ಪ್ರತಿಕೂಲ ಆದೇಶ ನೀಡಿದಾಗ ನ್ಯಾಯಾಧೀಶರ ವಿರುದ್ಧ ಆರೋಪ ಮಾಡುವ ಪ್ರವೃತ್ತಿ ಇತ್ತೀಚಿಗೆ ದಾವೆದಾರರಲ್ಲಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಅಭಿಪ್ರಾಯಪಟ್ಟಿದೆ. [ಅನುಪಮ್ ಘೋಷ್ ಮತ್ತು ಫೈಜ್ ಮೊಹಮ್ಮದ್ ಮತ್ತಿತರರ ನಡುವಣ ಪ್ರಕರಣ].
ಅಂತಹ ಪ್ರವೃತ್ತಿಗೆ ಅಸಮ್ಮತಿ ಸೂಚಿಸುತ್ತಾ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ, "ಆದೇಶಗಳು ಬಾಹ್ಯ ಪರಿಗಣನೆಯಿಂದ ಪ್ರಭಾವಿತವಾಗಿವೆ ಎಂಬ ಆರೋಪಗಳು ಕೇಳಿ ಬಂದಾಗ ಅದು ನ್ಯಾಯಾಂಗ ಅಧಿಕಾರಿಗಳ ನೈತಿಕತೆ ಕುಗ್ಗಿಸುತ್ತದೆ" ಎಂದಿತು.
"ಇತ್ತೀಚಿನ ದಿನಗಳಲ್ಲಿ, ದಾವೆದಾರರ ವಿರುದ್ಧ ಆದೇಶ ಜಾರಿಯಾಗಿ ಅದು ಅವರಿಗೆ ಇಷ್ಟವಾಗದಿದ್ದಾಗ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಇಂತಹ ಆರೋಪ ಮಾಡುವ ಪ್ರವೃತ್ತಿ ಇದೆ. ನಾವು ಈ ಅಭ್ಯಾಸವನ್ನು ಒಪ್ಪುವುದಿಲ್ಲ. ಈ ರೀತಿಯ ಪ್ರವೃತ್ತಿ ಮುಂದುವರೆದರೆ, ಅದು ಅಂತಿಮವಾಗಿ ನ್ಯಾಯಾಂಗ ಅಧಿಕಾರಿಯ ಮನೋಸ್ಥೈರ್ಯ ಕುಗ್ಗಿಸುತ್ತದೆ. ವಾಸ್ತವವಾಗಿ, ಇಂತಹ ಆರೋಪ ನ್ಯಾಯಿಕ ಆಡಳಿತಕ್ಕೆ ಅಡ್ಡಿ ಎನ್ನಬಹುದು" ಎಂದು ನ್ಯಾಯಾಲಯ ಹೇಳಿತು.
ಕಾರ್ಯಾದೇಶ ಮನವಿಯ ವಿಚಾರಣೆಯನ್ನು ರಾಜಸ್ಥಾನದ ಧೌಲ್‌ಪುರದಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಉತ್ತರ ಪ್ರದೇಶದ ನೋಯ್ಡಾಕ್ಕೆ ವರ್ಗಾಯಿಸಲು ಕೋರಿದ್ದ ವರ್ಗಾವಣೆ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಇತ್ತೀಚೆಗಷ್ಟೇ ಅಲಾಹಾಬಾದ್ ಹೈಕೋರ್ಟ್ ಕೂಡ ಹೀಗೆ ಅಸಮಾಧಾನ ಸೂಚಿಸಿತ್ತು. ಜನಸಾಮಾನ್ಯರು ನ್ಯಾಯಾಧೀಶರನ್ನು ಧಿಕ್ಕರಿಸುವಂತಹ ಆರೋಪಗಳನ್ನು ಮಾಡಿ ಅವರ ಧೃತಿಗೆಡಿಸುತ್ತಿದ್ದಾರೆ ಎಂದು ಅದು ಹೇಳಿತ್ತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: