Arvind Kejriwal, Supreme Court AAP
Arvind Kejriwal, Supreme Court AAP  Facebook
ಸುದ್ದಿಗಳು

ಉದ್ದಿಮೆಗಳಿಗೆ ನೀಡುವ ಉಚಿತ ಕೊಡುಗೆಗಳ ಬಗ್ಗೆ ಬಿಜೆಪಿಯ ನಂಟಿರುವ ಅರ್ಜಿದಾರರು ಪ್ರಸ್ತಾಪಿಸಿಲ್ಲ: ಸುಪ್ರೀಂಗೆ ಎಎಪಿ

Bar & Bench

ಚುನಾವಣೆಗೆ ಮುನ್ನ ಮತದಾರರಿಗೆ ಉಚಿತ ಕೊಡುಗೆ ನೀಡುವುದನ್ನು ತಡೆಯುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಮಧ್ಯಪ್ರವೇಶಿಸಿದೆ.

ಉಚಿತ ಕೊಡುಗೆ ಪ್ರಶ್ನಿಸಿ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಮನವಿ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ ಎಂದು ವಕೀಲ ಶದನ್ ಫರಾಸತ್ ಮೂಲಕ ಸಲ್ಲಿಸಲಾಗಿರುವ ಅರ್ಜಿ ಆಪಾದಿಸಿದೆ.

ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳು ಮತ್ತು ಜನಪ್ರಿಯ ಭರವಸೆಗಳು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ಆಗಾಗ್ಗೆ ಆರ್ಥಿಕ ವಿಪತ್ತುಗಳಿಗೆ ಕಾರಣವಾಗುತ್ತವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಕಳೆದ ಬುಧವಾರ ತಿಳಿಸಿತ್ತು.

ಸರ್ಕಾರದ ಪರ ವಾದ ಮಂಡಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ನೀಡುವ ವಿಚಾರವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪರಿಶೀಲಿಸಬೇಕು. ಇದಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತೇವೆ ಎಂದು ಹೇಳಿದ್ದರು.

ಎಎಪಿ ಆಕ್ಷೇಪಗಳು

  • ಇದು ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿ ಹೊಂದಿದ ಪಕ್ಷಾತೀತ ದಾವೆಯಲ್ಲ. ಅರ್ಜಿದಾರರು ಆಡಳಿತಾರೂಢ ಬಿಜೆಪಿ ಜೊತ ಖುದ್ದು ನಂಟು ಇರಿಸಿಕೊಂಡಿದ್ದು ಪಕ್ಷದ ಆಯಾಕಟ್ಟಿನ ಹುದ್ದೆಯಲ್ಲಿದ್ದವರಾಗಿದ್ದರು. ಪಕ್ಷದ ರಾಜಕೀಯ ಅಜೆಂಡಾಗಳಿಂದ ಪ್ರೇರಿತರಾಗಿ ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಅರ್ಜಿದಾರರು ಈ ಹಿಂದೆ ಸಲ್ಲಿಸಿದ್ದ ಕ್ಷುಲ್ಲಕ ಅರ್ಜಿಗಳು ನ್ಯಾಯಾಲಯದ ಟೀಕೆಗೆ ತುತ್ತಾಗಿದ್ದವು.

  • ಸಮಾಜದ ಪರವಾಗಿರುವ ಕಲ್ಯಾಣ ಕಾರ್ಯಕ್ರಮಗಳಿಗೆ ವಿಶೇಷವಾಗಿ ಹಣ ವಿನಿಯೋಗಿಸಿ ಆರ್ಥಿಕ ಅಭಿವೃದ್ಧಿ ಉಂಟು ಮಾಡುವ ನಿರ್ದಿಷ್ಟ ಮಾದರಿಯ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು ಬಯಸಿದ್ದಾರೆ.

