ಭಾರತದ ಮಹಾ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರ (ಸಿಎಜಿ) ಹುದ್ದೆಯ ನೇಮಕಾತಿ ವಿಧಾನ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸರ್ಕಾರೇತರ ಸಂಸ್ಥೆಯಾದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಸಲ್ಲಿಸಿರುವ ಅರ್ಜಿಯು, ಸಿಎಜಿ ಕಚೇರಿ ಸ್ವತಂತ್ರವಾಗಿ ಉಳಿದಿಲ್ಲ ಎಂಬ ಕಳವಳ ವ್ಯಕ್ತಪಡಿಸಿದೆ.
ಸರ್ಕಾರದ ಕಾರ್ಯಾಂಗ ಮತ್ತು ಪ್ರಧಾನ ಮಂತ್ರಿ ನಿರ್ಧಾರ ಆಧರಿಸಿ ಸಿಎಜಿ ನೇಮಕ ಮಾಡುವುದು ಸಂವಿಧಾನದ 14 ನೇ ವಿಧಿಯ (ಸಮಾನತೆ ಮತ್ತು ತಾರತಮ್ಯ ರಹಿತತೆಯ ಹಕ್ಕು) ಉಲ್ಲಂಘನೆಯಾಗಿದ್ದು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಧಾನಿ, ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಜೊತೆ ಸಮಾಲೋಚಿಸಿದ ಬಳಿಕವೇ ಸಿಎಜಿ ನೇಮಕಾತಿ ಮಾಡಬೇಕೆಂದು ಅರ್ಜಿ ಕೋರಿದೆ.
ಸಿಎಜಿ ಆಯ್ಕೆಗೆ ಸಂಬಂಧಿಸಿದ ಎಲ್ಲಾ ವಿವರಗಳು ಮತ್ತು ದಾಖಲೆಗಳನ್ನು ಸಾರ್ವಜನಿಕಗೊಳಿಸಲು ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ. ಮಾಹಿತಿ ಹಕ್ಕು ಕಾಯಿದೆ- 2005 (ಆರ್‌ಟಿಐ ಕಾಯಿದೆ) ಅಡಿಯಲ್ಲಿ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸದಸ್ಯರ ನೇಮಕಾತಿ ವಿಚಾರದಲ್ಲಿಯೂ ಸುಪ್ರೀಂ ಕೋರ್ಟ್ ಇದೇ ರೀತಿಯ ನಿರ್ದೇಶನ ನೀಡಿತ್ತು ಎಂದು ಅರ್ಜಿದಾರರು ಗಮನ ಸೆಳೆದಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ಇಂದು ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿತು. ಕೇಂದ್ರಕ್ಕೆ ನೋಟಿಸ್ ನೀಡಿದ ಅದು ಇದೇ ಬಗೆಯ ಅನುಪಮ್ ಕುಲಶ್ರೇಷ್ಠ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ (2024) ಜೊತೆ ಅರ್ಜಿಯ ಜೊತೆಗೆ ಇದನ್ನು ಸೇರ್ಪಡೆ ಮಾಡಿತು. ಜೊತೆಗೆ ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಸುಳಿವನ್ನೂ ನೀಡಿತು.
ಕೇಂದ್ರ, ರಾಜ್ಯ ಇಲ್ಲವೇ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಆಯ-ವ್ಯಯದ ಲೆಕ್ಕಪರಿಶೋಧನೆಯನ್ನು ಸಿಎಜಿ ಕಚೇರಿ ನಡೆಸುತ್ತದೆ.
ಸಿಎಜಿ ಸಿದ್ಧಪಡಿಸಿದ ವರದಿಗಳನ್ನು ರಾಷ್ಟ್ರಪತಿಗಳಿಗೆ (ಕೇಂದ್ರ ಸರ್ಕಾರದ ಲೆಕ್ಕಪತ್ರಗಳಿಗೆ ಸಂಬಂಧಿಸಿದ್ದರೆ) ಅಥವಾ ರಾಜ್ಯಪಾಲರಿಗೆ (ರಾಜ್ಯದ ಲೆಕ್ಕಪತ್ರಗಳಿಗೆ ಸಂಬಂಧಿಸಿದ್ದರೆ) ಕಳುಹಿಸಲಾಗುತ್ತದೆ, ನಂತರ ಅವುಗಳನ್ನು ಸಂದರ್ಭಾನುಸಾರ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳಲ್ಲಿ ಮಂಡಿಸಲಾಗುತ್ತದೆ.
