ಗ್ರಾಹಕರಿಗೆ ಎಥೆನಾಲ್ ಮುಕ್ತ ಇಂಧನ ಬಳಸುವ ಆಯ್ಜೆ ನೀಡದೆ ಶೇ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ 20) ಬಿಡುಗಡೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ವಕೀಲ ಅಕ್ಷಯ್ ಮಲ್ಹೋತ್ರಾ ಈ ಅರ್ಜಿ ಸಲ್ಲಿಸಿದ್ದು ಏಪ್ರಿಲ್ 2023ಕ್ಕಿಂತ ಮೊದಲು ಭಾರತದಲ್ಲಿ ತಯಾರಾದ ವಾಹನಗಳು ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಹೊಂದಿಕೆಯಾಗುವುದಿಲ್ಲ ಮತ್ತು 2 ವರ್ಷ ಹಳೆಯದಾದ ವಾಹನಗಳು, ಬಿಎಸ್- VI ಮಾನದಂಡಗಳಿಗೆ ಅನುಗುಣವಾಗಿದ್ದರೂ, ಶೇ ಇಪ್ಪತ್ತರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ದೂರಿದ್ದಾರೆ.
ಆಟೋಮೊಬೈಲ್ ತಯಾರಕರು ಮತ್ತು ಸಂಶೋಧನಾ ಸಂಸ್ಥೆಗಳ ವರದಿ ಪ್ರಕಾರ, ಎಥೆನಾಲ್ ಮಿಶ್ರಣದಿಂದ ಎಂಜಿನ್ ಸವೆತ ಉಂಟಾಗುತ್ತದೆ, ಇಂಧನ ದಕ್ಷತೆಕಡಿಮೆ ಆಗುತ್ತದೆ ಹಾಗೂ ವಾಹನಗಳು ಅಕಾಲಿಕವಾಗಿ ಹಾಳಾಗುತ್ತವೆ ಎಂದು ಅರ್ಜಿ ಆಕ್ಷೇಪಿಸಿದೆ.
ಇಂತಹ ಯಾವುದೇ ಹಾನಿಗೆ ವಿಮೆ ಇಲ್ಲವಾದ್ದರಿಂದ ಗ್ರಾಹಕರಿಗೆ ಪರಿಹಾರ ದೊರೆಯದಂತಾಗುತ್ತದೆ ಎಂದು ಅದು ಹೇಳಿದೆ. "ಈ ವಾಹನಗಳು ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಹೊಂದಿಕೆಯಾಗುವುದಿಲ್ಲ, ಇದರಿಂದಾಗಿ ವಾಹನಗಳಿಗೆ ಹಾನಿಯಾಗುತ್ತದೆ. ಗ್ರಾಹಕರು ನಿರ್ದಿಷ್ಟಪಡಿಸಿದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ವಿಚಾರವಾಗಿ ಕೇಳಲಾದ ಪರಿಹಾರವನ್ನು ವಾಹನ ತಯಾರಕರು ಅಥವಾ ವಿಮಾ ಕಂಪನಿಗಳು ಭರಿಸುವುದಿಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಮೆರಿಕದಲ್ಲಿ ಶೇಕಡಾ 10ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಸಲು ಹೇಳಿದ್ದರೂ ಎಥೆನಾಲ್-ಮುಕ್ತ ಪೆಟ್ರೋಲ್ ಸಹ ಲಭ್ಯವಿದೆ. ಐರೋಪ್ಯ ಒಕ್ಕೂಟದಲ್ಲಿ ಶೇಕಡಾ 5 ಮತ್ತು ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣಗೊಂಡಿದೆ ಎಂಬ ಲೇಬಲ್‌ನೊಂದಿಗೆ ಪೂರೈಸಲಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
"ಭಾರತದಲ್ಲಿ, ಗ್ರಾಹಕರ ಗಮನಕ್ಕೆ ತಾರದೆಯೇ, ಇಂಧನ ಮಿಶ್ರಣ ಮಾಡಿರುವ ಯಾವುದೇ ಲೇಬಲ್ ಹಚ್ಚದೆ ಎಥನಾಲ್ ಮಿಶ್ರಿತ ಪೆಟ್ರೋಲಷ್ಟೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದು ಅರ್ಜಿ ಆರೋಪಿಸಿದೆ.
ಎಲ್ಲಾ ಇಂಧನ ಕೇಂದ್ರಗಳಲ್ಲಿ ಎಥೆನಾಲ್-ಮುಕ್ತ ಪೆಟ್ರೋಲ್ ಲಭಿಸುವಂತೆ ಮಾಡಲು ನಿರ್ದೇಶನ ನೀಡಬೇಕು. ಎಥೆನಾಲ್ ಎಷ್ಟು ಪ್ರಮಾಣದಲ್ಲಿ ಮಿಶ್ರಣಗೊಂಡಿದೆ ಎಂಬುದನ್ನು ವಿವರಿಸುವ ಲೇಬಲ್‌ಗಳನ್ನು ಪ್ರದರ್ಶಿಸಬೇಕು. ಗ್ರಾಹಕ ಸಂರಕ್ಷಣಾ ಕಾಯಿದೆಯ ಜಾರಿಯಾಗಬೇಕು ಹಾಗೂ ಎಥೆನಾಲ್ 20 ಬಳಕೆಯಿಂದಾಗಿ ವಾಹನಗಳ ಅವನತಿಗೊಳ್ಳುತ್ತಿರುವ ಬಗ್ಗೆ ರಾಷ್ಟ್ರವ್ಯಾಪಿ ಬೀರಿರುವ ಪರಿಣಾಮವನ್ನು ಅಧ್ಯಯನ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.