ರಾಜಕೀಯ ಪಕ್ಷಗಳ ಉಚಿತ ಕೊಡುಗೆಯಿಂದ ಆರ್ಥಿಕ ಅನಾಹುತ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ

ಚುನಾವಣೆ ವೇಳೆ ಮತದಾರರಿಗೆ ಉಚಿತ ಕೊಡುಗೆಗಳ ಆಮಿಷ ಒಡ್ಡುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವಂತೆ ಕೋರಿ ವಕೀಲ ಮತ್ತು ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಮನವಿ ಸಲ್ಲಿಸಿದ್ದರು.
Election
Election

ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳು ಮತ್ತು ಜನಪ್ರಿಯ ಭರವಸೆಗಳು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ಆಗಾಗ್ಗೆ ಆರ್ಥಿಕ ವಿಪತ್ತುಗಳಿಗೆ ಕಾರಣವಾಗುತ್ತವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ನೀಡುವ ವಿಚಾರವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪರಿಶೀಲಿಸಬೇಕು. ಇದಕ್ಕೆ ಸಂಬಂಧೀಸಿದ ಸಲಹೆಗಳನ್ನು ನೀಡುತ್ತೇವೆ ಎಂದು ಹೇಳಿದರು.

ಚುನಾವಣಾ ವೇಳೆ ಮತದಾರರಿಗೆ ಉಚಿತ ಕೊಡುಗೆಗಳ ಆಮಿಷ ಒಡ್ಡುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವಂತೆ ಕೋರಿ ವಕೀಲ ಮತ್ತು ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ವಾದ ಮಂಡಿಸಲಾಗಿದೆ.

"ಅರ್ಜಿದಾರರ ವಾದವನ್ನು ನಾನು ಬೆಂಬಲಿಸುತ್ತೇನೆ. ಇಸಿಐ ಮರುಪರಿಶೀಲನೆ ನಡೆಸಲಿ. ನನ್ನ ಬಲ ಜೇಬಿಗೆ ಏನೋ ಸಿಗುತ್ತಿರುವಂತೆ ಅನ್ನಿಸುತ್ತಿರುತ್ತದೆ. ಆದರೆ ಬಳಿಕ ಅದನ್ನು ಎಡ ಜೇಬಿನಿಂದ ಎಗರಿಸಲಾಗಿರುತ್ತದೆ" ಎಂದು ಎಸ್‌ಜಿ ಮೆಹ್ತಾ ಅವರು ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆ ಹಾಗೂ ವಿಧಿಸುವ ತೆರಿಗೆ ಕುರಿತಂತೆ ಮಾರ್ಮಿಕವಾಗಿ ನುಡಿದರು.

ಇದೊಂದು ಗಂಭೀರ ಆರ್ಥಿಕ ಸಮಸ್ಯೆ ಎಂಬ ಎಸ್‌ಜಿ ಅವರ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ತಲೆದೂಗಿತು.

“ಅಭಿವೃದ್ಧಿಗಾಗಿ ತೆರಿಗೆ ರೂಪದಲ್ಲಿ ಪಾವತಿಸಿದ ಹಣವನ್ನು ಆ ಉದ್ದೇಶಗಳಿಗೆ ಬಳಸುತ್ತಿಲ್ಲ ಎಂಬುದು ಪ್ರತಿಯೊಬ್ಬರ ಭಾವನೆ. ಆದ್ದರಿಂದ ಪ್ರತಿಯೊಬ್ಬರೂ ಸ್ವತಂತ್ರ ವೇದಿಕೆಯನ್ನು ಬಳಸಬೇಕು. ನ್ಯಾಯಾಲಯ ಆ ವೇದಿಕೆಯಾಗಬಾರದು. ಪ್ರತಿಯೊಂದು ರಾಜಕೀಯ ಪಕ್ಷವೂ ಉಚಿತ ಕೊಡುಗೆಗಳ ಪ್ರಯೋಜನ ಪಡೆಯುತ್ತದೆ, ಯಾವುದನ್ನೂ ನಾನು ಹೆಸರಿಸಲು ಬಯಸುವುದಿಲ್ಲ” ಎಂದು ಸಿಜೆಐ ಹೇಳಿದರು.

