A1
ಸುದ್ದಿಗಳು

ಮತಾಂತರ ಪ್ರಶ್ನಿಸಿದ್ದ ಪಿಐಎಲ್‌ನಲ್ಲಿ ಅಲ್ಪಸಂಖ್ಯಾತ ಧರ್ಮಗಳ ಅವಹೇಳನ: ಪರಿಶೀಲಿಸಲು ಸೂಚಿಸಿದ ಸುಪ್ರೀಂ ಕೋರ್ಟ್

ಇಂತಹ ಹೇಳಿಕೆಗಳ ಬಗ್ಗೆ ಗಮನ ಹರಿಸುವಂತೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಹಿರಿಯ ನ್ಯಾಯವಾದಿ ಅರವಿಂದ ದಾತಾರ್ ಅವರಿಗೆ ಕಿವಿಮಾತು ಹೇಳಿತು.

Bar & Bench

ಮತಾಂತರ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅಲ್ಪಸಂಖ್ಯಾತ ಧರ್ಮಗಳ ವಿರುದ್ಧದ ಹೇಳಿಕೆಗಳನ್ನು ಪರಿಶೀಲಿಸುವಂತೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಅರವಿಂದ್‌ ದಾತಾರ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ ತಿಳಿಸಿತು [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎಸ್‌ ರವೀಂದ್ರ ಭಟ್ ಅವರಿದ್ದ ಪೀಠ "ಅಂತಹ ಹೇಳಿಕೆಗಳ ಬಗ್ಗೆ ದಾತಾರ್ ಏನು ಹೇಳುತ್ತಾರೆ? ನೀವು ಪ್ರಕರಣದಲ್ಲಿ ಹಾಜರಿರುವುದರಿಂದ ದಯವಿಟ್ಟು ಈ ಹೇಳಿಕೆಗಳನ್ನು ಗಮನಿಸಿ" ಎಂದಿತು.

ಕೆಲ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ಅವರು ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯಲ್ಲಿ ಕೆಲ ಧರ್ಮಗಳ ವಿರುದ್ಧ ಹೇಯ ಆರೋಪ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಕೆಲ ಧರ್ಮಗಳು ಅತ್ಯಾಚಾರಕ್ಕೆ ಪ್ರೋತ್ಸಾಹ ನೀಡುತ್ತವೆ ಎಂದೆಲ್ಲಾ ಆರೋಪಿಸಲಾಗದು. ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ದವೆ ಹೇಳಿದರು. ಇದೇ ವೇಳೆ, ಪ್ರಕರಣದಲ್ಲಿ ತಮ್ಮ ಕಕ್ಷಿದಾರರೊಬ್ಬರನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ದವೆ ಕೋರಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂದು ಹಾಜರಾಗದ ಕಾರಣ ನ್ಯಾಯಾಲಯ ಜನವರಿ 9, 2023ಕ್ಕೆ ಪ್ರಕರಣ ಮುಂದೂಡಿತು.

ಮೋಸದ ಮತ್ತು ದಿಕ್ಕುತಪ್ಪಿಸುವ ಮತಾಂತರ ದೇಶಾದ್ಯಂತ ವ್ಯಾಪಕವಾಗಿದ್ದು ಅದು ಒಡ್ಡುತ್ತಿರುವ ಬೆದರಿಕೆಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಪಿಐಎಲ್‌ ಇದಾಗಿದೆ.

ಸುಪ್ರೀಂ ಕೋರ್ಟ್‌ ಡಿ. 5ರಂದು ನಡೆದಿದ್ದ ವಿಚಾರಣೆ ವೇಳೆ ಔದಾರ್ಯದ ಸೋಗಿನಲ್ಲಿ ನಡೆಯುವ ಮತಾಂತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇಂತಹ ಸಂದರ್ಭಗಳಲ್ಲಿ ಉದಾರತೆಯ ಹಿಂದಿನ ಉದ್ದೇಶ ಪರಿಶೀಲಿಸಬೇಕಾಗುತ್ತದೆ. ದೇಶದಲ್ಲಿರುವವರು ಇಲ್ಲಿನ ಸಂಸ್ಕೃತಿ ಪ್ರಕಾರ ನಡೆದುಕೊಳ್ಳಬೇಕು ಎಂದಿತ್ತು.