ಇಂದು ಅರ್ಜಿ ಸಲ್ಲಿಸಿರುವ ಸಿಪಿಐಎಲ್ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಮುಂದೆ ಮಂಡನೆಯಾಗುತ್ತಿರುವ ಸಿಎಜಿ ವರದಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಜೊತೆಗೆ ಸಿಎಜಿ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಿರುವ ಆತಂಕವಿದೆ ಎಂದ ಅವರು ಸಿಬಿಐ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕಾರಿಗಳನ್ನು ನೇಮಕ ಮಾಡುವ ವಿಧಾನದ ಕುರಿತು ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಈ ಹಿಂದೆ ಮಧ್ಯಪ್ರವೇಶಿಸಿತ್ತು. ಸಿಎಜಿ ನೇಮಕಾತಿ ಪ್ರಕರಣದಲ್ಲಿಯೂ ಹಾಗೆಯೇ ಮಾಡಬೇಕು ಎಂದು ಕೋರಿದರು.
ಸಿಎಜಿ ಕಚೇರಿಯ ಸ್ವಾತಂತ್ರ್ಯ ರಕ್ಷಿಸಲು ಉದ್ದೇಶಿಸಲಾದ ಸಾಂವಿಧಾನಿಕ ನಿಬಂಧನೆಗಳು ಈಗಾಗಲೇ ಜಾರಿಯಲ್ಲಿವೆ ಎಂದು ನ್ಯಾಯಾಲಯ ತಿಳಿಸಿತು. ಅಲ್ಲದೆ “ಸಂವಿಧಾನವು ಸಿಎಜಿ ನೇಮಕಾತಿಗೆ ಅನಿಯಂತ್ರಿತ ಅಧಿಕಾರ ನೀಡಿರುವಾಗ ನ್ಯಾಯಾಲಯವು ಎಷ್ಟರ ಮಟ್ಟಿಗೆ ಮಧ್ಯಪ್ರವೇಶಿಸಿ ಅದನ್ನು ತಿದ್ದಲು ಸಾಧ್ಯ?" ಎಂದು ನ್ಯಾಯಮೂರ್ತಿ ಕಾಂತ್ ಕೇಳಿದರು.
ನ್ಯಾಯಾಧೀಶರನ್ನು ನೇಮಕ ಮಾಡುವ ವಿಧಾನವನ್ನು ಸಂವಿಧಾನ ನಿಗದಿಪಡಿಸಿದ್ದರೂ, ಕೊಲಿಜಿಯಂ ಸೃಷ್ಟಿಸುವ ಮೂಲಕ ನೇಮಕಾತಿ ವಿಧಾನ ಮಾರ್ಪಡಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಮಧ್ಯಪ್ರವೇಶಿಸಿತ್ತು ಎಂದು ಭೂಷಣ್ ಈ ವೇಳೆ ನ್ಯಾಯಾಲಯದ ಗಮನಸೆಳೆದರು.
ಸಿಎಜಿ ನೇಮಕದ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಲಾದ ಎರಡು ರೀತಿಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು ಎಂದು ಪೀಠ ಹೇಳಿತು. ಸಿಎಜಿ ಸ್ವಾತಂತ್ರ್ಯದ ಪ್ರಶ್ನೆ ಕುರಿತು ಇನ್ನೂ ತೀರ್ಪು ನೀಡಿಲ್ಲ ಎಂದು ಭೂಷಣ್ ಪ್ರತಿಪಾದಿಸಿದರು. ಇದೇ ರೀತಿ ಸಿಎಜಿ ಸ್ವಾತಂತ್ರ್ಯದ ಕುರಿತು ಪ್ರಶ್ನೆ ಎತ್ತಿರುವ ಅನುಪಮ್ ಕುಲಶ್ರೇಷ್ಠ ಪ್ರಕರಣದ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ ಎಂದು ತಿಳಿಸಿದರು.
ಅಂತಿಮವಾಗಿ ಪ್ರಕರಣವನ್ನು ಮತ್ತಷ್ಟು ಆಲಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್ ಸಿಪಿಐಎಲ್ ಸಲ್ಲಿಸಿರುವ ಅರ್ಜಿಯನ್ನು ಅನುಪಮ್ ಕುಲಶ್ರೇಷ್ಠ ಪ್ರಕರಣದೊಂದಿಗೆ ಸೇರಿಸಿತು.