Kerala High Court and Doctors  
ಸುದ್ದಿಗಳು

ಫಿಸಿಯೋಥೆರಪಿಸ್ಟ್‌, ಆಕ್ಯುಪೇಷನಲ್ ಥೆರಪಿಸ್ಟ್‌ಗಳು ತಮ್ಮ ಹೆಸರಿನ ಮೊದಲು ಡಾಕ್ಟರ್ ಎಂದು ಬಳಸಬಹುದು: ಕೇರಳ ಹೈಕೋರ್ಟ್

ಡಾಕ್ಟರ್ ಪೂರ್ವಪ್ರತ್ಯಯ ಬಳಸುವ ಹಕ್ಕು ವೈದ್ಯಕೀಯ ವೃತ್ತಿಪರರಿಗೆ ಮಾತ್ರ ಸೀಮಿತವಲ್ಲ ಎಂದು ಪೀಠ ತೀರ್ಪು ನೀಡಿದೆ.

Bar & Bench

ಫಿಸಿಯೋ ಥೆರಪಿಸ್ಟ್‌ಗಳು ಮತ್ತು ಆಕ್ಯುಪೇಷನಲ್ ಥೆರಪಿಸ್ಟ್‌ಗಳು ಕೂಡ ಇನ್ನು ಮುಂದೆ ತಮ್ಮ ಹೆಸರಿಗೂ ಮೊದಲು ಡಾಕ್ಟರ್‌ ಎಂಬ ಪೂರ್ವಪ್ರತ್ಯಯ ಬಳಸಬಹುದು ಎಂದು ಕೇರಳ ಹೈಕೋರ್ಟ್‌ ಈಚೆಗೆ ತಿಳಿಸಿದ್ದು ಆಧುನಿಕ ವೈದ್ಯಕೀಯ ವೃತ್ತಿಪರರಷ್ಟೇ ಆ ಪದದ ಮೇಲೆ ಏಕಸ್ವಾಮ್ಯತೆ ಹೊಂದಿದ್ದಾರೆ ಎನ್ನಲಾಗದು ಎಂದಿದೆ [ಇಂಡಿಯನ್ ಅಸೋಸಿಯೇಷನ್ ​​ಆಫ್ ಫಿಸಿಕಲ್ ಮೆಡಿಸಿನ್ ಅಂಡ್ ರಿಹ್ಯಾಬಿಲಿಟೇಶನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಈ ವಿಚಾರವಾಗಿ ಭಾರತೀಯ ವೈದ್ಯಕೀಯ ಸಂಘ ಹಾಗೂ ವಿವಿಧ ವೈದ್ಯರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾ. ವಿ ಜಿ ಅರುಣ್‌ (ಪ್ರಸ್ತುತ ನಿವೃತ್ತರು) ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2021ರ ರಾಷ್ಟ್ರೀಯ ಸಹಾಯಕ ಮತ್ತು ಆರೋಗ್ಯಸೇವಾ ವೃತ್ತಿಪರರ ಆಯೋಗ ಕಾಯಿದೆ (ಎನ್‌ಸಿಎಎಚ್‌ಪಿ ಕಾಯಿದೆ) ಹಾಗೂ ಫಿಸಿಯೋಥೆರಪಿಸ್ಟ್‌ಗಳು ಮತ್ತು ಆಕ್ಯುಪೇಷನಲ್‌ ಥೆರಪಿಸ್ಟ್‌ಗಳಿಗೆ “ಡಾಕ್ಟರ್” ಸ್ಥಾನಮಾನ ನೀಡುವ ಮತ್ತು ʼಡಾ.’ ಪೂರ್ವಪ್ರತ್ಯಯ ಬಳಕೆಗೆ ಅವಕಾಶ ನೀಡುವ ಕೆಲ ಪಠ್ಯಕ್ರಮಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಡಾಕ್ಟರ್‌ ಎಂಬ ಪದ ಮೂಲತಃ ವಿದ್ವಾಂಸರು ಮತ್ತು ಶಿಕ್ಷಕರನ್ನು ಗುರುತಿಸುವ ಪದವಾಗಿದ್ದು ಇಂದಿಗೂ ವೈದ್ಯಕೀಯವಲ್ಲದ ಕ್ಷೇತ್ರಗಳಲ್ಲಿ ಡಾಕ್ಟರೇಟ್ ಪದವಿ ಹೊಂದಿರುವವರು ಅದನ್ನು ಬಳಸುತ್ತಾರೆ. ಪ್ರಸ್ತುತ ವೈದ್ಯಕೀಯ ಕಾಯಿದೆಗಳು ಕೂಡ ವೈದ್ಯಕೀಯ ವೃತ್ತಿಪರರಿಗಷ್ಟೇ ಡಾಕ್ಟರ್‌ ಪದ ಬಳಸುವ ವಿಶೇಷ ಹಕ್ಕು ನೀಡಬೇಕು ಎನ್ನುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಎನ್‌ಸಿಎಚ್‌ಎಪಿ ಕಾಯಿದೆ ಎಂಬುದು ಫಿಸಿಯೋಥೆರಪಿಸ್ಟ್‌ಗಳು ಮತ್ತು ಆಕ್ಯುಪೇಷನಲ್ ಥೆರಪಿಸ್ಟ್‌ಗಳು ಸೇರಿದಂತೆ ಸಹಾಯಕ ಆರೋಗ್ಯ ವೃತ್ತಿಪರರನ್ನು ಅವರ ವಿಶೇಷ ಕ್ಷೇತ್ರಗಳಲ್ಲಿ ಸ್ವತಂತ್ರ ಆರೋಗ್ಯ ಸೇವಾ ಪೂರೈಕೆದಾರರು ಎಂದು ಗುರುತಿಸಲು ರೂಪಿತವಾಗಿದೆ. ಅರ್ಜಿದಾರರು ಹೇಳಿರುವಂತೆ ಎನ್‌ಸಿಎಎಚ್‌ಪಿ ಕಾಯಿದೆ ಮತ್ತು ಎನ್‌ಎಂಸಿ ಕಾಯಿದೆ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಅದು ಹೇಳಿದೆ.

ಎರಡೂ ಕಾಯಿದೆಗಳು ವಿಭಿನ್ನ ಕ್ಷೇತ್ರಗಳಿಗೆ ಅನ್ವಯವಾಗುತ್ತವೆ. ಆದ್ದರಿಂದ, ಫಿಸಿಯೋಥೆರಪಿಸ್ಟ್‌ಗಳು ಮತ್ತು ಆಕ್ಯುಪೇಷನಲ್‌ ಥೆರಪಿಸ್ಟ್‌ಗಳು ತಮ್ಮ ಹೆಸರಿನ ಮುಂದೆ “ಡಾ.” ಎಂಬ ಪೂರ್ವಪ್ರತ್ಯಯ ಬಳಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.