ಲೇಖಕಿ ಅರುಂಧತಿ ರಾಯ್ ಅವರ ಇತ್ತೀಚಿನ ಪುಸ್ತಕ ' ಮದರ್ ಮೇರಿ ಕಮ್ಸ್ ಟು ಮಿ ' ಮುಖಪುಟದಲ್ಲಿ ಕಡ್ಡಾಯ ಆರೋಗ್ಯ ಎಚ್ಚರಿಕೆ ಇಲ್ಲದೆ ಲೇಖಕಿ ಸಿಗರೇಟ್ ಸೇದುತ್ತಿರುವ ಭಾವಚಿತ್ರ ಪ್ರಕಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೆಲ ಗಂಭೀರ ನ್ಯೂನತೆಗಳಿವೆ ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ [ರಾಜಸಿಂಹನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಲೇಖಕರು ಸಿಗರೇಟ್ ಸೇದುತ್ತಿರುವ ಚಿತ್ರ ತಂಬಾಕು ಸೇವನೆಯನ್ನು ಬೌದ್ಧಿಕ ಮತ್ತು ಸೃಜನಶೀಲ ಅಭಿವ್ಯಕ್ತಿಯ ಸಂಕೇತವಾಗಿ ವೈಭವೀಕರಿಸುತ್ತದೆ ಎಂದು ವಕೀಲರಾಗಿರುವ ಅರ್ಜಿದಾರ ರಾಜಸಿಂಹನ್ ಆಕ್ಷೇಪಿಸಿದ್ದರು. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯ ಘೋಷಣೆಯ ಚಿತ್ರವಿಲ್ಲ ಎಂದು ದೂರಲಾಗಿತ್ತು.
ಆದರೆ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ಪೀಠ ಪ್ರಕಾಶಕರು ಪುಸ್ತಕದ ಹಿಂಭಾಗದಲ್ಲಿ ಧೂಮಪಾನದ ಬಗ್ಗೆ ಎಚ್ಚರಿಕೆ ಸಂಬಂಧಿಸಿದ ನಿರಾಕರಣೆಯ ವಾಕ್ಯವನ್ನು ಸೇರಿಸಿದ್ದಾರೆ ಎಂಬುದನ್ನು ಅರ್ಜಿದಾರರು ಹೇಳಿಲ್ಲ ಎಂದರು.
ಅರ್ಜಿದಾರರನ್ನು ಉದ್ದೇಶಿಸಿ ನ್ಯಾಯಾಲಯ " ಇದೇನು ವಕೀಲರೇ? ಕನಿಷ್ಠ ಅಂತಹ ನಿರಾಕರಣೆಯ ಘೋಷಣೆ ಇದೆ ಎಂಬ ಅರ್ಜಿಯನ್ನು ನೀವು ಸಲ್ಲಿಸಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದಾಗ, ಪುಸ್ತಕವನ್ನು ನೋಡಿಲ್ಲ ಎಂದು ಹೇಗೆ ಹೇಳುತ್ತೀರಿ? ಇದು ಯಾವ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ? ನಾವು ದಂಡ ವಿಧಿಸಬೇಕಾದೀತು" ಎಂದು ಮುಖ್ಯ ನ್ಯಾಯಮೂರ್ತಿ ಜಾಮ್ದಾರ್ ಹೇಳಿದರು.
ಪುಸ್ತಕದ ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರತಿ ಅಫಿಡವಿಟ್‌ನಲ್ಲಿ ಮಂಡಿಸಿದ ವಿವರಗಳನ್ನು ಗಮನಿಸಿದ ನ್ಯಾಯಾಲಯ ಎಚ್ಚರಿಕೆಯ ಘೋಷಣೆ ಇರುವುದನ್ನು ಗಮನಿಸಿತು.
ಸೂಕ್ತ ಸಂಶೋಧನೆ ಮಾಡದೆ ಮತ್ತು ಪುಸ್ತಕದ ಹಿಂದಿನ ಮುಖಪುಟದಲ್ಲಿ ಪ್ರಕಾಶಕರು ʼತಂಬಾಕು ಬಳಕೆ ಅನುಮೋದಿಸುವುದಿಲ್ಲʼ ಎಂದು ಹೇಳುವ ಹಕ್ಕು ನಿರಾಕರಣೆ ಗಮನಿಸದೆ ಪಿಐಎಲ್ ಸಲ್ಲಿಸಲಾಗಿದೆ ಎಂದು ಪೆಂಗ್ವಿನ್ ವಾದಿಸಿತ್ತು.
ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಇಂದು ಅರ್ಜಿದಾರರಿಗೆ ತಮ್ಮ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಂದುವರಿಸಲು ಬಯಸುತ್ತೀರಾ ಅಥವಾ ಅವರು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಯನ್ನು ಸಂಪರ್ಕಿಸಲು ಬಯಸುತ್ತೀರಾ ಎಂದು ಕೇಳಿತು.
ಆಗ ಅರ್ಜಿದಾರರ ಪರ ವಕೀಲರು ರಾಜಸಿಂಹನ್ ಅವರು ನಿರಾಕರಣೆಯ ಘೋಷಣೆಯನ್ನು ಗಮನಿಸಲಿಲ್ಲ. ಅದು ಮುಖಪುಟದ ಒಳಗಿನ ಹಿಂಬದಿಯಲ್ಲಷ್ಟೇ ಇದೆ ಎಂದರು.
ಪುಸ್ತಕದ ವಸ್ತುವಿಷಯ ಅಥವಾ ಸಾಹಿತ್ಯದ ಬಗ್ಗೆ ತಮ್ಮ ತಕರಾರು ಇಲ್ಲ. ಅಲ್ಲದೆ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಂದುವರೆಸಲು ಬಯಸುವುದಾಗಿ ತಿಳಿಸಿದರು. ಅಂತೆಯೇ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಿತು.
"ಅರ್ಜಿದಾರರ ವಕೀಲರು ಪ್ರಕರಣವನ್ನು ಅರ್ಹತೆಯ ಆಧಾರದ ಮೇಲೆ ವಾದಿಸಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ. ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 7, 2025ಕ್ಕೆ ಮುಂದೂಡಿದೆ. ಪ್ರತಿವಾದಿಯು ಅರ್ಜಿಯಲ್ಲಿ ದಂಡ ವಿಧಿಸುವಂತೆ ಕೋರಿದ್ದಾರೆ ಎಂದು ಅರ್ಜಿದಾರರಿಗೆ ತಿಳಿಸಲಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.