Arvind Kejriwal and Manish Sisodia  Facebook
ಸುದ್ದಿಗಳು

ಫಾಸಿ ಘರ್ ವಿವಾದ: ಹಕ್ಕುಬಾಧ್ಯತಾ ಸಮಿತಿ ಸಮನ್ಸ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕೇಜ್ರಿವಾಲ್, ಸಿಸೋಡಿಯಾ

ದೆಹಲಿ ವಿಧಾನಸಭೆಯಲ್ಲಿ ಫಾಸಿ ಘರ್ (ಗಲ್ಲು ಶಿಕ್ಷೆ ವಿಧಿಸುತ್ತಿದ್ದ ಕೊಠಡಿ) ನವೀಕರಣದ ಸಂದರ್ಭದಲ್ಲಿ ಹಿಂದಿನ ಎಎಪಿ ಸರ್ಕಾರ ಹಣ ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಮಿತಿ ತನಿಖೆ ನಡೆಸುತ್ತಿದೆ.

Bar & Bench

ದೆಹಲಿ ವಿಧಾನಸಭೆ ಕಟ್ಟಡದೊಳಗಿರುವ ಐತಿಹಾಸಿಕ ʼಫಾಸಿ ಘರ್ʼ (ಗಲ್ಲು ಶಿಕ್ಷೆ ವಿಧಿಸುತ್ತಿದ್ದ ಕೊಠಡಿ) ನವೀಕರಣಕ್ಕಾಗಿ ಸರ್ಕಾರದ ಬೊಕ್ಕಸ ದುರುಪಯೋಗೊಪಡಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿ ತಮಗೆ ಸಮನ್ಸ್‌ ನೀಡಿರುವುದನ್ನು ಪ್ರಶ್ನಿಸಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿ ಹೈಕೋರ್ಟ್‌ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಇಂದು (ಮಂಗಳವಾರ) ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಹಿಂದಿನ ಆಮ್ ಆದ್ಮಿ ಪಕ್ಷದ ಸರ್ಕಾರ ದೆಹಲಿ ವಿಧಾನ ಸಭೆಯ ಕಟ್ಟಡದೊಳಗಿರುವ ಬ್ರಿಟಿಷರ ಕಾಲದ ಫಾಸಿ ಘರ್‌ (ಗಲ್ಲು ಶಿಕ್ಷೆ ವಿಧಿಸುತ್ತಿದ್ದ ಕೊಠಡಿ) ನವೀಕರಿಸಿದ್ದು ವಿವಾದದ ಮೂಲವಾಗಿದೆ. ಇದು ಗಲ್ಲು ಶಿಕ್ಷೆ ವಿಧಿಸುತ್ತಿದ್ದ ಜಾಗ ಎನ್ನುವುದಕ್ಕೆ ಪುರಾವೆ ಇಲ್ಲ. ಐತಿಹಾಸಿಕ ಕೊಠಡಿ ನವೀಕರಣದ ಹೆಸರಿನಲ್ಲಿ ಉಪಾಹಾರ ಕೊಠಡಿ ನವೀಕರಿಸಿ ದುಂದುವೆಚ್ಚ ಮಾಡಲಾಗಿದೆ ಎಂಬುದು ಬಿಜೆಪಿಯ ವಾದವಾಗಿತ್ತು.

ಬಿಜೆಪಿ ಶಾಸಕ ಪ್ರದ್ಯುಮ್ನ ಸಿಂಗ್ ರಜಪೂತ್ ನೇತೃತ್ವದ ಹಕ್ಕುಬಾಧ್ಯತಾ ಸಮಿತಿ ನವೆಂಬರ್ 13ರಂದು ಸಭೆ ಸೇರಿ ಕಟ್ಟಡದ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೇಜ್ರಿವಾಲ್‌ ಹಾಗೂ ಸಿಸೋಡಿಯಾ, ಹಕ್ಕುಬಾಧ್ಯತಾ ಸಮಿತಿಗೆ ಚಾರಿತ್ರಿಕ ಕಟ್ಟಡದ ನೈಜತೆ ಪರಿಶೀಲಿಸುವ ಅಧಿಕಾರವೇ ಇಲ್ಲ. ಹಕ್ಕುಚ್ಯುತಿ ಸಂಬಂಧ ವಿಧಾನಸಭೆಯಲ್ಲಿ ಯಾವುದೇ ಅಧಿಕೃತ ಪ್ರಸ್ತಾವನೆ ಬಂದಿಲ್ಲದೆ ಇರುವುದರಿಂದ ತಮಗೆ ನೀಡಿರುವ ಸಮನ್ಸ್‌ ಕಾನೂನಾತ್ಮಕವಲ್ಲ ಎಂದಿದ್ದಾರೆ.

ವಿಧಾನಸಭೆ ನಿಯಮಾವಳಿ  66, 68, 70, 82, ಅಥವಾ ಅಧ್ಯಾಯ XI ರಡಿ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ. ಹಿಂದಿನ ವಿಧಾನಸಭಾ ಅವಧಿಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಹೊಸ ಅವಧಿಯಲ್ಲಿ ರಚನೆಯಾದ ಸಮಿತಿ ಪರಿಶೀಲಿಸುವಂತಿಲ್ಲ. ಈ ಕ್ರಮ ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಉಲ್ಲಂಘನೆ ಎಂದು ಅವರು ದೂರಿದ್ದಾರೆ.