Calcutta High Court  
ಸುದ್ದಿಗಳು

ಕಾನೂನು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ: ಸ್ವತಂತ್ರ ತನಿಖೆ ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಮನವಿ

ಜೂನ್ 25ರಂದು ಸೌತ್‌ ಕಲ್ಕತ್ತಾ ಕಾನೂನು ಕಾಲೇಜಿನ ಭದ್ರತಾ ಸಿಬ್ಬಂದಿ ಕೋಣೆಯಲ್ಲಿ ಪ್ರಥಮ ವರ್ಷ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಆರೋಪ ಕೇಳಿಬಂದಿತ್ತು.

Bar & Bench

ಕೊಲ್ಕತ್ತಾದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸಬೇಕೆಂದು ಕೋರಿರುವ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಕಲ್ಕತ್ತಾ ಹೈಕೋರ್ಟ್ ಸೋಮವಾರ ತಿಳಿಸಿದೆ.

ಇಂದು ಕಲಾಪದ ಆರಂಭದಲ್ಲಿ ಕೆಲ ವಕೀಲರು ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಸ್ಮಿತಾ ದಾಸ್ ಡೇ ಅವರಿದ್ದ ವಿಭಾಗೀಯ ಪೀಠವನ್ನು ಕೋರಿದರು. ಆಗ ನ್ಯಾಯಾಲಯವು ಅರ್ಜಿಗಳನ್ನು ಸಲ್ಲಿಸಿ ಅವುಗಳ ಪ್ರತಿಗಳನ್ನು ಪ್ರತಿವಾದಿಗಳಿಗೆ ರವಾನಿಸುವಂತೆ ಸೂಚಿಸಿತು.

ಜೂನ್ 25ರಂದು ಸೌತ್ ಕಲ್ಕತ್ತಾ ಕಾನೂನು ಕಾಲೇಜಿನ ಭದ್ರತಾ ಸಿಬ್ಬಂದಿ ಕೋಣೆಯಲ್ಲಿ ಪ್ರಥಮ ವರ್ಷ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಆರೋಪ ಕೇಳಿಬಂದಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಆಕೆಯ ಹೇಳಿಕೆಗಳನ್ನು ದೃಢಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದರು. ಇಲ್ಲಿಯವರೆಗೆ, ಮನೋಜಿತ್ ಮಿಶ್ರಾ, ಪ್ರಮಿತ್ ಮುಖರ್ಜಿ, ಜೈದ್ ಅಹ್ಮದ್ ಹಾಗೂ ಒಬ್ಬ ಕಾಲೇಜು ಭದ್ರತಾ ಸಿಬ್ಬಂದಿ ಸೇರಿ ನಾಲ್ವರನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ಮಿಶ್ರಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದರೆ, ಉಳಿದ ಇಬ್ಬರು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ವೀಡಿಯೊ  ಚಿತ್ರೀಕರಿಸಿದ್ದರು ಎಂದು ಆರೋಪಿಸಲಾಗಿದೆ. ಮಿಶ್ರಾಗೆ ತೃಣಮೂಲ ಕಾಂಗ್ರೆಸ್‌ನ ಯುವ ಘಟಕದೊಂದಿಗೆ ನಂಟು ಇದೆ ಎನ್ನಲಾಗಿದೆ. ಆರೋಪಿಗಳನ್ನು ಜೂನ್ 27 ರಂದು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತ್ತು.