  • ದೊಡ್ಡ ಕೈಗಾರಿಕೆ ಹಾಗೂ ಉದ್ಯಮಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾಡಿಕೆಯಂತೆ ನೀಡುವ ತೆರಿಗೆ ರಿಯಾಯಿತಿ, ಸಬ್ಸಿಡಿ ಹಾಗೂ ಇತರ ಉಚಿತ ಕೊಡುಗೆಗಳಿಂದ ಬೊಕ್ಕಸಕ್ಕೆ ಉಂಟಾಗುವ ಅಪಾರ ಹಣಕಾಸಿನ ನಷ್ಟವನ್ನು ಅರ್ಜಿದಾರರು ನಿರ್ಲಕ್ಷಿಸಿದ್ದಾರೆ. ಬದಲಿಗೆ ಹಿಂದುಳಿದ ಜನಸಾಮಾನ್ಯರಿಂದಾಗಿ ಮಾತ್ರವೇ ದೇಶದ ಹಣಕಾಸಿನ ಸ್ಥಿತಿ ಸುಧಾರಣೆಯಾಗಬೇಕು ಎಂದು ಬಯಸುತ್ತಿದ್ದಾರೆ.

  • ಉಚಿತ ಕೊಡುಗೆಗಳು ಹಾಗೂ ಅದರಿಂದ ದೇಶದ ಹಣಕಾಸಿನ ಸ್ಥಿತಿ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುವ ಮುನ್ನ ರಾಜಕಾರಣಿಗಳು, ಮಂತ್ರಿಗಳು ಮತ್ತು ಸಂಸತ್ತಿನ ಸದಸ್ಯರಿಗೆ ಏನನ್ನು ನೀಡಲಾಗಿದೆ ಎಂಬುದರ ಬಗ್ಗೆ ಮೊದಲು ಚರ್ಚೆಯಾಗಬೇಕು.

  • ದೇಶದೊಳಗಿನ ಸಂಪನ್ಮೂಲ ಸಂರಕ್ಷಿಸಬೇಕೆಂಬ ಕಲ್ಪನೆ ಇದ್ದರೆ ಅದರ ಮೊದಲ ಗುರಿ ಗೌರವಾನ್ವಿತ ಜೀವನ ನಡೆಸಲು ಸಾಂವಿಧಾನಿಕವಾಗಿ ಬೆಂಬಲ ಪಡೆದ ಜನಸಾಮಾನ್ಯರಾಗಿರಬಾರದು.

  • ಆದರೆ ರಾಜಕೀಯ ಮತ್ತು ಆಡಳಿತ ವರ್ಗವು, ಹಿಂದೆ ಮತ್ತು ಈಗಲೂ ಕೂಡ ಪ್ರಭುತ್ವದ ಉದಾರ ದೇಣಿಗೆಗಳ ಫಲಾನುಭವಿಗಳಾಗಿದ್ದು ರಾಷ್ಟ್ರ ಹಾಗೂ ರಾಜ್ಯದ ರಾಜಧಾನಿಗಳ ಹೃದಯ ಭಾಗಗಳಲ್ಲಿ ಉಚಿತ ವಸತಿಗಳನ್ನು ಮಂತ್ರಿಗಳು ಅಥವಾ ನಾಗರಿಕ ಸೇವೆಯ ಸದಸ್ಯರು ಪಡೆದಿದ್ದಾರೆ.

  • ಅರ್ಜಿದಾರ ಉಪಾಧ್ಯಾಯ್‌ ಅವರು ತಮ್ಮ ರಾಜಕೀಯ ಕಾರಣಕ್ಕಾಗಿ ಕೈಗಾರಿಕೆಗಳಿಗೆ ನೀಡಿದ ಆಯ್ದ ಲಾಭಗಳಿಂದಾಗಿ ಪ್ರಭುತ್ವ ಮತ್ತು ಜನ ಅನುಭವಿಸುವ ಭಾರೀ ಹಣಕಾಸಿನ ನಷ್ಟವನ್ನು ಪ್ರಜ್ಞಾಪೂರ್ವಕವಾಗಿ ಹೇಳುತ್ತಿಲ್ಲ. ಉದಾಹರಣೆಗೆ, ಕಳೆದ ಕೆಲವು ವರ್ಷಗಳಲ್ಲಿ, ತೆರಿಗೆಗಳು ಮತ್ತು ಸುಂಕಗಳಿಗೆ ಸಂಬಂಧಿಸಿದ ವಿವಿಧ ನೀತಿಗಳನ್ನು ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಲಾಗಿದೆ.

