ಮುಂಬೈನ ಆದಾಯ ತೆರಿಗೆ ಇಲಾಖೆ ಮತ್ತು ವೊಡಾಫೋನ್ ಐಡಿಯಾ
ಮುಂಬೈನ ಆದಾಯ ತೆರಿಗೆ ಇಲಾಖೆ ಮತ್ತು ವೊಡಾಫೋನ್ ಐಡಿಯಾ 
ಸುದ್ದಿಗಳು

ವೊಡಾಫೋನ್ ತೆರಿಗೆ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ತೀರ್ಪಿತ್ತ ಅಂತರರಾಷ್ಟ್ರೀಯ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿ

Bar & Bench

ಹೇಗ್ ನಲ್ಲಿರುವ ಅಂತರಾಷ್ಟ್ರೀಯ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯವು (ಪಿಸಿಎ) ವೊಡಾಫೋನ್ ಪರವಾಗಿ ತೀರ್ಪು ನೀಡಿದೆ. ಪರಿಣಾಮ 2007ರಲ್ಲಿ ಹಚ್‌ ಕಂಪೆನಿಯ ಭಾರತೀಯ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದ ಕಾರಣಕ್ಕೆ ವಿಧಿಸಲಾದ ತೆರಿಗೆ, ದಂಡ ಹಾಗೂ ಬಡ್ಡಿ ರೂಪದಲ್ಲಿ 5.5 ಶತಕೋಟಿ ಡಾಲರ್ (ಇಂದಿನ ಪರಿವರ್ತನೆ ದರಗಳಲ್ಲಿ ಅಂದಾಜು 40,000 ಕೋಟಿ ರೂ.) ಮೊತ್ತ ಪಾವತಿಸಬೇಕು ಎಂಬ ಕೇಂದ್ರದ ನಿಲುವಿಗೆ ಹಿನ್ನಡೆಯಾಗಿದೆ.

ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವೆ ಏರ್ಪಟ್ಟಿರುವ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ (ಬಿಐಟಿ) ಅಡಿಯಲ್ಲಿ ವೊಡಾಫೋನ್ ನ್ಯಾಯಯುತ ಮತ್ತು ಸಮಾನ ಉಪಚಾರಕ್ಕೆ ಅರ್ಹವಾಗಿದೆ ಎಂದು ಶಾಶ್ವತ ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

2012ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಹೊರತಾಗಿಯೂ ಕೇಂದ್ರ ಸರ್ಕಾರ ರೂ 40,000 ಕೋಟಿಯಷ್ಟು ಪರಿಹಾರ ಕೇಳಿರುವುದು ಬಿಐಟಿ ಒಪ್ಪಂದದ ಉಲ್ಲಂಘನೆ ಎಂದು ನ್ಯಾಯಮಂಡಳಿ ಹೇಳಿದೆ.

ಅಲ್ಲದೆ ಕಾನೂನು ಪ್ರಾತಿನಿಧ್ಯ, ನೆರವು ಹಾಗೂ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕಕ್ಕಾಗಿ ಕಂಪೆನಿ ವೆಚ್ಚದ ಶೇ 60ರಷ್ಟು ಅಂದರೆ 40 ಲಕ್ಷ ಪೌಂಡ್ ಹಣವನ್ನು ಕಂಪೆನಿಗೆ ಪಾವತಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅನಿವಾಸಿಗಳ ನಡುವೆ ವಿದೇಶಿ ಕಂಪನಿಯ ಷೇರುಗಳನ್ನು ವರ್ಗಾವಣೆ ಮಾಡುವ ಸಂಬಂಧ ವೊಡಾಫೋನ್ ಮೇಲೆ ಕಟ್ಟುಪಾಡು ವಿಧಿಸಲು ತೆರಿಗೆ ಇಲಾಖೆಗೆ ಯಾವುದೇ ಅಧಿಕಾರವಿಲ್ಲ ಎಂದು 2012ರಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಬಳಿಕ ಆದಾಯ ತೆರಿಗೆ ಕಾಯ್ದೆಗೆ ಸಂಸತ್ತು ಪೂರ್ವಾನ್ವಯವಾಗುವಂತೆ ತಿದ್ದುಪಡಿಗಳನ್ನು ತಂದ ಪರಿಣಾಮ 2012 ರ ಸುಪ್ರೀಂ ಕೋರ್ಟ್ ತೀರ್ಪು ಪರಿಣಾಮ ಬೀರದಾಯಿತು. ವೊಡಾಫೋನ್‌ ತೆರಿಗೆ, ದಂಡ ಹಾಗೂ ಬಡ್ಡಿ ಪಾವತಿಸಬೇಕಾದ ಅಂಶವನ್ನು ಎತ್ತಿ ಹಿಡಿಯಲಾಯಿತು.

ಇದು ವೋಡಾಫೋನ್‌ ಅನ್ನು ಭಾರತ ಸರ್ಕಾರದ ತಪ್ಪು ಕ್ರಮಗಳನ್ನು ಮುಂದು ಮಾಡಿ ನೆದರ್ಲೆಂಡ್- ಭಾರತ ನಡುವಿನ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ಅಂತರರಾಷ್ಟ್ರೀಯ ಶಾಶ್ವತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವಂತೆ ಮಾಡಿತು. ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ವೊಡಾಫೋನ್ ಪರವಾಗಿ ಶಾಶ್ವತ ನ್ಯಾಯಮಂಡಳಿಯಲ್ಲಿ ವಾದ ಮಂಡಿಸಿದ್ದರು.