Chief Justice N V Anjaria and K V Aravind, Karnataka HC 
ಸುದ್ದಿಗಳು

ರಾಜ್ಯ ಶಿಕ್ಷಣ ನೀತಿ ಆಕ್ಷೇಪಿಸಿ ಪಿಐಎಲ್‌: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Bar & Bench

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ಗಿರೀಶ್ ಭಾರದ್ವಾಜ್ ಹಾಗೂ ಆರ್ ಆನಂದ ಮೂರ್ತಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ನಿರ್ಧರಿಸಿ, ಇದೀಗ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ತೀರ್ಮಾನಿಸಿದೆ. ಈ ಮೂಲಕ  ಯು -ಟರ್ನ್ ತೆಗೆದುಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು.

ಈ ವೇಳೆ ಪೀಠವು ಸರ್ಕಾರಕ್ಕೆ ಈ ಬಗ್ಗೆ ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿತು.

ಆಗ ಶ್ಯಾಮ್‌ ಅವರು “ಒಂದು ರಾಷ್ಟ್ರ ಒಂದು ಶಿಕ್ಷಣ ನೀತಿ ಎನ್ನುವ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈಗ ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಹೀಗಾಗಿ ನಿರ್ಧಾರ ಬದಲಿಸಲಾಗಿದೆ. ಈ ವಿಚಾರವಾಗಿ ಕೇಂದ್ರದ ಆದೇಶ ಪೂರ್ಣ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಪ್ರತಿ ರಾಜ್ಯವೂ ಹಂತ ಹಂತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ ಎಂದು ವಿವರಿಸಿದರು.

ವಾದ ಆಲಿಸಿ ನೋಟಿಸ್‌ ಜಾರಿ ಮಾಡಿದ ಪೀಠವು ವಿಚಾರಣೆಯನ್ನು ಆಗಸ್ಟ್‌ 1ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2020ರಲ್ಲಿ ಹೊಸ ಮತ್ತು ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಂದಿತ್ತು. ಸರ್ಕಾರದ ಆದೇಶ ಅನ್ವಯ 2021 ರ ಆಗಸ್ಟ್‌ 7ರಂದು ರಾಜ್ಯ ವ್ಯಾಪ್ತಿ ಜಾರಿಗೆ ಬಂತು. ಈ ಮಧ್ಯೆ, ಸರ್ಕಾರ ಬದಲಾಗಿದ್ದು, ರಾಜ್ಯ ಶಿಕ್ಷಣ ನೀತಿ ರೂಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿರುವುದಾಗಿ 2023ರ ಅಕ್ಟೋಬರ್‌ 11 ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ರದ್ದುಪಡಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ.