Rahul Gandhi, Delhi HC
Rahul Gandhi, Delhi HC 
ಸುದ್ದಿಗಳು

ಬಾಲಕಿ ಅತ್ಯಾಚಾರ: ಗುರುತು ಬಹಿರಂಗಪಡಿಸಿದ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ಹೈಕೋರ್ಟ್‌ಗೆ ಅರ್ಜಿ

Bar & Bench

ದೆಹಲಿಯ ಸ್ಮಶಾನವೊಂದರದಲ್ಲಿ ಅತ್ಯಾಚಾರಕ್ಕೊಳಗಾದ 9 ವರ್ಷದ ದಲಿತ ಬಾಲಕಿಯ ಗುರುತು ಬಹಿರಂಗಪಡಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ರಾಹುಲ್‌ ಗಾಂಧಿ ಅವರು ಮಾಡಿದ್ದ ಟ್ವೀಟ್‌ನಲ್ಲಿ ಮೃತ ಬಾಲಕಿಯ ತಂದೆ ತಾಯಂದಿರ ಪೋಟೊ ಪ್ರಕಟಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಕರಂದ್‌ ಸುರೇಶ್‌ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ಈ ಫೋಟೋಗಳು ಸಂತ್ರಸ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿದ್ದು 2015ರ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 74 ಮತ್ತು 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್ 23 (2) ರ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದೆಹಲಿಯ ಪುರಾನಾ ನಂಗಲ್‌ ಪ್ರದೇಶದ ಸ್ಮಶಾನವೊಂದರಲ್ಲಿದ್ದ ಕೂಲರ್‌ನಿಂದ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿ ಮೇಲೆ ಅರ್ಚಕ ಸೇರಿದಂತೆ ಮೂವರು ಅತ್ಯಾಚಾರ ಎಸಗಿದ್ದರು. ಘಟನೆಯ ಬಳಿಕ ರಾಹುಲ್‌ ಗಾಂಧಿ ಅವರು ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಆಗ ತೆಗೆದ ಫೋಟೊಗಳನ್ನು ರಾಹುಲ್‌ ಗಾಂಧಿ ಅವರ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಟ್ವೀಟ್‌ ಮಾಡಲಾಗಿತ್ತು.

ಆಗಸ್ಟ್ 4ರಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವೀಟ್‌ಗಳನ್ನು ಗಮನಿಸಿದ್ದು ರಾಹುಲ್‌ ಖಾತೆಯ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿತು. ಬಳಿಕ ಟ್ವಿಟರ್‌ ಸಂಸ್ಥೆ ರಾಹುಲ್‌ ಅವರ ಖಾತೆಯನ್ನು ಸ್ಥಗಿತಗೊಳಿಸಿತ್ತು.

ತಮ್ಮ ರಾಜಕೀಯ ಪ್ರತಿಷ್ಠೆ ಹೆಚ್ಚಿಸಲು ರಾಹುಲ್‌ ಅವರು ಈ ದುರ್ಘಟನೆಯ ಲಾಭ ಪಡೆದಿದ್ದಾರೆ. ಇಂತಹ ಅಪರಾಧಕ್ಕೆ ಪೋಕ್ಸೊ ಕಾಯಿದೆಯ ಸೆಕ್ಷನ್ 23 (2) ರ ಅಡಿಯಲ್ಲಿ ಆರು ತಿಂಗಳ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪೋಕ್ಸೊ ಕಾಯಿದೆಯ ಸೆಕ್ಷನ್ 23 (4) ಮತ್ತು ಬಾಲ ನ್ಯಾಯ ಕಾಯಿದೆಯ ಅಡಿಯಲ್ಲಿ ರಾಹುಲ್‌ ವಿರುದ್ಧ ಎಫ್ಐಆರ್ ದಾಖಲಿಸಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕು. ರಾಹುಲ್‌ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಕೀಲರಾದ ಗೌತಮ್‌ ಝಾ, ಪಂಕಜ್‌ ಕುಮಾರ್‌ ಹಾಗೂ ಶ್ವೇತಾ ಝಾ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದಾರೆ.