಈ ಸ್ಥಿತಿಯಲ್ಲಿ ಕೆಲಸ ಮುಂದುವರೆಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ತಳಕು ಹಾಕಿಕೊಂಡ ಅಂಶವೆಂದರೆ ಆರ್ಥಿಕಸ್ವಾಯತ್ತತೆ. ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರ ಸ್ಥಾಪಿಸಲು ನಾನು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ" ಎಂದು ತಿಳಿಸಿದ ನ್ಯಾ. ರಮಣ, “ನಾನು ಸಕಾರಾತ್ಮಕಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಇದನ್ನುಪರಿಗಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ದೃಶ್ಯಾವಳಿಗಳನ್ನು ಇಲ್ಲಿ ವೀಕ್ಷಿಸಿ: