ಬ್ಯಾಂಕ್‌ ಬಡ್ಡಿದರ ಇಳಿಸಿದ ವಿಚಾರವನ್ನು ಗ್ರಾಹಕರ ಖುದ್ದು ಗಮನಕ್ಕೆ ತರಬೇಕು: ಕರ್ನಾಟಕ ಹೈಕೋರ್ಟ್

ಸುತ್ತೋಲೆಯನ್ನು ಗ್ರಾಹಕರಿಗೆ ಖುದ್ದಾಗಿ ತಲುಪಿಸಿದಾಗ ಮಾತ್ರ ಅವರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿದಂತಾಗುತ್ತದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
Karnataka High Court

Karnataka High Court

Published on

ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿರುವ ಸುತ್ತೋಲೆಯನ್ನು ಬ್ಯಾಂಕ್ಗಳು ನೋಟಿಸ್ ಬೋರ್ಡ್ನಲ್ಲಿ ಅಂಟಿಸಿದ ಮಾತ್ರಕ್ಕೆ ವಿಚಾರವನ್ನು ಗ್ರಾಹಕರಿಗೆ ತಲುಪಿಸಿದಂತಾಗುವುದಿಲ್ಲ. ಅದನ್ನು ಗ್ರಾಹಕರ ಗಮನಕ್ಕೂ ತರಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಸುತ್ತೋಲೆ ಹೊರಡಿಸಿದ ದಿನದಿಂದ ಅನ್ವಯವಾಗುವಂತೆ ಬಡ್ಡಿದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ನೀಡುವಂತೆ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಷ್ಟ್ರೀಕೃತ ಬ್ಯಾಂಕ್ ಒಂದು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಬಿ.ಎಸ್. ಶೇಖರ್ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ಸಂಬಂಧ ಏಕಸದಸ್ಯ ಪೀಠ ನೀಡಿದ್ದ ಆದೇಶ ಎತ್ತಿಹಿಡಿದಿರುವ ವಿಭಾಗೀಯ ಪೀಠ, ಮೇಲ್ಮನವಿದಾರ ಬ್ಯಾಂಕ್ 2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತವಾಗುತ್ತದೆಂದು ಸುತ್ತೋಲೆ ಹೊರಡಿಸಿತ್ತೋ ಆ ದಿನಾಂಕದಿಂದಲೇ ಅನ್ವಯವಾಗುವಂತೆ ಶೇಖರ್ ಅವರ ಗೃಹಸಾಲದ ಮೇಲಿನ ಬಡ್ಡಿ ಕಡಿತಗೊಳಿಸಿ ಅದರ ಪ್ರಯೋಜನವನ್ನು ಅವರಿಗೆ ವರ್ಗಾಯಿಸಬೇಕು ಎಂದು ಆದೇಶಿಸಿದೆ.

Also Read
ರೆಸ್ಟೊರಂಟ್ ಸೇವಾ ಶುಲ್ಕ ಸ್ವಯಂಪ್ರೇರಿತವಾಗಿ ಕೊಡುವಂಥದ್ದು, ಗ್ರಾಹಕರ ಮೇಲೆ ಹೇರುವಂತಿಲ್ಲ: ಕೊಲ್ಕತ್ತಾ ಗ್ರಾಹಕ ಆಯೋಗ

ಗ್ರಾಹಕರಿಗೆ ವಿಷಯ ತಲುಪಿಸಬೇಕು

ಈ ಪ್ರಕರಣದಲ್ಲಿ ಬ್ಯಾಂಕ್ ನಿಲುವು ತೃಪ್ತಿಕರವಾಗಿಲ್ಲ. ಬಡ್ಡಿ ದರ ಕಡಿತಗೊಳಿಸಿರುವ ಸುತ್ತೋಲೆಯನ್ನು ಬ್ಯಾಂಕಿನ ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಿದ ಮಾತ್ರಕ್ಕೆ ಅದು ದೊಡ್ಡ ಮಟ್ಟದಲ್ಲಿ ಪ್ರಚಾರವಾಗುವುದಿಲ್ಲ. ಬೋರ್ಡ್‌ನಲ್ಲಿರುವ ಸುತ್ತೋಲೆ ಸಾಕಷ್ಟು ಜನರ ಗಮನಕ್ಕೆ ಬರದೆಯೂ ಇರಬಹುದು. ಆದ್ದರಿಂದ, ಸುತ್ತೋಲೆಯನ್ನು ಗ್ರಾಹಕರಿಗೆ ಖುದ್ದಾಗಿ ತಲುಪಿಸಿದಾಗ ಮಾತ್ರ ಅವರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿದಂತಾಗುತ್ತದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?

ಬಿ.ಎಸ್.ಶೇಖರ್ 2007ರ ೆ.14ರಂದು ರಾಷ್ಟ್ರೀಕೃತ ಬ್ಯಾಂಕ್ ಒಂದರಿಂದ ಶೇ.11.75ರ ಬಡ್ಡಿದರದಲ್ಲಿ ಗೃಹಸಾಲ ಪಡೆದಿದ್ದರು. ಈ ಮಧ್ಯೆ ಬ್ಯಾಂಕ್ 2010ರ ಜು.1ರಿಂದ ಅನ್ವಯವಾಗುವಂತೆ ಬಡ್ಡಿ ದರವನ್ನು ಶೇ.8.25ಕ್ಕೆ ಇಳಿಸಿತ್ತು. ಈ ಬಗ್ಗೆ ಶೇಖರ್‌ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಹಲವು ವರ್ಷಗಳ ಬಳಿಕ ಮಾಹಿತಿ ತಿಳಿದ ಅವರು2017ರ ಜ.24ರಂದು ಬ್ಯಾಂಕಿಗೆ ಅರ್ಜಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು. ಆದರೆ, ಬ್ಯಾಂಕ್ ಶೇಖರ್ ಮನವಿ ಸಲ್ಲಿಸಿದ ದಿನದಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತಗೊಳಿಸಿತ್ತು.

ಇದರಿಂದ, ಶೇಖರ್ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ಆದರೆ, ದೂರನ್ನು ಒಂಬುಡ್ಸ್‌ಮನ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಏಕಸದಸ್ಯ ಪೀಠ, ಬಡ್ಡಿದರ ಕಡಿತಗೊಳಿಸಿ ಸುತ್ತೋಲೆ ಹೊರಡಿಸಿದ ದಿನಾಂಕದಿಂದಲೇ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಬ್ಯಾಂಕ್‌ಗೆ ಆದೇಶಿಸಿತು.

Kannada Bar & Bench
kannada.barandbench.com