Maharashtra Politics 
ಸುದ್ದಿಗಳು

ಉದ್ಧವ್ ಸರ್ಕಾರ ಶಿಫಾರಸು ಮಾಡಿದ್ದ ಎಂಎಲ್‌ಸಿಗಳ ಪಟ್ಟಿ ವಾಪಸ್‌: ನಿರ್ಧಾರ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್‌

12 ಎಂಎಲ್ಸಿಗಳ ಪಟ್ಟಿ ಹಿಂತೆಗೆದುಕೊಳ್ಳುವ ಏಕನಾಥ್ ಶಿಂಧೆ ಸಂಪುಟದ ಪ್ರಸ್ತಾವನೆ ಅಂಗೀಕರಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಆದೇಶವನ್ನು ಪಿಐಎಲ್ ಪ್ರಶ್ನಿಸಿದೆ.

Bar & Bench

ವಿಧಾನ ಪರಿಷತ್‌ಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರ ಶಿಫಾರಸು ಮಾಡಿದ್ದ 12 ಸದಸ್ಯರ (ಎಂಎಲ್‌ಸಿ) ಪಟ್ಟಿ ಹಿಂತೆಗೆದುಕೊಳ್ಳುವ ಏಕನಾಥ್ ಶಿಂಧೆ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

12 ಎಂಎಲ್‌ಸಿಗಳನ್ನು ಹಿಂತೆಗೆದುಕೊಳ್ಳುವ ಶಿಂಧೆ ಸಂಪುಟದ ಪ್ರಸ್ತಾವನೆಯನ್ನು ಒಪ್ಪಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಸೆಪ್ಟೆಂಬರ್ 5ರಂದು ಹೊರಡಿಸಿದ್ದ ಆದೇಶವನ್ನು ಸಾಮಾಜಿಕ ಕಾರ್ಯಕರ್ತ ದೀಪಕ್ ಜಗದೇವ್ ಅವರು ವಕೀಲ ನಿತಿನ್ ಸತ್ಪುತೆ ಅವರ ಮೂಲಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಪ್ರಶ್ನಿಸಿದೆ.

ರಾಜ್ಯಪಾಲರ ಕ್ರಮಗಳು ರಾಜಕೀಯ ಪ್ರೇರಿತವಾಗಿವೆ ಎಂದು ಮನವಿಯಲ್ಲಿ ಹೇಳಲಾಗಿದ್ದು, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಾಕಿ ಇರುವಾಗ ಪ್ರಸ್ತುತ ಸರ್ಕಾರದ ಕ್ರಮ ನ್ಯಾಯಯುತವೇ ಎಂದು ಕೇಳಲಾಗಿದೆ.

ಆ ಅರ್ಜಿಗಳಲ್ಲಿ ಉದ್ಭವಿಸಿದ ಕಾನೂನಿನ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು ಅದನ್ನು ಇನ್ನೂ ನ್ಯಾಯಾಲಯ ವಿಚಾರಣೆ ನಡೆಸಬೇಕಿದೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡುವವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮಹಾರಾಷ್ಟ್ರದ ಈಗಿನ ಸರ್ಕಾರ ತಿಳಿಸಿತ್ತು ಎಂಬುದಾಗಿ ಅರ್ಜಿದಾರರು ವಿವರಿಸಿದ್ದಾರೆ.

ಆರಂಭಿಕ ನಿಷ್ಕ್ರಿಯತೆ ನಂತರ ರಾಜ್ಯಪಾಲರು ಕೈಗೊಂಡ ಆತುರದ ಕ್ರಮದಿಂದ ತಾವು ನೊಂದು ಪಿಐಎಲ್‌ ಸಲ್ಲಿಸುತ್ತಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಸೆಪ್ಟೆಂಬರ್ 5, 2022ರಂದು ರಾಜ್ಯಪಾಲರು ನೀಡಿದ್ದ ಪತ್ರವನ್ನು ರದ್ದುಗೊಳಿಸಬೇಕು ಇಲ್ಲವೇ ಬದಿಗೆ ಸರಿಸಬೇಕು. ಹೆಸರು ಹಿಂಪಡೆದ ಸಂಪುಟ ಸಭೆ ನಿರ್ಧಾರ ಕಾನೂನಿನ ಪ್ರಕಾರ ಅಕ್ರಮ ಎಂದು ಘೋಷಿಸಬೇಕು. ಬಾಂಬೆ ಹೈಕೋರ್ಟ್‌ ಆಗಸ್ಟ್ 13, 2021ರಂದು ನೀಡಿದ್ದ ಆದೇಶ ಪಾಲಿಸದಿದ್ದಕ್ಕಾಗಿ ರಾಜ್ಯಪಾಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು. ಶಾಸಕಾಂಗ ಕ್ಷೇತ್ರಕ್ಕೆ ಅತಿಕ್ರಮಿಸಿ ಸಕ್ರಿಯವಾಗಿ ರಾಜ್ಯ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯಪಾಲ ಹುದ್ದೆಯ ಗೌರವಕ್ಕೆ ಕುಂದು ತರದಂತೆ ರಾಜ್ಯಪಾಲರಿಗೆ ಸೂಚಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಹಿನ್ನೆಲೆ

ಸಾಹಿತ್ಯ, ಕಲೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಮಂದಿಯನ್ನು ಎಂಎಲ್‌ಸಿಗಳಾಗಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರ 2020ರ ನವೆಂಬರ್‌ನಲ್ಲಿ ಶಿಫಾರಸು ಮಾಡಿತ್ತು. ಬಳಿಕ ಶಿಫಾರಸು ಕುರಿತಂತೆ ನಿರ್ಧಾರ ಕೈಗೊಳ್ಳಲು ರಾಜ್ಯಪಾಲರಿಗೆ ಸೂಚಿಸಬೇಕು ಎಂದು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆ ಹೆಸರುಗಳನ್ನು ಸೂಕ್ತ ಸಮಯದಲ್ಲಿ ಸ್ವೀಕರಿಸುವುದು ಅಥವಾ ಮರಳಿಸುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ ಎಂದು ಹೈಕೋರ್ಟ್‌ ಕಳೆದ ವರ್ಷ ಹೇಳಿತ್ತು.

ಒಂದು ವರ್ಷದ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯ ಕ್ರಾಂತಿ ಉಂಟಾಗಿ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರದ ಬದಲಿಗೆ ಏಕನಾಥ್‌ ಶಿಂಧೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಬಳಿಕ ಹಿಂದಿನ ಸರ್ಕಾರ ಸಲ್ಲಿಸಿದ್ದ 12 ಹೆಸರುಗಳ ಪಟ್ಟಿ ಹಿಂಪಡೆಯುತ್ತಿರುವುದಾಗಿ ನೂತನ ಸಚಿವ ಸಂಪುಟ ರಾಜ್ಯಪಾಲರಿಗೆ ಪತ್ರ ಬರೆಯಿತು. ರಾಜ್ಯಪಾಲರ ಕಚೇರಿ ಸೆಪ್ಟೆಂಬರ್ 5, 2022ರಂದು ಅದನ್ನು ಒಪ್ಪಿ ಪಟ್ಟಿಯನ್ನು ಮುಖ್ಯಮಂತ್ರಿಯವರಿಗೆ ಹಿಂತಿರುಗಿಸಿತ್ತು.