ಖಾಯಂ ಲೋಕ ಅದಾಲತ್‌ಗಳಿಗೆ ರಾಜಿ ಸಂಧಾನ ಮಾಡುವ ಮತ್ತು ತೀರ್ಪು ನೀಡುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ [ಕೆನರಾ ಬ್ಯಾಂಕ್ ಮತ್ತು ಜಿ ಎಸ್ ಜಯರಾಮ ನಡುವಣ ಪ್ರಕರಣ].
ಖಾಯಂ ಲೋಕ ಅದಾಲತ್‌ಗಳು ಮೊದಲು ವಿವಾದ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಕಕ್ಷಿದಾರರ ನಡುವೆ ಯಾವುದೇ ಒಪ್ಪಂದ ಏರ್ಪಡದಿದ್ದಾಗ ಮಾತ್ರ ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸಲು ಮುಂದಾಗಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ತಿಳಿಸಿದೆ.
ಖಾಯಂ ಲೋಕ ಅದಾಲತ್‌ಗಳಿಗೆ (ಪಿಎಲ್‌ಎ) ತೀರ್ಪು ನೀಡುವ ಅಧಿಕಾರ ಇಲ್ಲ ಎಂದು ಮಾರ್ಚ್ 6, 2021ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರತಿವಾದಿ ಜಿ ಎಸ್ ಜಯರಾಮ ಅವರಿಗೆ ಸಾಲದ ಮೊತ್ತವನ್ನು ಮರುಪಾವತಿಸಲು ನಿರ್ದೇಶಿಸಬೇಕೆಂದು ಕೋರಿ ಮೇಲ್ಮನವಿದಾರ ಕೆನರಾ ಬ್ಯಾಂಕ್ ಈ ಹಿಂದೆ ಲೋಕ ಅದಾಲತ್‌ಗೆ ಅರ್ಜಿ ಸಲ್ಲಿಸಿತ್ತು. ಜಯರಾಂ ಅವರು ಲೋಕ ಅದಾಲತ್‌ನಲ್ಲಿ ಭಾಗವಹಿಸದೇ ಇದ್ದುದರಿಂದ ಏಕ-ಪಕ್ಷೀಯ ಆದೇಶ (ಎಕ್ಸ್ ಪಾರ್ಟೆ ಆರ್ಡರ್) ಹೊರಡಿಸಿದ ಅದಾಲತ್ ಶೇಕಡಾ 9ರ ಬಡ್ಡಿಯೊಂದಿಗೆ ಸಾಲ ಹಿಂತಿರುಗಿಸುವಂತೆ ಸೂಚಿಸಿತ್ತು.
ಕರ್ನಾಟಕ ಹೈಕೋರ್ಟ್‌ನಲ್ಲಿ ಇದನ್ನು ಜಯರಾಂ ಪ್ರಶ್ನಿಸಿದ್ದರು. ಹೈಕೋರ್ಟ್ ಜಯರಾಂ ಪರವಾಗಿ ತೀರ್ಪು ನೀಡಿತು. ಆದರೆ ತೀರ್ಪನ್ನು ಬ್ಯಾಂಕ್ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತು. ಏಕಸದಸ್ಯ ಪೀಠದಂತೆಯೇ ತೀರ್ಪು ನೀಡಿದ ವಿಭಾಗೀಯ ಪೀಠ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿತು. ಇದರಿಂದಾಗಿ ಬ್ಯಾಂಕ್, ಸುಪ್ರೀಂ ಕೋರ್ಟ್ ಮೊರೆ ಹೋಯಿತು.
ಕೆನರಾ ಬ್ಯಾಂಕ್ ಮನವಿ ಆಲಿಸಿದ ಸರ್ವೋಚ್ಚ ನ್ಯಾಯಾಲಯ "ಖಾಯಂ ಲೋಕ ಅದಲಾತ್‌ಗೆ ತೀರ್ಪು ನೀಡುವ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಹೇಳಿರುವುದು ಸರಿಯಲ್ಲ. ಪ್ರಸ್ತುತ ಪ್ರಕರಣದಲ್ಲಿ ಅದಾಲತ್ ರಾಜಿ ಸಂಧಾನ ಪಾಲಿಸದೇ ಅದು ನೇರವಾಗಿ ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸಿದೆ. ಕಾಯಿದೆಯ ಪ್ರಕಾರ ರಾಜಿ ಸಂಧಾನದ ಹಂತವು ಕಡ್ಡಾಯವಾಗಿದ್ದು ಅದನ್ನು ತಪ್ಪಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿತು.
ರಾಜಿ ಸಂಧಾನ ಪ್ರಕ್ರಿಯೆಯನ್ನು ಮಾಡದೆ ಖಾಯಂ ಲೋಕ ಅದಾಲತ್ ನೇರವಾಗಿ ಪ್ರಕರಣದ ನ್ಯಾಯ ನಿರ್ಧರಣ ಮಾಡಿರುವುದು ತಪ್ಪು ಎನ್ನುವಷ್ಟರ ಮಟ್ಟಿಗೆ ಹೈಕೋರ್ಟ್‌ನ ತೀರ್ಪು ಸರಿ ಇದೆ ಆದರೆ ಅದಾಲತ್‌ಗೆ ನ್ಯಾಯ ನಿರ್ಧರಣ ತೀರ್ಪು ನೀಡುವ ಅಧಿಕಾರವಿಲ್ಲ ಎನ್ನುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ತಿಳಿಸಿತು.