Also Read
ಉಚಿತ ಕೊಡುಗೆಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವ ಅಧಿಕಾರ ತನಗೆ ಇಲ್ಲ: ಸುಪ್ರೀಂ ಕೋರ್ಟ್‌ಗೆ ಇಸಿಐ

ಆದರೆ ಯಾವುದೇ ಆದೇಶ ನೀಡುವ ಮೊದಲು ವಿರೋಧ ಪಕ್ಷಗಳು, ಭಾರತೀಯ ರಿಸರ್ವ್ ಬ್ಯಾಂಕ್, ನೀತಿ ಆಯೋಗ, ಹಣಕಾಸು ಆಯೋಗ, ಕಾನೂನು ಆಯೋಗ ಮತ್ತು ಚುನಾವಣಾ ಆಯೋಗ ಸೇರಿದಂತೆ ಎಲ್ಲರ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ “ ಎಂದು ಅವರು ಹೇಳಿದರು.

ಆದ್ದರಿಂದ, ಸಮಸ್ಯೆ ಪರಿಶೀಲಿಸಲು ನ್ಯಾಯಾಲಯದ ಉದ್ದೇಶಿತ ಸಮಿತಿ ರಚನೆಯ ಬಗ್ಗೆ ಸಲಹೆಗಳನ್ನು ನೀಡುವಂತೆ ಅದು ಎಲ್ಲಾ ಪಕ್ಷಕಾರರಿಗೆ ನಿರ್ದೇಶಿಸಿತು. ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಕೂಡ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ನ್ಯಾಯಾಲಯ ಕೇಳಿತು. ಈ ಹಿಂದಿನ ವಿಚಾರಣೆ ವೇಳೆ ಕೂಡ ಸಂಸದೀಯಪಟುವಾಗಿ ಸಿಬಲ್‌ ಅವರ ಅನುಭವವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

Also Read
ಉಚಿತ ಕೊಡುಗೆಗಳ ಆಮಿಷ ಒಡ್ಡಿ ಓಟು ಪಡೆಯುವುದು ಗಂಭೀರ ವಿಚಾರ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಇಂದಿನ ವಿಚಾರಣೆ ವೇಳೆ ಸಿಬಲ್‌ "ಇದು ಆರ್ಥಿಕ ಮತ್ತು ರಾಜಕೀಯ ವಿಷಯವಾಗಿದ್ದು ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ಒಪ್ಪಿಸಬಾರದು" ಎಂದು ತಿಳಿಸಿದರು. ಇದಕ್ಕೆ ಎಸ್‌ಜಿ ಮೆಹ್ತಾ ವಿರೋಧ ವ್ಯಕ್ತಪಡಿಸಿದರು.

“ಭಾರತೀಯ ಚುನಾವಣಾ ಆಯೋಗದ ಪಾವಿತ್ರ್ಯತೆಗೆ ಧಕ್ಕೆ ತರಲು ನಾನು ಬಯಸುವುದಿಲ್ಲ. ಸಿಬಲ್‌ ನೀಡಿದ ಸಲಹೆ ಸಮಸ್ಯೆ ಇತ್ಯರ್ಥವಾಗಬಾರದು ಎಂಬಂತಿದೆ. ಇದು ಸಮಸ್ಯೆಯನ್ನು ಬಗೆಹರಿಸದೇ ಉಳಿಸುವ ತಂತ್ರ. ನಾವು ನಮ್ಮ ಸಲಹೆಗಳನ್ನು ನೀಡುತ್ತೇವೆ” ಎಂದರು.

ಚುನಾವಣಾ ಆಯೋಗ ಕ್ರಮ ಕೈಗೊಳ್ಳದೇ ಇದ್ದುದರಿಂದಾಗಿ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ವಿಚಾರಣೆ ನಡೆಸುವಂತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 8 ರಂದು ನಡೆಯಲಿದೆ.

Kannada Bar & Bench
kannada.barandbench.com