Justice Ajay Rastogi and Justice CT Ravikumar 
ಸುದ್ದಿಗಳು

ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೆ ವೈಯಕ್ತಿಕ ಸ್ವಾತಂತ್ರ್ಯವನ್ನು ತಾತ್ಕಾಲಿಕವಾಗಿಯೂ ಕಸಿದುಕೊಳ್ಳುವಂತಿಲ್ಲ: ಸುಪ್ರೀಂ

ಎನ್‌ಡಿಪಿಎಸ್‌ ಕಾಯಿದೆಯಡಿ ವ್ಯಕ್ತಿಯೊಬ್ಬನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸುವುದನ್ನು ರದ್ದುಗೊಳಿಸಿ ಮಣಿಪುರ ಹೈಕೋರ್ಟ್ ನೀಡಿದ್ದ ಆದೇಶವನ್ನು ಪೀಠ ಎತ್ತಿ ಹಿಡಿಯಿತು.

Bar & Bench

ವೈಯಕ್ತಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಸ್ವಾತಂತ್ರ್ಯದ ಹಕ್ಕು ಬಹುಶಃ ಅತ್ಯಂತ ಜತನದಿಂದ ಕಾಪಾಡಿಕೊಂಡಿರುವ ಹಕ್ಕಾಗಿದ್ದು ಕಾನೂನಾತ್ಮಕವಾಗಿ ರೂಪುಗೊಂಡ ಕಾರ್ಯವಿಧಾನ ಪಾಲಿಸದೆ ತಾತ್ಕಾಲಿಕವಾಗಿಯೂ ಸಹ ಅವುಗಳನ್ನು ಕಸಿದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಒತ್ತಿಹೇಳಿದೆ [ಮಣಿಪುರ ಸರ್ಕಾರ ಮತ್ತು ಬಿ ಅಬ್ದುಲ್ ಹನಾನ್ ಇನ್ನಿತರರ ನಡುವಣ ಪ್ರಕರಣ].

ಹಾಗಾಗಿ, ಆರಂಭದಲ್ಲಿಯೇ ಪುರಾವೆಗೆ ಸಂಬಂಧಿಸಿದ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದಿದ್ದಲ್ಲಿ ಬಂಧನ ಆದೇಶ ಕಾನೂನುಬಾಹಿರವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

"... ಪ್ರಾಯಶಃ ಅತ್ಯಂತ ಜತನದಿಂದ ಕಾಯ್ದುಕೊಂಡಿರುವ [ಪ್ರಸ್ತುತ ಪ್ರಕರಣದ ಪ್ರತಿವಾದಿಯ] ವೈಯಕ್ತಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಯಾವುದೇ ರೀತಿಯಲ್ಲಿ ನಿರಂಕುಶವಾಗಿ ಕಾನೂನು ಸೂಚಿಸಿದ ಕಾರ್ಯವಿಧಾನ ಪಾಲಿಸದೆ ತಾತ್ಕಾಲಿಕವಾಗಿ ಕೂಡ ಕಸಿದುಕೊಳ್ಳುವಂತಿಲ್ಲ…” ಎಂದು ಪೀಠ ತಿಳಿಸಿತು. ಪೀಠ ಮಾದಕ ವಸ್ತು ಮತ್ತು ಅಮಲು ಪದಾರ್ಥ ಕಾಯಿದೆಯಡಿ (ಎನ್‌ಡಿಪಿಎಸ್ ಕಾಯಿದೆ) ವ್ಯಕ್ತಿಯೊಬ್ಬನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿರುವುದನ್ನು ರದ್ದುಗೊಳಿಸಿ ಮಣಿಪುರ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಾಲಯ ಈ ಮೂಲಕ ಎತ್ತಿ ಹಿಡಿಯಿತು.

ಸಂಬಂಧಪಟ್ಟ ಅಧಿಕಾರಿಯು ಅರ್ಜಿದಾರರಿಗೆ ಓದಲು ಸೂಕ್ತವಾಗುವಂತಹ ದಾಖಲೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಬಿ ಅಬ್ದುಲ್ ಹನಾನ್ ಅವರನ್ನು ಹೈಕೋರ್ಟ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಅಲ್ಲದೆ ಕಾನೂನಿನ ಗರಿಷ್ಠ ಮಿತಿಯಂತೆ ಅವರನ್ನು ಒಂದು ವರ್ಷಕಾಲ ಅದಾಗಲೇ ಬಂಧನದಲ್ಲಿಡಲಾಗಿದೆ ಎಂದು ಹೈಕೋರ್ಟ್‌ ತಿಳಿಸಿತ್ತು. ಎರಡೂ ಕಡೆಯ ವಾದ ಆಲಿಸಿದ ಸುಪ್ರೀಂ ಕೋರ್ಟ್‌ ಕಡೆಗೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.