  • ಇದಲ್ಲದೆ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಗಳಲ್ಲಿ ಅಂತಹ ನೀತಿಗಳನ್ನು ಪ್ರಚಾರ ಮಾಡಬಹುದೇ ಅಥವಾ ಭರವಸೆ ನೀಡಬಹುದೇ ಎಂಬುದನ್ನಷ್ಟೇ ಉಪಾಧ್ಯಾಯ್‌ ಅವರ ಕಾಳಜಿ ಆಧರಿಸಿದೆ. ಅಂತಹ ಉಚಿತ ಕೊಡುಗೆಗಳ ಮೇಲಿನ ವೆಚ್ಚವನ್ನು ಚುನಾಯಿತಗೊಂಡ ಸರ್ಕಾರ ಮಾಡಿದೆಯೇ ಎಂಬುದರ ಬಗ್ಗೆ ಅಲ್ಲ.

  • ಒಮ್ಮೆ ಇದು ಸ್ಪಷ್ಟವಾದರೆ ಉಪಾಧ್ಯಾಯ್‌ ಅವರ ಅರ್ಜಿಯ ಹಣಕಾಸು ಹೊಣೆಗಾರಿಕೆ ಬಗೆಗಿನ ಕಾಳಜಿಯ ಮುಸುಕು ಕಳಚಿಬೀಳುತ್ತದೆ. ಅರ್ಜಿ ರಾಜಕೀಯ ಹಿತಾಸಕ್ತಿಯ ದಾವೆ ಎಂಬುದು ಪಾರದರ್ಶಕವಾಗಿ ಗೋಚರಿಸುತ್ತದೆ.

  • ಜನರಿಗೆ ಉಚಿತ ಕೊಡುಗೆ ನೀಡುವ ಸಮಾಜವಾದಿ, ಕಲ್ಯಾಣ ಕಾರ್ಯಸೂಚಿಯನ್ನು ಚುನಾವಣಾ ಆಶ್ವಾಸನೆಗಳಿಂದ ತೆಗೆದು ಹಾಕಿ ಜಾತಿ ಮತ್ತು ಕೋಮು ಆಧಾರಿತ ಸಂಕುಚಿತ ರಾಜಕೀಯ ಹಿತಾಸಕ್ತಿಗಳನ್ನು ಚುನಾವಣಾ ಭರವಸೆಯಾಗಿ ಮಂಡಿಸಲು ಉಪಾಧ್ಯಾಯ್‌ ಬಯಸುತ್ತಿದ್ದಾರೆ.

  • ಅರ್ಹ ಮತ್ತು ಅಸಹಾಯಕ ಜನರಿಗಾಗಿ ಮೀಸಲಾದ ಸಾಮಾಜಿಕ ಆರ್ಥಿಕ ಕಲ್ಯಾಣವನ್ನುಉಚಿತ ಕೊಡುಗೆ ಎಂದು ಕರೆಯಬಾರದು. ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ಕ್ಯಾಂಟಿನ್‌ ಒದಗಿಸುವುದು, ರಾತ್ರಿ ಆಶ್ರಯ ಮತ್ತು ಮನೆಗಳನ್ನು ಕಟ್ಟಿಕೊಡುವುದು, ಕುಡಿಯುವ ನೀರಿನ ಯೋಜನೆ, ಉಚಿತ ಅಥವಾ ಸಬ್ಸಿಡಿಯಲ್ಲಿ ದೊರೆಯುವ ವಿದ್ಯುತ್‌, ಆರೋಗ್ಯ ಸೇವೆಯಂತಹ ಸವಲತ್ತುಗಳನ್ನು ನೀಡುವುದು ಪ್ರಭುತ್ವದ ಸಾಂವಿಧಾನಿಕ ಜವಾಬ್ದಾರಿಯಾಗಿದೆ.

  • ಈ ಕಾರಣಗಳಿಗಾಗಿ ಉಚಿತ ಕೊಡುಗೆ ಪ್ರಶ್ನಿಸಿರುವ ಉಪಾಧ್ಯಾಯ ಅವರ ಅರ್ಹತೆಯನ್ನು ತಿರಸ್ಕರಿಸಬೇಕು ಮತ್ತು ನ್ಯಾಯಾಲಯ ಪ್ರಕರಣದಲ್ಲಿ ಉಪಾಧ್ಯಾಯ್‌ ಪರವಾಗಿ ಮಧ್ಯಪ್ರವೇಶಿಸಬಾರದು