ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಸಾಂವಿಧಾನಿಕ ಪೀಠ ನಾಡಿದ್ದಿನಿಂದ ವಿಚಾರಣೆ ನಡೆಸಲಿದ್ದು ಅಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ.
Maharashtra Politics
Maharashtra Politics

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಿದೆ.

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರ ರಚನೆ, ಬಂಡಾಯ ಶಾಸಕರ ಅನರ್ಹತೆ ಮತ್ತು ಶಿವಸೇನೆಯ ಬಿಲ್ಲು ಮತ್ತು ಬಾಣದ ಚಿಹ್ನೆ ಯಾರಿಗೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ನೇತೃತ್ವದ ಪೀಠದಲ್ಲಿ ನಡೆಯಿತು.

ಸಾಂವಿಧಾನಿಕ ಪೀಠ ನಾಡಿದ್ದಿನಿಂದ ವಿಚಾರಣೆ ನಡೆಸಲಿದ್ದು ಅಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ.

ಶಾಸಕರನ್ನು ಅನರ್ಹಗೊಳಿಸಲು ಉಪ ಸಭಾಧ್ಯಕ್ಷರಿಗೆ ಇರುವ ಅಧಿಕಾರಕ್ಕೆ ಸಂಬಂಧಿಸಿದಂತೆ ನಬಮ್ ರೆಬಿಯಾ ಮತ್ತು ಉಪ ಸಭಾಪತಿ ನಡುವಣ ಪ್ರಕರಣದ ತೀರ್ಪಿನಲ್ಲಿ ಚರ್ಚಿಸದೆ ಉಳಿದಿರುವ ಅಂಶಗಳ ಬಗ್ಗೆ ಸಾಂವಿಧಾನಿಕ ಪೀಠ ಗಮನಹರಿಸುವ ಅಗತ್ಯವಿದೆ ಎಂದು ಸಿಜೆಐ ಹೇಳಿದರು.

ಉಪಸಭಾಪತಿಯವರನ್ನು ಅನರ್ಹಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಸಂದರ್ಭದಲ್ಲಿ ಉಪಸಭಾಪತಿಯವರು ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿದೆಯೇ ಎನ್ನುವ ಅಂಶವನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಸ್ಪೀಕರ್‌ ಕಾರ್ಯವ್ಯಾಪ್ತಿಯೇನು? ಪಕ್ಷವೊಂದರ ಒಳಗೆ ಬಿರುಕು ಮೂಡಿದ್ದಾಗ ಚುನಾವಣಾ ಆಯೋಗಕ್ಕೆ ಇರುವ ಅಧಿಕಾರ ವ್ಯಾಪ್ತಿಯೇನು? ಎನ್ನುವ ಪ್ರಶ್ನೆಗಳನ್ನು ವಿಸ್ತೃತ ಪೀಠ ನಿರ್ಧರಿಸಬೇಕಿದೆ ಎಂದು ಸಿಜೆಐ ವಿವರಿಸಿದರು.

Also Read
ಮಹಾರಾಷ್ಟ್ರ ರಾಜಕೀಯ: ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಕುರಿತು ನಿರ್ಧರಿಸಲಿರುವ ಸುಪ್ರೀಂ ಕೋರ್ಟ್

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಚುನಾವಣೆ ವೇಳೆ ಮತ ಚಲಾಯಿಸುವಾಗ ಪಕ್ಷದ ವಿಪ್‌ ಉಲ್ಲಂಘಿಸಿದ ಶಿಂಧೆ ಬಣದ ಬಂಡಾಯ ಶಾಸಕರಿಗೆ ಅಂದಿನ ಉಪಸಭಾಪತಿ ಅನರ್ಹತೆಯ ನೋಟಿಸ್‌ ನೀಡಿದ್ದರು. ಇದನ್ನು ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಉಪಸಭಾಧ್ಯಕ್ಷರು ಕಳುಹಿಸಿರುವ ಅನರ್ಹತೆ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಜುಲೈ 12 ರವರೆಗೆ ಕಾಲಾವಕಾಶವನ್ನು ವಿಸ್ತರಿಸುವ ಮೂಲಕ ಶಿಂಧೆ ಮತ್ತು ಅವರ ಬಂಡಾಯ ಶಾಸಕರ ಗುಂಪಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರ ನೀಡಿತ್ತು. ತರುವಾಯ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಕರೆದಿದ್ದ ಬಹುಮತ ಪರೀಕ್ಷೆಗೆ ಕೂಡ ನ್ಯಾಯಾಲಯ ಅನುಮತಿ ನೀಡಿತು.

ಇದರಿಂದ ಉದ್ಧವ್‌ ಠಾಕ್ರೆ ಸರ್ಕಾರ ಪತನವಾಗಿ ಸದನದ ಏಕೈಕ ದೊಡ್ಡ ಪಕ್ಷವಾದ ಬಿಜೆಪಿಯ ಬೆಂಬಲದೊಂದಿಗೆ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮಧ್ಯೆ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ವಿವಿಧ ಅರ್ಜಿಗಳನ್ನು ಸಲ್ಲಿಸಿತು. ಮಹಾರಾಷ್ಟ್ರ ರಾಜ್ಯಪಾಲರು ವಿಶ್ವಾಸಮತ ಪರೀಕ್ಷೆ ನಡೆಸಲು ಅಕ್ರಮವಾಗಿ ಅಧಿವೇಶನ ಕರೆದರು ಎಂದು ದೂರಿರುವ ಅರ್ಜಿಯೂ ಅದರಲ್ಲಿದೆ.

ಅಜಯ್ ಚೌಧರಿ ಮತ್ತು ಸುನೀಲ್ ಪ್ರಭು ಅವರನ್ನು ಕ್ರಮವಾಗಿ ನಾಯಕ ಮತ್ತು ಶಿವಸೇನಾ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ಹುದ್ದೆಯಿಂದ ತೆಗೆದುಹಾಕಿರುವ ನೂತನ ಸ್ಪೀಕರ್ ಅವರ ಕಾನೂನುಬಾಹಿರ ಆದೇಶವನ್ನು ಮತ್ತೊಂದು ಅರ್ಜಿ ಪ್ರಶ್ನಿಸಿದೆ.

ಈ ಮಧ್ಯೆ ಶಿಂಧೆ ಅಥವಾ ಠಾಕ್ರೆ ಬಣದಲ್ಲಿ ಯಾವುದು ನಿಜವಾದ ಶಿವಸೇನೆ ಎಂಬುದನ್ನು ತೀರ್ಮಾನಿಸುವಂತೆ ಶಿಂಧೆ ಬಣ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿತು.

ಆದರೆ ಬಂಡಾಯ ಶಾಸಕರ ಅನರ್ಹತೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತೀರ್ಮಾನಿಸುವವರೆಗೆ ಶಿಂಧೆ ಪಾಳಯದ ಮನವಿ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ತೆಗೆದುಕೊಳ್ಳದಂತೆ ನಿರ್ಬಂಧಿಸಬೇಕು ಎಂದು ಠಾಕ್ರೆ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

Related Stories

No stories found.
Kannada Bar & Bench
kannada.barandbench.com